ಶುಕ್ರವಾರ ರಾತ್ರಿ 8.30ರ ಸುಮಾರಿಗೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ ನಡೆದ ರೈಲು ಅಪಘಾತದಲ್ಲಿ ಅದೃಷ್ಟವಶಾತ್ ರೈಲಿನಲ್ಲಿದ್ದ ಅಷ್ಟೂ ಜನರ ಜೀವ ಉಳಿದಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ಹೇಳಿದರು.
ಶನಿವಾರ ಬೆಳಿಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಗೂಡ್ಸ್ ರೈಲಿಗೆ ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ಭಾರಿ ಅನಾಹುತ ನಡೆದಿದೆ. ನಿನ್ನೆ ತುಂಬಾ ಒಳ್ಳೆಯ ದಿನ, ದೇವರ ದಯೆಯಿಂದ ಅಪಘಾತದಲ್ಲಿ ದೊಡ್ಡ ಅನಾಹುತ ತಪ್ಪಿದೆ” ಎಂದರು.
“ರೈಲ್ವೆ ಅಪಘಾತದಲ್ಲಿ 19 ಜನರು ಗಾಯಗೊಂಡಿದ್ದಾರೆ. ರೈಲು ಅಪಘಾತದಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. 13 ಬೋಗಿಗಳು ಹಳಿ ತಪ್ಪಿದೆ. ಎಲ್ಲ ಪ್ರಯಾಣಿಕರನ್ನೂ ಮೆಮು ಟ್ರೈನ್ ಮೂಲಕ ಶಿಫ್ಟ್ ಮಾಡಲಾಗಿದೆ. ಪ್ರಯಾಣಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇಂದು ಅವರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದರು.
ಸ್ಥಳೀಯರು ರೈಲಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ತಮಿಳುನಾಡು ಪೊಲೀಸರು, ರೈಲ್ವೆ ಅಧಿಕಾರಿಗಳು, ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆದ್ರೂ, ಶ್ವಾನ ದಳದಿಂದ ಯಾರಾದ್ರೂ ನಾಪತ್ತೆಯಾಗಿದ್ದಾರಾ ಅಂತಾ ಹುಡುಕಾಟ ನಡೆದಿದೆ. ರೈಲ್ವೆ ಇಲಾಖೆ ಸಹಾಯವಾಣಿ ಕೂಡ ಓಪನ್ ಮಾಡಿದೆ. ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುತ್ತಿದೆ. ಬದುಕುಳಿದ ಪ್ರಯಾಣಿಕರು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ” ಎಂದರು.