ಭಾರತ ಬಾಲ್ಯವಿವಾಹಗಳನ್ನು ನಿಷೇಧಿಸಿದ್ದರೂ ಕೂಡಾ 2022ರಲ್ಲಿ ದೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಗುರುವಾರ ಬಿಡುಗಡೆ ಮಾಡಿದ ಡೇಟಾದ ಪ್ರಕಾರ ಕರ್ನಾಟಕದಲ್ಲೇ ಅಧಿಕ ಬಾಲ್ಯ ವಿವಾಹ ನಡೆದಿದೆ. 2022ರಲ್ಲಿ ಕರ್ನಾಟಕದಲ್ಲಿ 215 ಬಾಲ್ಯ ವಿವಾಹಗಳು ನಡೆದಿವೆ.
ಕರ್ನಾಟಕ ಬಳಿಕ ಎರಡನೇ ಸ್ಥಾನದಲ್ಲಿ ಅಸ್ಸಾಂ ಇದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಅಸ್ಸಾಂನಲ್ಲಿ 163 ಬಾಲ್ಯ ವಿವಾಹಗಳು ನಡೆದಿದೆ. ದೇಶದಲ್ಲಿ ಒಟ್ಟಾರೆಯಾಗಿ 2022ರಲ್ಲಿ 1,002 ವಿವಾಹಗಳು ನಡೆದಿವೆ ಎಂದು ವರದಿ ತಿಳಿಸಿದೆ. ಕರ್ನಾಟಕ ಮತ್ತು ಅಸ್ಸಾಂ ನಂತರದ ಸ್ಥಾನದಲ್ಲಿ ತಮಿಳುನಾಡು ಇದ್ದು ಅಲ್ಲಿ 2022ರಲ್ಲಿ 155 ಬಾಲ್ಯ ವಿವಾಹಗಳು ವರದಿಯಾಗಿವೆ.
ಇದನ್ನು ಓದಿದ್ದೀರಾ? ಬಹುಪತ್ನಿತ್ವ, ಬಾಲ್ಯ ವಿವಾಹ ತ್ಯಜಿಸಿ: ಬಾಂಗ್ಲಾದೇಶಿ ಮುಸ್ಲಿಂಮರಿಗೆ ಅಸ್ಸಾಂ ಸಿಎಂ ಷರತ್ತು
ಪಶ್ಚಿಮ ಬಂಗಾಳ (121), ಮಹಾರಾಷ್ಟ್ರ (99), ತೆಲಂಗಾಣ (53), ಒಡಿಶಾ (46), ಹರಿಯಾಣ (37), ಆಂಧ್ರಪ್ರದೇಶ (26), ಉತ್ತರ ಪ್ರದೇಶ (17), ಬಿಹಾರ (13), ಜಮ್ಮು ಮತ್ತು ಕಾಶ್ಮೀರ (2) ಮತ್ತು ದೆಹಲಿ (1) ನಂತರದ ಸ್ಥಾನಗಳಲ್ಲಿದೆ.
ದೇಶದಲ್ಲಿ 18 ವರ್ಷದೊಳಗಿನ ಅಂದಾಜು 1.5 ಮಿಲಿಯನ್ ಬಾಲಕಿಯರು ವಿವಾಹವಾಗುತ್ತಿದ್ದಾರೆ. 15-19 ವರ್ಷ ವಯಸ್ಸಿನ ಸುಮಾರು ಶೇಕಡ 16ರಷ್ಟು ಬಾಲಕಿಯರು ಪ್ರಸ್ತುತ ವಿವಾಹವಾಗಿದ್ದಾರೆ. 2005-2006 ಮತ್ತು 2015-2016ರ ನಡುವೆ ಬಾಲ್ಯ ವಿವಾಹ ಪ್ರಮಾಣ ಶೇಕಡ 47ರಿಂದ ಶೇಕಡ 27ಕ್ಕೆ ಕಡಿಮೆಯಾದರೂ ಕೂಡಾ ಬಾಲ್ಯ ವಿವಾಹ ಇಂದಿಗೂ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಬಾಲ್ಯ ವಿವಾಹ | ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಳವಳ
ಈ ನಿಟ್ಟಿನಲ್ಲಿ ಶಾಲೆ ಬಿಟ್ಟ, ಶಾಲೆಯಿಂದ ಹೊರಗುಳಿದ ಅಥವಾ ನಿಯಮಿತವಾಗಿ ಶಾಲೆಗೆ ಹಾಜರಾಗದ ಮಕ್ಕಳನ್ನು ಗುರುತಿಸುವಂತೆ ಎನ್‌ಸಿಪಿಸಿಆರ್ ರಾಜ್ಯಗಳಿಗೆ ಹೇಳಿದೆ. ಮಾಹಿತಿಯಿಲ್ಲದೆ ಮಕ್ಕಳು ಗೈರುಹಾಜರಾಗಿರುವ ಶಾಲೆಗಳ ನಕ್ಷೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸುವುದು ಮತ್ತು ಅವರ ಬಾಲ್ಯ ವಿವಾಹಗಳನ್ನು ತಡೆಯುವುದು ಇದರ ಉದ್ದೇಶವಾಗಿದೆ. 280,289 ಗ್ರಾಮಗಳು ಮತ್ತು ಬ್ಲಾಕ್‌ಗಳನ್ನು ಗುರಿಯಾಗಿಟ್ಟುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
