ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡೋಣಿ ಗ್ರಾಮದಿಂದ ಹಾದು ಹೋಗುವ ಹಟ್ಟಿ ಹೊಸೂರು – ರೋಡಲಬಂಡ (ತವಗಾ) ಗ್ರಾಮಕ್ಕೆ ತೆರಳುವ ರಸ್ತೆ ಪೂರ್ತಿ ಹದಗೆಟ್ಟು ಸಂಚಾರಕ್ಕೆ ಅಡೆತಡೆ, ರಸ್ತೆಗೆ ತೆರಳಿದರೆ ವಾಹನಗಳು ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ಉಂಟಾಗುತ್ತಿರುವುದರ ಬಗ್ಗೆ ನೊಂದು ಸಾರ್ವಜನಿಕರು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಡೋಣಿ ಅಡ್ಡ ರಸ್ತೆಯಿಂದ ಹಾದು ಹೋಗುವ ಹಟ್ಟಿ ಹೊಸೂರು – ರೋಡಲಬಂಡಾ (ತವಗ) ಗ್ರಾಮಕ್ಕೆ ಸುಮಾರು ಎಂಟು ವರ್ಷಗಳ ಹಿಂದೆ ರಸ್ತೆ ನಿರ್ಮಾಣ ಮಂಜೂರು ಆಗಿದ್ದು, ಆದರೆ ಇಲ್ಲಿಯವರೆಗೂ ಸಂಪೂರ್ಣವಾದ ರಸ್ತೆ ನಿರ್ಮಾಣ ಕಾಮಗಾರಿ ಮಾಡಿರುವುದಿಲ್ಲ ಎಂದು ಗ್ರಾಮದ ಜನರು ಕಿಡಿಕಾರುತ್ತಿದ್ದಾರೆ.
ರಸ್ತೆಯು ಕೂಡ ಅರೆಬರೆ ಮಾಡಿ ಮಳೆಗೆ ಕೊಚ್ಚಿಕೊಂಡು ಅಸ್ತವ್ಯಸ್ತವಾಗಿದೆ. ಹಟ್ಟಿ ಪಟ್ಟಣದಿಂದ 1 ಕಿ.ಮೀ. ಮತ್ತು ತವಗ ಗ್ರಾಮದಿಂದ 1 ಕಿ.ಮೀ ಕಾಮಗಾರಿ ಮಾಡದೆ ಹಾಗೇ ಉಳಿದಿರುತ್ತದೆ. ಎರಡೂ ಕಡೆ ಬಿಟ್ಟು ಮಧ್ಯದಲ್ಲಿ ರಸ್ತೆ ನಿರ್ಮಾಣ ಮಾಡಿರುತ್ತಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಹಟ್ಟಿಯಿಂದ ಅರ್ಧ ಮಾಡಿದ ರಸ್ತೆಗೆ ತಲುಪಬೇಕೆಂದರೆ ರಸ್ತೆಗಳು ಕೆಸರುಗದ್ದೆಯಂತೆ ಆಗಿರುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ಸಂಚರಿಸಲು ತುಂಬಾ ತೊಂದರೆಯಾಗಿದೆ. ಆದ್ದರಿಂದ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆ ಬಗ್ಗೆ ಮಾತನಾಡಿದ ಗ್ರಾಮಸ್ಥ ಲಿಂಗಪ್ಪ ಹಟ್ಟಿ, ರಸ್ತೆಯು ಅರೆಬರೆ ಮಾಡಿದ್ದಾರೆ. ಕಳಪೆ ಕಾಮಗಾರಿ ಮಾಡಿದ್ದು, ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂಗೆ ಕೆಲಸ ನಿರ್ವಹಿಸಿದ್ದಾರೆ. ಬೇಕಾಬಿಟ್ಟಿ ಕಾಮಗಾರಿ ನಡೆಸಿ, ಸರ್ಕಾರದ ಹಣವನ್ನು ನುಂಗಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಕೇರಳದ ಓಣಂ ಲಾಟರಿಯಲ್ಲಿ ₹25 ಕೋಟಿ ಗೆದ್ದ ಪಾಂಡವಪುರದ ಬೈಕ್ ಮೆಕ್ಯಾನಿಕ್!
ಇದೇ ರಸ್ತೆಯಿಂದ ಶಾಲಾ ಮಕ್ಕಳ ವಾಹನಗಳು ಓಡಾಡುತ್ತವೆ. ಮಾನ್ವಿಯಲ್ಲಿ ಆದಂತಹ ಅಪಘಾತದ ರೀತಿಯ ಘಟನೆ ಸಂಭವಿಸಿದರೆ ಯಾರ ಹೊಣೆ? ಅಪಘಾತ ಸಂಭವಿಸಿದಾಗ ಎಲ್ಲರೂ ಎಚ್ಚೆತ್ತುಗೊಂಡರೆ, ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರೆ ಏನು ಪ್ರಯೋಜನವೇನು ಎಂದು ಪ್ರಶ್ನಿಸಿದರು.
ರಸ್ತೆ ಬಗ್ಗೆ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಗೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರಿಗೂ ಆಗಮಿಸಿದಾಗ ರಸ್ತೆ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
