ಉಡುಪಿ ಜಿಲ್ಲೆಯ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಉಮೇಶ ನಾಯ್ಕ ಎಂಬಾತ ಸೋಷಿಯಲ್ ಮೀಡಿಯಾದಲ್ಲಿ ಅಂಬೇಡ್ಕರ್, ದಲಿತರಿಗೆ ಅವಮಾನಿಸಿ ವಾಯ್ಸ್ ಮೆಸೇಜೊಂದನ್ನು ಹರಿಯಬಿಟ್ಟಿದ್ದು, ದಲಿತ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ.
ನವೆಂಬರ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಕರಾವಳಿ ಮರಾಠಿ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಮುದ್ರಿಸಲಾಗಿದೆ. ಇದನ್ನೇ ನೆಪವಾಗಿರಿಸಿಕೊಂಡು, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಉಮೇಶ ನಾಯ್ಕ ಅಂಬೇಡ್ಕರ್, ದಲಿತರಿಗೆ ಅವಮಾನಿಸಿ ವಾಯ್ಸ್ ಮೆಸೇಜ್ ರವಾನಿಸಿರುವುದಾಗಿ ವರದಿಯಾಗಿದೆ.
ಹರಿಯ ಬಿಟ್ಟಿರುವ ಸಂದೇಶದಲ್ಲಿ, “ಮರಾಠಿಗರು ದಲಿತರಲ್ಲ. ಆಮಂತ್ರಣ ಪತ್ರಿಕೆಯಲ್ಲಿರುವ ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಶಿವಾಜಿಯ ಫೋಟೋ ಹಾಕಬೇಕು. ದಲಿತರು ದನದ ಮತ್ತು ಕೋಣದ ಮಾಂಸ ತಿನ್ನುವವರು. ಸ್ಮಶಾನದಲ್ಲಿ ಮಲಗುವವರು. ಅಂಬೇಡ್ಕರ್ ನಿಮ್ಮ ಅಪ್ಪನೇ? ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಶಿವಾಜಿಯ ಫೋಟೋ ಹಾಕಬೇಕು. ಹಾಕದಿದ್ದಲ್ಲಿ ಕರಾವಳಿ ಮರಾಠಿ ಸಮಾವೇಶಕ್ಕೆ ಬಹಿಷ್ಕಾರ ಹಾಕುತ್ತೇವೆ” ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂಬೇಡ್ಕರ್, ದಲಿತರಿಗೆ ಅವಮಾನಿಸಿರುವ ಸಂಘಪರಿವಾರದ ಮುಖಂಡ ಉಮೇಶ ನಾಯ್ಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆದರಿಕೆ, ಸುಳ್ಳು ಆರೋಪ: ಎಚ್ಡಿಕೆ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು
ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, “ಸಂವಿಧಾನ ಜಾರಿಯಾದಾಗಿನಿಂದಲೂ ಈ ಸಮಾಜದಲ್ಲಿ ಸ್ಫರ್ಶ್ಯ ಜನಾಂಗವಾದ ಮರಾಠಿ ಸಮುದಾಯದವರು ಅಸ್ಪೃಶ್ಯ ಸಮುದಾಯದ ಮೀಸಲಾತಿಯನ್ನು ಅನುಭವಿಸುತ್ತಾ ಬಂದಿದ್ದಾರೆ. ನಿಜವಾದ ಅಸ್ಪೃಶ್ಯರಾದ ಕೊರಗ ಸಮುದಾಯದೊಂದಿಗೆ ಸಮಾನವಾಗಿ ಶೆಡ್ಯೂಲ್ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮರಾಠಿ ಜನಾಂಗದವರು ಕೊರಗರಿಗೆ ನಿಜವಾಗಿಯೂ ದಕ್ಕಬೇಕಾಗಿರುವ ಮೀಸಲಾತಿಯನ್ನು ಸಂಪೂರ್ಣ ಕಬಳಿಸಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.

“ಈಗ ಮರಾಠಿ ಸಮುದಾಯದ ಮುಖಂಡನೊರ್ವ ಸ್ವತಃ ನಾವು ದಲಿತರಲ್ಲ, ನಮಗೂ ಅಂಬೇಡ್ಕರ್ಗೂ ಯಾವುದೇ ಸಂಬಂಧ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ಇಡೀ ಮರಾಠಿ ಸಮುದಾಯದವರಿಗೆ ಅಂಬೇಡ್ಕರ್ ಅವರನ್ನು ತಿರಸ್ಕರಿಸುವಂತೆ ಕರೆ ನೀಡಿದ್ದು, ಇದು ಮರಾಠಿ ಸಮುದಾಯದವರು ಅಸ್ಫಶ್ಯರಲ್ಲ ಎಂಬುದನ್ನು ಸಾಬೀತುಪಡಿಸಿದೆ. ಆದ್ದರಿಂದ ಈ ಕೂಡಲೇ ಅಂಬೇಡ್ಕರ್ ಕಲ್ಪಿಸಿಕೊಟ್ಟ ಮೀಸಲಾತಿ ಪಟ್ಟಿಯಿಂದ ಮರಾಠಿ ಸಮುದಾಯವನ್ನು ಕೈ ಬಿಡಬೇಕು” ಎಂದು ಆಗ್ರಹಿಸಿದ್ದಾರೆ.

ಸಾರ್ವಜನಿಕವಾಗಿ ರಾಷ್ಟ್ರ ನಾಯಕ, ವಿಶ್ವರತ್ನ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಮತ್ತು ದಲಿತರು ದನದ, ಕೋಣದ ಮಾಂಸ ತಿಂದು ಸ್ಮಶಾನದಲ್ಲಿ ಮಲಗುವವರು ಎಂದು ಸಾರ್ವಜನಿಕವಾಗಿ ನಿಂದನೆ ಮಾಡಿದ ಉಮೇಶ ನಾಯ್ಕನನ್ನು ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
