ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ರಾಮನಗರ ಜಿಲ್ಲಾಡಳಿತ ಕಠಿಣ ದೋರಣೆ ತಾಳುತ್ತಿರುವ ಹಿನ್ನೆಲೆಯಲ್ಲಿ, ಮೈಸೂರು ದಸರಾ ಅಂಬಾರಿಯ ದಿನನಂದೇ ರೈತ ಸಂಘ ಹಾಗೂ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ ಎಂದು ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಮಲ್ಲಯ್ಯ ಘೋಷಿಸಿದರು.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರೂ, ರೈತರ ಸಮಸ್ಯೆ ಮತ್ತು ಬೇಡಿಕೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ರೈತನು ದೇಶದ ಅನ್ನದಾತ, ಅವರ ಸಮಸ್ಯೆಗಳನ್ನು ಗಮನಿಸದೇ ಇದ್ದರೆ ರಾಜ್ಯದ ಅಭಿವೃದ್ಧಿಯೇ ಹಾನಿಯಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಮನಗರ ಜಿಲ್ಲಾಧಿಕಾರಿಗಳು ನಮ್ಮ ಹೋರಾಟವನ್ನು ನಿರ್ಲಕ್ಷಿಸಿದ್ದಾರೆ. ನಮ್ಮ ನ್ಯಾಯೋಚಿತ ಬೇಡಿಕೆಗಳಿಗೆ ಬೆಲೆ ಕೊಡದಿದ್ದೇ ಸಾಕಾಗದಂತೆ, ಅವರು ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ. ತದ್ವಿರುದ್ಧ, ರಾಮನಗರ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿಯವರೂ ಕೂಡ ತಮ್ಮ ಮಾತು ಉಳಿಸಿಕೊಳ್ಳದೆ, ರೈತರ ಭಾವನೆಗಳಿಗೆ ತಕ್ಕ ರೀತಿಯಲ್ಲಿ ಬೆಂಬಲ ನೀಡದೆ ಮತ್ತಷ್ಟು ಅವಮಾನ ಮಾಡಿದ್ದಾರೆ” ಎಂದು ಹೇಳಿದರು.
“ಈ ಪರಿ ನಿರ್ಲಕ್ಷ್ಯ ಮತ್ತು ಅವಮಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು, ದಿನಾಂಕ 12-10-24ರಂದು, ಶನಿವಾರ ಮೈಸೂರು ದಸರಾ ಅಂಬಾರಿಯ ದಿನ, ರೈತ ಸಂಘ ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ರಾಮನಗರದ ಐಜೂರು ಸರ್ಕಲ್ ಬಳಿ ಮಾನವ ಸರಪಳಿ ರಚಿಸಿ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. “ಈ ಪ್ರತಿಭಟನೆಯು ಅಧಿಕಾರಿಗಳ ಕಡೆಗೆ ಎಚ್ಚರಿಕೆಯ ಚಾಟಿಯಾಗಿ ಸಾಗಿ, ರೈತರ ಪರಿನೀತಿ ಅರಿಸುವಂತೆ ಮಾಡಬೇಕು,” ಎಂದು ಹೇಳಿದರು.
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, “ರೈತರ ಬೇಡಿಕೆಗಳನ್ನು ಈಡೇರಿಸದಿರುವುದು ಅಕ್ಷಮ್ಯ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ 144 ಸೆಕ್ಷನ್ ಜಾರಿ ಮಾಡಿ ರೈತರ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ, ಈ ಕಠಿಣ ನಿಲುವು ನಮ್ಮ ಹೋರಾಟವನ್ನು ಮತ್ತಷ್ಟು ಬಲಗೊಳಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅರಣ್ಯ ಭೂಮಿ ಉಳಿಸಿ, ಖಾಸಗಿ ವ್ಯಕ್ತಿಗಳ ಹುನ್ನಾರಕ್ಕೆ ಕಡಿವಾಣ ಹಾಕುವಂತೆ ಆಗ್ರಹ
“ಸರ್ಕಾರದ ಸಭೆಗಳಲ್ಲಿ ಕಪ್ಪು ಬಾವುಟ ತೋರಿಸುವ ಮೂಲಕ ನಿರಂತರವಾಗಿ ಪ್ರತಿಕ್ರಿಯೆ ನೀಡಲು ರೈತ ಸಂಘ ಮತ್ತು ಸಮಾನ ಮನಸ್ಕ ಸಂಘಟನೆಗಳು ನಿರ್ಧರಿಸಿವೆ. ದಸರಾ ಹಬ್ಬವು ನಮ್ಮ ಸಂಸ್ಕೃತಿಯ ಸಂಕೇತವಾದರೂ, ರೈತರನ್ನು ಸಂಕಷ್ಟದಲ್ಲಿ ಇಟ್ಟುಕೊಂಡು ಸರ್ಕಾರ ಅದ್ಧೂರಿಯಾಗಿ ಹಬ್ಬ ಆಚರಿಸುವುದು ವ್ಯರ್ಥ” ಎಂದು ಕುಮಾರಸ್ವಾಮಿ ಕಿಡಿಕಾರಿದರು.
ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಅವರು, “ಈ ಪ್ರತಿಭಟನೆಯಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳು, ರೈತರು ಮತ್ತು ಸಾರ್ವಜನಿಕರು ಸಹಕರಿಸಿ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೃಷ್ಣಯ್ಯ, ಕುಮಾರ್, ಶಿವರಾಜು, ಕಿರಣ್ ಕುಮಾರ್, ನಲ್ಲಹಳ್ಳಿ ಶಿವಲಿಂಗು, ರಂಗಪ್ಪ, ತಿಮ್ಮೇಗೌಡ ಮತ್ತು ಕನ್ನಡ ಭಾಸ್ಕರ್ ಇದ್ದರು.