ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ಅವರ ಕುರಿತು ಪ್ರಚೋದನಾತ್ಮಕ ಹೇಳಿಕೆ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದ ಉತ್ತರ ಪ್ರದೇಶದ ಅರ್ಚಕ ಯತಿ ನರಸಿಂಹಾನಂದ ಅವರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಯತಿ ನರಸಿಂಹಾನಂದ ವಿರುದ್ಧ ರಾಯಚೂರಿನಲ್ಲೂ ಕೂಡ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ರಾಯಚೂರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಮಾಜ ಸೇವಕ ಬಶೀರುದ್ದೀನ್ ಎಂಬುವವರು ದೂರು ದಾಖಲಿಸಿದ್ದಾರೆ. ಗಾಜಿಯಾಬಾದ್ ಲೋಹಿಯಾ ನಗರದ ನಡೆದಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಹಾಗೂ ಪ್ರವಾದಿಗಳ ಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದರ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ಯತಿ ನರಸಿಂಹಾನಂದ ಸರಸ್ವತಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಯಚೂರು ನಗರದ ಪಶ್ಚಿಮ ಠಾಣೆಯ ಪೊಲೀಸರು, 2000ದ ಐಟಿ ಕಾಯ್ದೆಯ ಸೆಕ್ಷನ್ 67 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿನ ಕಲಂ 152, 96, 197, 299, 302, 351(1), 351(2), 352, 353ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಕನ್ನಡದ ಮೊದಲ ಖಾಸಗಿ ಉಪಗ್ರಹ ವಾಹಿನಿ ‘ಉದಯ ಟಿವಿ’ ಅಧ್ಯಕ್ಷ ಸೆಲ್ವಂ ನಿಧನ
ಸೆ.29ರಂದು ದಸ್ನಾ ದೇಗುಲದಲ್ಲಿ ನಡೆದಿದ್ದ ಕಾರ್ಯಕ್ರವನ್ನುದ್ಧೇಶಿಸಿ ಮಾತನಾಡುವ ವೇಳೆ ಯತಿ ನರಸಿಂಹಾನಂದ ಅವರು, “ನೀವು ದಸರಾ ವೇಳೆ ಪ್ರತಿಕೃತಿ ದಹಿಸುವುದಾದರೆ ಪ್ರವಾದಿ ಮೊಹಮ್ಮದ್ ಅವರ ಪ್ರತಿಕೃತಿ ದಹಿಸಿ” ಎಂದು ಕರೆ ನೀಡಿದ್ದರು. ಅಲ್ಲದೇ, ಈ ಕುರಿತ ವಿಡಿಯೋ ಶನಿವಾರ ವೈರಲ್ ಆದ ಬೆನ್ನಲ್ಲೇ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ನರಸಿಂಹಾನಂದ್ ಅವರ ಈ ಹೇಳಿಕೆಯ ವಿರುದ್ಧ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
