ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಓ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ‘ಬದಲಾವಣೆಯ ಚಿಂತನೆಯನ್ನು ಮರು ಪರಿಶೀಲಿಸೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಅ.12(ನಾಳೆ)ರ ಶನಿವಾರದಂದು ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಆಸಿಫ್ ಡಿ.ಕೆ. ತಿಳಿಸಿದ್ದಾರೆ.
ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಮ್ಮೇಳನವು ಅ.12ರಂದು ಸಂಜೆ 4ಕ್ಕೆ ತೊಕ್ಕೊಟ್ಟು ಯೂನಿಟಿ ಹಾಲ್ ಬಳಿಯಲ್ಲಿರುವ ಮೈದಾನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮಾವೇಶವನ್ನು ಜಮಾಅತೆ ಇಸ್ಲಾಮೀ ಹಿಂದ್ ಕೇರಳ ಉಪಾಧ್ಯಕ್ಷ ವಿ.ಟಿ.ಅಬ್ದುಲ್ಲಾ ಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ರಮೀಝ್ ಇ.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಮುಮ್ತಾಝ್ ಅಲಿ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹಕ್ಕೊತ್ತಾಯ ಸಭೆ
ಅತಿಥಿಗಳಾಗಿ ಕೆಪಿಸಿಸಿ ವಕ್ತಾರ, ಸಾಮಾಜಿಕ ಕಾರ್ಯಕರ್ತರಾದ ನಿಕೇತ್ ರಾಜ್ ಮೌರ್ಯ, ಎಸ್‌ಐಓ ಕರ್ನಾಟಕ ರಾಜ್ಯಾಧ್ಯಕ್ಷ ಝೀಶಾನ್ ಅಖಿಲ್ ಸಿದ್ದೀಕಿ, ಜಮಾಅತೆ ಇಸ್ಲಾಮೀ ಹಿಂದ್ ಕೇರಳ ಮುಖಂಡರಾದ ಸಲೀಂ ಮಂಬಾಡ್, ಜಮಾಅತೆ ಇಸ್ಲಾಮೀ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಮುಹಮ್ಮದ್ ಮುಸ್ತಫಾ, ಸಲ್ವಾನ್, ಮಂಗಳೂರು ನಗರಾಧ್ಯಕ್ಷ ಮುಂಝಿರ್ ಅಹ್ಸನ್, ಸಮ್ಮೇಳನ ಸಂಚಾಲಕ ಹುನೈನ್ ಹುಸೇನ್ ಉಪಸ್ಥಿತರಿದ್ದರು.

