ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಪರಿಣಾಮ, ರೈತರು ಬಿತ್ತನೆ ಮಾಡಿದ್ದ ಬೀಜಗಳೂ ನಾಶವಾಗಿದ್ದು, ಜನಜೀವನವು ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ರಸ್ತೆಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು ನೀರಿನಿಂದ ಆವೃತಗೊಂಡಿವೆ.
ಮಳೆಯ ಅಬ್ಬರದಿಂದ ಬೆಣ್ಣೆ ಹಳ್ಳವು ತುಂಬಿ ಹರಿಯುತ್ತಿದ್ದು, ಹೊಲಗದ್ದೆಗಳಿಗೂ ನೀರು ಆವರಿಸಿಕೊಂಡಿದೆ. ರೈತರು ಬೆಳೆದಿದ್ದ ಬೆಳೆಯೂ ನಾಶವಾಗಿದೆ. ಮಂಗಳವಾರ ಮತ್ತು ಬುಧವಾರ ಸುರಿದ ಧಾರಾಕಾರ ಮಳೆಯಿಂದಾಗಿ ರೈತರು ಬಿತ್ತನೆ ಮಾಡಿದ್ದ ಬೀಜಗಳೂ ನಾಶವಾಗಿವೆ.
ಕಡಲೆ ಬಿತ್ತನೆ ಮಾಡಲು ಒಂದು ಎಕರೆಗೆ ಸುಮಾರು 6ರಿಂದ 7,000 ಸಾವಿರ ರೂ. ಖರ್ಚಾಗುತ್ತದೆ. ಬಿತ್ತನೆ ಮಾಡಿದ ತಕ್ಷಣ ಭೂಮಿಗೆ ಮಳೆ ಬೇಕಿರುವುದಿಲ್ಲ. ನಾಲ್ಕೈದು ದಿನಗಳ ನಂತರ ಮಳೆಯಾದರೆ ಒಳ್ಳೆಯದು. ಒಂದು ವೇಳೆ ಬಿತ್ತನೆ ಮಾಡಿದ ತಕ್ಷಣವೇ ಮಳೆಯಾದರೆ ಬೀಜಗಳು ನಾಶವಾಗುತ್ತದೆ. ಇತ್ತೀಚೆಗೆ ಸುರಿದ ಮಳೆಯ ನೀರು ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಬೀಜಗಳನ್ನು ಕೊಚ್ಚಿಕೊಂಡು ಹೋಗಿದೆ. ಬಿತ್ತನೆ ಮಾಡಿದರವರ ಗತಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ ಆಗಿದೆ. ಮಳೆ ನಿಂತ ನಂತರ ಮತ್ತೆ ಬಿತ್ತನೆ ಮಾಡಬೇಕಾದದ ಅನಿವಾರ್ಯತೆ ಎದುರಾಗಿದೆ. “ನಾವು ಎರಡು ದಿನದ ಹಿಂದೆ ಕಡಲೆ ಬಿತ್ತಿದ್ದೆವು. ನಿರಂತರ ಮಳೆಯಾದ ಕಾರಣ ನಾಶವಾಗಿದೆ. ಅದಕ್ಕೆ ಸರ್ಕಾರ ಪರಿಹಾರವೂ ನಮಗಿಲ್ಲ. ಮಳೆ ಯಾರ ಕೈಯಲ್ಲಿಯು ಇಲ್ಲವೆಂದು ಮುಂದೆ ಸಾಗುವುದು ರೈತನ ಜೀವನವಾಗಿದೆ” ಎಂದು ನವಲಗುಂದ ತಾಲೂಕಿನ ಯುವರೈತ ನಾಗರಾಜ ಕಾಳಿ ಹೇಳುತ್ತಾರೆ.
ಇನ್ನು ಕೆಲವು ಹಳ್ಳಿಗಳಿಗೆ ಸಂಚರಿಸುವ ಮಾರ್ಗಗಳಲ್ಲಿ ಅನೇಕ ಹಳ್ಳಗಳು ಹಾದುಹೋಗುತ್ತವೆ. ಅಂತಹ ಹಳ್ಳಕೊಳ್ಳಗಳು ನೀರಿನಿಂದ ಆವೃತಗೊಂಡರೆ ಮುಗೀತು. ಹೊಳೆಯ ಎರಡೂ ಬದಿಯ ವಾಹನ ಸವಾರರು, ಪಾದಚಾರಿಗಳು, ಶಾಲಾಮಕ್ಕಳು, ಸಾರಿಗೆ ಬಸ್‌ಗಳು ಹಳ್ಳದ ನೀರು ಕಡಿಮೆಯಾಗುವವರೆಗೂ ಸಂಚರಿಸಲು ಸಾಧ್ಯವಿಲ್ಲ. ಈಗ, ಅದೇ ಪರಿಸ್ಥಿತಿ ಎದುರಾಗಿದೆ.

ಕುಂದಗೋಳ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ನೀರಿನಿಂದ ಆವೃತಗೊಂಡಿದೆ. ಕಚೇರಿ ಕೆಲಸಗಳು ಅಸ್ಥವ್ಯಸ್ತವಾಗಿವೆ. ಕಚೇರಿಗೆ ಬರುವವರು ಕಾಂಪೌಂಡ್ ಜಿಗಿದು ಬರುವ ಪರಿಸ್ಥಿತಿ ಸೃಷ್ಠಿಯಾಗಿದೆ. ತಾಲೂಕಿನ ಚಾಕಲಬ್ಬಿ ದೊಡ್ಡ ಹಳ್ಳ ತುಂಬಿ ಹರಿದ ಕಾರಣ ಕೆಲವೊತ್ತು ಸಂಚಾರ ಸ್ಥಗಿತಗೊಂಡಿತ್ತು. ಶಿರೂರು ಗ್ರಾಮದ ಬಳಿಯಿರುವ ಬೆಣ್ಣೆಹಳ್ಳವು ಹರಿದು ಬಂದಿದ್ದು, ಅಕ್ಕಪಕ್ಕದ ಹೊಲಗಳಿಗೂ ನೀರು ಆವರಿಸಿಕೊಂಡು ರೈತರ ಬೆಳೆ ನಾಶವಾಗಿದೆ.
ಮಳೆ ಅಬ್ಬರಿಸುತ್ತಿರುವ ಈ ಸಮಯದಲ್ಲಿ ಬೆಳೆ ನಾಶವಾದ ರೈತರಿಗೆ, ನೀರು ನುಗ್ಗಿದ್ದ ಮನೆಗಳಿಗೆ ಸರ್ಕಾರ ಕೂಡಲೇ ಪರಿಹಾರ ನೀಡಿದರೆ ಒಳ್ಳೆಯದು ಎಂದು ಜಿಲ್ಲೆಯ ಜನರು ಒತ್ತಾಯಿಸುತ್ತಿದ್ದಾರೆ. ಎರಡು ದಿನ ಧಾರಾಕಾರವಾಗಿ ಸುರಿದ ಮಳೆಗೆ ಜನರು ಆತಂಕಗೊಂಡಿದ್ದಾರೆ. ಮತ್ತೆ ಧಾರಾಕಾರ ಮಳೆ ಸುರಿದರೆ, ಪ್ರವಾಹವಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ಮಳೆ ನೀರಿನಿಂದ ಆವೃತಗೊಂಡ ಲೋಕೋಪಯೋಗಿ ಇಲಾಖೆ ಕಚೇರಿ!
ಭಾರತೀಯ ಹವಾಮಾನ ಇಲಾಖೆ ವರದಿಯಂತೆ ವಾಯುಭಾರ ಕುಸಿತದಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹದ ಮುನ್ಸೂಚನೆ ಇದೆ. ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಆದೇಶಿಸಿದ್ದಾರೆ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯ ಎಲ್ಲ ತಾಲೂಕಿನ ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.
