ಹುಟ್ಟೂರು ಕಾಳೇನಹಳ್ಳಿಯಲ್ಲಿ ಮತ ಚಲಾಯಿಸಿದ ಧನಂಜಯ
ಮತ ಚಲಾಯಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ ನಟ
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಬೆಳಗ್ಗೆಯಿಂದಲೇ ಆರಂಭಗೊಂಡಿದ್ದು, ಸ್ಯಾಂಡಲ್‌ವುಡ್‌ನ ಹಲವು ನಟ, ನಟಿಯರು ಮತಗಟ್ಟೆಗಳಿಗೆ ತೆರಳಿ ತಮ್ಮ ಮತ ಚಲಾಯಿಸಿದ್ದಾರೆ. ಸ್ಯಾಂಡಲ್‌ವುಡ್ ತಾರೆಯರ ಪೈಕಿ ನಟ ಡಾಲಿ ಧನಂಜಯ ಅವರ ಮತಚಲಾವಣೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಧನಂಜಯ ಬಿಡುವು ಮಾಡಿಕೊಂಡು ಅರಸಿಕೆರೆ ತಾಲ್ಲೂಕಿನ ತಮ್ಮ ಹುಟ್ಟೂರು ಕಾಳೇನಹಳ್ಳಿಗೆ ತೆರಳಿ ಕುಟುಂಬಸ್ಥರ ಜೊತೆಗೆ ಮತದಾನ ಮಾಡಿದ್ದಾರೆ. ವಯಸ್ಸಾದ ತಮ್ಮ ಅಜ್ಜಿಯ ಕೈ ಹಿಡಿದುಕೊಂಡು ಮತಗಟ್ಟೆ ಕರೆದುಕೊಂಡು ಹೋಗಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಧನಂಜಯ ಅವರ ವಿಶೇಷ ಚೇತನ ಸಹೋದರಿ ಮತ್ತು ಕುಟುಂಬದ ಉಳಿದವರು ಕೂಡ ಜೊತೆಯಾಗಿದ್ದಾರೆ.
ತಾವು ಕುಟುಂಬದೊಂದಿಗೆ ತೆರಳಿ ಮತದಾನ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಧನಂಜಯ, “ನಾವೆಲ್ಲ ಓಟ್ ಮಾಡಿದ್ವಿ, ನೀವು ವೋಡ್ ಮಾಡಿ” ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಧನಂಜಯ ಮತ ಚಲಾವಣೆಗೆ ಕರೆ ನೀಡಿ ಟ್ವೀಟ್ ಮಾಡುತ್ತಲೇ ಹಲವು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ತಾವು ಕೂಡ ಮತ ಚಲಾಯಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.