“ಅಂದಿನ ನಮ್ಮ ಶೋನಲ್ಲಿ ಹೊಂಡ ಎನ್ನುವ ಶಬ್ದ ಅತಿಯಾದ ಧ್ವನಿವರ್ಧಕ ಅಥವಾ ಸಭಾಂಗಣದ ಅತಿಯಾದ ಶಬ್ದದಿಂದ ಅಪಾರ್ಥವಾಗಿ ಬಿಂಬಿತವಾಗಿದೆ. ನಮ್ಮ ಉದ್ದೇಶ ಎಲ್ಲರನ್ನೂ ನಗಿಸುವುದಷ್ಟೇ. ಯಾರನ್ನೂ ನೋಯಿಸುವುದಲ್ಲ. ಸರಿಯಾಗಿ ಕೇಳದೆ ಸಮುದಾಯಕ್ಕೆ ಅವಮಾನವಾಗಿದೆ ಎಂಬಂತೆ ಬಿಂಬಿಸಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ಬಳಕೆಯಾದ ಶಬ್ದವೇ ಬೇರೆ ಇದೆ” ಎಂದು ಹಾಸ್ಯನಟ ಹುಲಿ ಕಾರ್ತಿಕ್ ಭೋವಿಪೀಠದ ಸಿದ್ದರಾಮೇಶ್ವರ ಶ್ರೀಗಳಿಗೆ ಖಚಿತಪಡಿಸಿದರು.
ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋ ಒಂದರಲ್ಲಿ ಭೋವಿ ಸಮುದಾಯಕ್ಕೆ ಅವಮಾನ ಆಗುವಂತೆ ಮಾತನಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾದ ಹಿನ್ನೆಲೆಯಲ್ಲಿ ಹಾಸ್ಯನಟ ಹುಲಿ ಕಾರ್ತಿಕ್, ಶಿವು, ನಂದೀಶ್ ಮತ್ತಿತರರು ಚಿತ್ರದುರ್ಗ ಸಮೀಪದ ಭೋವಿ ಗುರುಪೀಠಕ್ಕೆ ಆಗಮಿಸಿ, ಪೀಠದ ಶ್ರೀಗಳನ್ನು ಭೇಟಿಯಾಗಿ ಈ ಕುರಿತಂತೆ ಮಾಹಿತಿ ನೀಡಿ ಮಾತುಕತೆ ನಡೆಸಿದರು.

ಭೋವಿ ಜನಾಂಗಕ್ಕೆ ಯಾವಾಗಲೂ ನೋವಾಗುವಂತೆ ಮಾತನಾಡಿಲ್ಲ. ಒಂದು ವೇಳೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಾವೆಲ್ಲ ಬಡವರ ಮಕ್ಕಳಾಗಿದ್ದು, ಈಗ ಕಷ್ಟಪಟ್ಟು ಸ್ವಲ್ಪ ಸ್ವಲ್ಪವೇ ಮೇಲೆ ಬರುತ್ತಿದ್ದೇವೆ. ಈಗ ತಾನೆ ಅವಕಾಶಗಳು ಒಂದೊಂದಾಗಿ ಬರುತ್ತಿವೆ. ಇಂಥ ಹೊತ್ತಿನಲ್ಲಿ ದೂರು ದಾಖಲಾಗಿರುವುದು ಕಷ್ಟವಾಗುತ್ತಿದೆ ಎಂದು ನಟ ಹುಲಿ ಕಾರ್ತಿಕ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮೇಶ್ವರ ಶ್ರೀಗಳು, ಕಲಾವಿದರಲ್ಲಿ ಜಾತಿ ಧರ್ಮ ಭೇದವಿಲ್ಲ. ಎಲ್ಲರನ್ನೂ ಒಂದೇ ರೀತಿ ನೋಡಲಾಗುತ್ತದೆ. ಬಡವರ ಮಕ್ಕಳು ಕಷ್ಟಪಟ್ಟು ಬೆಳೆಯುತ್ತಿದ್ದಾರೆ. ಬಡವರ ಮಕ್ಕಳು ಬೆಳೆಯಬೇಕು. ವಡ್ಡ ಎನ್ನುವ ಶಬ್ದ ಪ್ರಯೋಗವಾಗಿದೆ ಎಂದು ನಮ್ಮ ಸಮಾಜದ ಕೆಲವು ಶಿಷ್ಯರು ದೂರು ದಾಖಲಿಸಿದ್ದಾರೆ. ಇದಕ್ಕೆ ಮನನೊಂದಿರುವ ನಟ ಹುಲಿ ಕಾರ್ತಿಕ್ ಹಾಗೂ ಇತರರು ನಮ್ಮನ್ನು ಭೇಟಿಯಾಗಿ ನೋವು ಹಂಚಿಕೊಂಡು, ಅಂದಿನ ವಿಚಾರವನ್ನು ವಿವರಿಸಿದ್ದಾರೆ. ಇದನ್ನು ದೊಡ್ಡದು ಮಾಡುವುದು ಬೇಡ. ಇಲ್ಲಿಗೆ ಬಿಟ್ಟುಬಿಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಉಡುಪಿ | ಅಂಬೇಡ್ಕರ್, ದಲಿತರಿಗೆ ಅವಮಾನಿಸಿದ ಸಂಘಪರಿವಾರದ ಮುಖಂಡ ಉಮೇಶ್ ನಾಯ್ಕ: ಬಂಧನಕ್ಕೆ ದಲಿತ ಮುಖಂಡರ ಆಗ್ರಹ
“ಕಾರ್ತಿಕ್ ನಿಷ್ಕಲ್ಮಷ ಹೃದಯದವರು. ಬಡತನದಿಂದ ಬಂದವರು, ಬಡವರ ಮಕ್ಕಳು ಬೆಳೆಯಬೇಕು, ಬಾಳಬೇಕು, ಮೆರೆಯಬೇಕು ಎನ್ನುವುದು ನಮ್ಮ ಗುರುಪೀಠದ ಆಶಯವಾಗಿದೆ. ಇಂತಹ ಪ್ರತಿಭೆಗಳಿಗೆ ನಮ್ಮ ಗುರುಪೀಠ ಪ್ರೋತ್ಸಾಹ ನೀಡುತ್ತದೆಯೇ ಹೊರತು ಚಿವುಟುವ ಕೆಲಸ ಮಾಡುವುದಿಲ್ಲ. ಅವರ ಜೊತೆಗೆ ನಮ್ಮ ಮಠ ಇದೆ” ಎಂದು ಧೈರ್ಯ ತುಂಬಿದರು.
ಈ ವೇಳೆ ಹುಲಿ ಕಾರ್ತಿಕ್ ಶ್ರೀಗಳನ್ನು ಭೇಟಿಯಾದ ನಂತರ ಮಾತನಾಡಿ, “ಶ್ರೀಗಳನ್ನು ಭೇಟಿ ಮಾಡಿದ್ದು, ನಮ್ಮ ಮನಸ್ಸಿನಲ್ಲಿದ್ದ ನೋವು ಮಾಯವಾಗಿ ಮನಸ್ಸು ಹಗುರವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ವಿವಿಧ ಮಠಾಧೀಶರು, ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಮಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ವಿ.ಎಸ್.ಹಳ್ಳಿ ಚಂದ್ರಶೇಖರ್, ರಾಘವೇಂದ್ರ ಇತರರು ಇದ್ದರು.
