ಆರ್‌ಜಿ ಕರ್ ಆಸ್ಪತ್ರೆಯಲ್ಲಿ ತಮ್ಮ ಸಹೋದ್ಯೋಗಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯವನ್ನು ಒತ್ತಾಯಿಸಿ ಕಿರಿಯ ವೈದ್ಯರು ಆಮರಣಾಂತ ಉಪವಾಸವನ್ನು ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದಾದ್ಯಂತ ದುರ್ಗಾಪೂಜೆ ಹಬ್ಬದ ನಡುವೆಯೂ ಗುರುವಾರ ಐದನೇ ದಿನವೂ ಆಮರಣಾಂತ ಉಪವಾಸವನ್ನು ವೈದ್ಯರು ಮುಂದುವರೆಸಿದರು.
ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ಮತ್ತು ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಲವು ದಿನಗಳಿಂದ ವೈದ್ಯರು ಪ್ರತಿಭಟನಾ ಧರಣಿಯನ್ನು ನಡೆಸುತ್ತಿದ್ದಾರೆ. ಶನಿವಾರ ಸಂಜೆಯಿಂದ ಕೋಲ್ಕತ್ತಾದ ಹೃದಯಭಾಗದಲ್ಲಿರುವ ಧರ್ಮತಾಲಾದ ಡೋರಿನಾ ಕ್ರಾಸಿಂಗ್‌ನಲ್ಲಿ ಆಮರಣಾಂತ ಉಪವಾಸವನ್ನು ಪ್ರಾರಂಭಿಸಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರ ಬುಧವಾರ ಸಂಜೆ ಪ್ರತಿಭಟನಾಕಾರರ ಜೊತೆ ಸಭೆ ನಡೆಸಿದ್ದು, ಮಾತುಕತೆ ವಿಫಲವಾಗಿದೆ. ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. “ರಾಜ್ಯವು ಮೌಖಿಕ ಭರವಸೆ ನೀಡಿದೆಯೇ ಹೊರತು ಲಿಖಿತವಾಗಿ ಭರವಸೆಯನ್ನು ನೀಡಿಲ್ಲ” ಎಂದು ಪ್ರತಿಭಟನಾ ನಿರತ ವೈದ್ಯರು ಆರೋಪಿಸಿದ್ದರು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
“ನಮ್ಮ ಸ್ನೇಹಿತರು ನಾಲ್ಕು ದಿನಗಳಿಂದ ಆಹಾರವಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ದುರ್ಗಾ ಪೂಜೆ ನಂತರ ಅಕ್ಟೋಬರ್ ಮೂರನೇ ವಾರದಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಗಮನಹರಿಸುವುದಾಗಿ ಸರ್ಕಾರ ಹೇಳಿದೆ. ಸರ್ಕಾರದ ಅಂತಹ ಅಸೂಕ್ಷ್ಮತೆಯನ್ನು ನಾವು ನಿರೀಕ್ಷಿಸಿರಲಿಲ್ಲ” ಎಂದು ಪಶ್ಚಿಮ ಬಂಗಾಳದ ಕಿರಿಯ ವೈದ್ಯರ ದೇಬಾಶಿಶ್ ಹಲ್ಡರ್ ಹೇಳಿದ್ದಾರೆ.
ಇನ್ನು ಬುಧವಾರ ದುರ್ಗಾಪೂಜೆ ನಡೆಯುತ್ತಿದ್ದ ಕೆಲವು ಪ್ರದೇಶಗಳಲ್ಲಿ ವೈದ್ಯರು ಕರಪತ್ರಗಳನ್ನು ಹಂಚಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ಪ್ರತಿಭಟನಾನಿರತ ಕಿರಿಯ ವೈದ್ಯರು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ ವೈದ್ಯರ ಮುಷ್ಕರ ಅಂತ್ಯ; ಐದರಲ್ಲಿ ಮೂರು ಬೇಡಿಕೆ ಈಡೇರಿಸಲು ಸಿಎಂ ಸಮ್ಮತಿ
ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಲು ಅಸಮರ್ಥರಾದ ಆರೋಗ್ಯ ಕಾರ್ಯದರ್ಶಿ ಎನ್.ಎಸ್.ನಿಗಂ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂಬುದು ಕಿರಿಯ ವೈದ್ಯರ ಆಗ್ರಹವಾಗಿದೆ.
ಜೊತೆಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಹಾಸಿಗೆ ಖಾಲಿ ಇರುವ ಕಡೆಯಲ್ಲೂ ಸಿಸಿಟಿವಿ ಅನುಷ್ಠಾನ, ಆನ್-ಕಾಲ್ ರೂಂ ಮತ್ತು ವಾಶ್‌ರೂಮ್‌ಗಳಲ್ಲಿಯೂ ಮಹಿಳೆಯರಿಗೆ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಕಿರಿಯ ವೈದ್ಯರ ಆಗ್ರಹವಾಗಿದೆ. ಹಾಗೆಯೇ ಉದ್ಯೋಗ ಸ್ಥಳದಲ್ಲಿ ಕಾರ್ಯಪಡೆಗಳ ರಚನೆಯೂ ಕೂಡಾ ಅವರ ಬೇಡಿಕೆಯಾಗಿದೆ.
