ಉದ್ಯಮಿ ರತನ್ ಟಾಟಾ ಅವರ ನಿಧರನಿಂದ ತೆರವಾಗಿದ್ದ ಟಾಟಾ ಟ್ರಸ್ಟ್‌ನ ಅಧ್ಯಕ್ಷ ಸ್ಥಾನಕ್ಕೆ ಅವರ ಮಲಸಹೋದರ ನೋಯೆಲ್ ನವಲ್ ಟಾಟಾ ಆಯ್ಕೆಯಾಗಿದ್ದಾರೆ. ಟಾಟಾ ಟ್ರಸ್ಟ್‌ಅನ್ನು ನೋಯೆಲ್ ಮುನ್ನಡೆಸಲಿದ್ದಾರೆ.
ಟಾಟಾ ಗ್ರೂಪ್ಸ್ ಉದ್ಯಮದಲ್ಲಿ ನೋಯೆಲ್ ಟಾಟಾ ಅವರು 40 ವರ್ಷಗಳಿಂದ ದುಡಿಯುತ್ತಿದ್ದಾರೆ. ಟಾಟಾ ಸಮೂಹದ ಕಂಪನಿಗಳಾದ ಟ್ರೆಂಟ್, ಟಾಟಾ ಇಂಟರ್ನ್ಯಾಷನಲ್ ಲಿಮಿಟೆಡ್, ವೋಲ್ಟಾಸ್ ಹಾಗೂ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷರೂ ಆಗಿದ್ದಾರೆ. ಅಲ್ಲದೆ, ಟೈಟಾನ್ ಕಂಪನಿ ಲಿಮಿಟೆಡ್, ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಇದೀಗ, ಅವರನ್ನು ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ನೋಯೆಲ್ ಟಾಟಾ ಅವರನ್ನು 2010ರಲ್ಲಿ ಟಾಟಾ ಗ್ರೂಪ್‌ನ ಟಾಟಾ ಇಂಟರ್ನ್ಯಾಷನಲ್ ಲಿಮಿಟೆಡ್‌ಗೆ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿಸಲಾಗಿತ್ತು. ಆಗ ಸಂಸ್ಥೆಯು ವಹಿವಾಟು ಮೌಲ್ಯವು 500 ಮಿಲಿಯನ್ ಡಾಲರ್ ಆಗಿತ್ತು. ಅದನ್ನು 2021ರ ವೇಳೆಗೆ 3 ಶತಕೋಟಿ ಡಾಲರ್‌ಗೆ ಹೆಚ್ಚಿಸಿದ್ದರು.
ನೋಯೆಲ್ ಟಾಟಾ ಅವರು ಬ್ರಿಟನ್‌ನಲ್ಲಿರುವ ಸಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದಾರೆ. INSEADನಲ್ಲಿ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ (IEP) ಕೋರ್ಸ್‌ಅನ್ನು ಪೂರ್ಣಗೊಳಿಸಿದ್ದಾರೆ.