ಬಂದೂಕುದಾರಿಗಳು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, 20 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ.
ಘಟನೆಯು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪ್ರಕ್ಷುಬ್ದ ವಾತಾವರಣವನ್ನು ಸೃಷ್ಠಿಸಿದೆ. ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಭದ್ರತಾ ಶೃಂಗಸಭೆ ನಡೆಯಲಿದ್ದು, ಅದಕ್ಕೂ ಕೆಲವೇ ದಿನಗಳ ಮುನ್ನ ಈ ದಾಳಿ ನಡೆದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ಗುರುವಾರ ತಡರಾತ್ರಿ, ದುಕಿ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿನ ವಸತಿಗೃಹಗಳಿಗೆ ನುಗ್ಗಿದ ಬಂದೂಕುಧಾರಿಗಳು ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹಮಾಯುನ್ ಖಾನ್ ನಾಸಿರ್ ತಿಳಿಸಿದ್ದಾರೆ. ದಾಳಿಯ ಹಿಂದೆ ಇರುವವರನ್ನು ಗುರುತಿಸಿ, ಬಂಧಿಸಲು ಪೊಲೀಸರಿಗೆ ಆದೇಶಿಸಲಾಗಿದೆ.
ದಾಳಿಯ ಬಳಿಕ, ಯಾವುದೇ ಗುಂಪು ದಾಳಿ ಕುರಿತು ಹೇಳಿಕೆಗಳನ್ನು ನೀಡಿದೆ. ಆದಾಗ್ಯೂ, ಕಾನೂನುಬಾಹಿರ ಸಂಘಟನೆಯೆಂದು ಘೋಷಿಸಲಾಗಿರುವ ‘ಬಲೂಚ್ ಲಿಬರೇಶನ್ ಆರ್ಮಿ’ ಈ ದಾಳಿ ನಡೆಸಿರುವ ಸಾಧ್ಯತೆ ಎಂದು ಅನುಮಾನ ವ್ಯಕ್ತವಾಗಿದೆ. ಈ ಗುಂಪು ಸಾಮಾನ್ಯವಾಗಿ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸುತ್ತದೆ.
ಈ ಸಂಘಟನೆ ಈ ಹಿಂದೆಯೂ ಹಲವಾರು ದಾಳಿಗಳನ್ನು ನಡೆಸಿದೆ. ಕಳೆದ ಆಗಸ್ಟ್‌ನಲ್ಲಿ ನಡೆಸಿದ್ದ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರನ್ನು ಕೊಂದಿತ್ತು. ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು 21 ದಾಳಿಕೋರರನ್ನು ಹತ್ಯೆ ಮಾಡಿತ್ತು.
ನಿನ್ನೆ ನಡೆದಿರುವ ದಾಳಿಯ ಬಗ್ಗೆ ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. “ಭಯೋತ್ಪಾದಕರು ಮತ್ತೊಮ್ಮೆ ಬಡ ಕಾರ್ಮಿಕರನ್ನು ಗುರಿಯಾಗಿಸಿದ್ದಾರೆ. ಹತ್ಯೆಗೈದಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ದಾಳಿಕೋರರು ಕ್ರೂರಿಗಳು. ಅವರು ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಅಜೆಂಡಾವನ್ನು ಹೊಂದಿದ್ದಾರೆ. ಅಮಾಯಕ ಕಾರ್ಮಿಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ಬಲೂಚಿಸ್ತಾನ ಈ ಪ್ರಾಂತ್ಯವು ಸ್ವಾತಂತ್ರ್ಯ ದೇಶವನ್ನು ಬಯಸುವ ಹಲವಾರು ಪ್ರತ್ಯೇಕತಾವಾದಿ ಗುಂಪುಗಳಿಗೆ ನೆಲೆಯಾಗಿದೆ. ಪಾಕಿಸ್ತಾನದ ಫೆಡರಲ್ ಸರ್ಕಾರವು ತನ್ನ ಲಾಭಕ್ಕಾಗಿ ತೈಲ ಮತ್ತು ಖನಿಜವನ್ನು ಹೆಚ್ಚಾಗಿ ಹೊಂದಿರುವ ಬಲೂಚಿಸ್ತಾನವನ್ನು ಅನ್ಯಾಯವಾಗಿ ಬಳಸಿಕೊಳ್ಳುತ್ತಿದೆ ಎಂದು ಪ್ರತ್ಯೇಕತಾವಾದಿಗಳು ಆರೋಪಿಸುತ್ತಿದ್ದಾರೆ.