ತಾನು ದುಡಿದಿದ್ದ ದುಡಿಮೆಯ ಕೂಲಿ ಕೇಳಿದ್ದಕ್ಕಾಗಿ ದಲಿತನ ಮೇಲೆ ಪ್ರಬಲ ಜಾತಿಯ ಮಾಲೀಕ ಹಲ್ಲೆ ನಡೆಸಿ, ಮುಖದ ಮೇಲೆ ಉಗುಳಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನುಷ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಘಟನೆ ನಡೆಸಿದೆ. ದಲಿತ ವ್ಯಕ್ತಿ ರಿಂಕು ಮಾಂಝಿ ಎಂಬಾತನ ಮೇಲೆ ಪ್ರಬಲ ಜಾತಿಯ ಮಾಲೀಕ ರಮೇಶ್ ಪಟೇಲ್, ಸಹೋದರ ಅರುಣ್ ಪಟೇಲ್ ಮತ್ತು ರಮೇಶ್ ಅವರ ಮಗ ಗೌರವ್ ಕುಮಾರ್ ಕ್ರೌರ್ಯ ಮೆರೆದಿದ್ದಾರೆ. ಮುಜಾಫರ್‌ಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ದೂರು ದಾಖಲಿಸಿದ್ದಾರೆ.
“ತನ್ನ ಮೇಲೆ ರಮೇಶ್ ಪಟೇಲ್ ಮತ್ತು ಗೌರವ್ ಕುಮಾರ್ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅರುಣ್ ಪಾಟೇಲ್ ಹಲ್ಲೆ ಮಾಡಿದ್ದಾರೆ” ಎಂದು ಮಾಂಝಿ ತನ್ನ ದೂರಿನಲ್ಲಿ ವಿವರಿಸಿದ್ದಾರೆ. ಘಟನೆಯ ವೀಡಿಯೊವನ್ನೂ ಕೂಡ ಪೊಲೀಸರಿಗೆ ರಿಂಕು ಮಾಂಝಿ ನೀಡಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.