ಬೀಡಾಡಿ ದನಗಳಿಂದ ಪಾದಚಾರಿಗಳು, ಸಾರ್ವಜನಿಕರು, ಆಟೋ ಚಾಲಕರು, ಪ್ರಯಾಣಿಕರು ಹಾಗೂ ಬೈಕ್ ಸವಾರರಿಗೆ ಸಂಕಷ್ಟ ಎದುರಾಗಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾದರೆ ಮಾತ್ರ ಅಧಿಕಾರಿಗಳು ತಮ್ಮ ಜವಾಬ್ದಾರಿ ಕೆಲಸಕ್ಕೆ ಎಚ್ಚೆತ್ತುಕೊಂಡು ಜಾಗೃತರಾಗುತ್ತಾರೆ ಎಂದು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡಗಿ ರೋಡ್, ಚಿಂಚೋಳಿ ಕ್ರಾಸ್ ಹಾಗೂ ಸೇಡಂ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳು ಓಡಾಡುತ್ತವೆ. ಬಸ್ ನಿಲ್ದಾಣದ ಒಳಗೆ ತೆರಳುವ ಮುಖ್ಯ ರಸ್ತೆಯ ಮಧ್ಯದಲ್ಲಿ ಬೀಡಾಡಿ ದನಗಳು ರಸ್ತೆಮೇಲೆ ನಿಂತುಕೊಂಡು ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ಇದನ್ನು ನಿತ್ಯವೂ ಕಾಣುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೋಡಿದರೂ ನೋಡದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ” ಎಂದು ಸಾರ್ವಜನಿಕರು ನಿತ್ಯವೂ ಹಿಡಿಶಾಪ ಹಾಕುತ್ತಿದ್ದಾರೆ.
ಸೇಡಂ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು ಏಳು ಸಿಮೆಂಟ್ ಕಾರ್ಖಾನೆಗಳಿವೆ. ಇದರಿಂದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆಯಲ್ಲಿ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಒಂದೆಯಾದರೆ ಮತ್ತೊಂದೆಡೆ ಬೀಡಾಡಿ ದನಗಳಿಂದ ಬೈಕ್ ಸವಾರರು ಬಿದ್ದು ಕೈಕಾಲುಗಳು ಗಾಯಗೊಂಡಿರುವ ಹಲವು ಉದಾಹರಣೆಗಳಿವೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅರೆಬರೆ ರಸ್ತೆ ಕಾಮಗಾರಿ : ಗ್ರಾಮಸ್ಥರಿಂದ ಆಕ್ರೋಶ; ಅಧಿಕಾರಿಗಳಿಗೆ ಹಿಡಿಶಾಪ
ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಗಂಭೀರ ಗಾಯಗಳಾಗಿ ಸಾವು-ನೋವುಗಳಾದಾಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀಡಾಡಿ ದನಗಳ ತೆರವು ಕಾರ್ಯಾಚರಣೆಗೆ ಮುಂದಾಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ವರದಿ : ಸುನಿಲ್ ರಾಣಿವಾಲ್