ಸಂಘದ ಮಾತಿಗೆ ಬಗ್ಗದ ಮೋದಿ; ಪ್ರಜಾಪ್ರಭುತ್ವ ಪಾಠ ಹೇಳುತ್ತಿರುವ ಭಾಗವತ್

Date:

Advertisements

ದೇಶದೆಲ್ಲಡೆ ವಿಜಯ ದಶಮಿಯ ಸಂಭ್ರಮ ಹೆಚ್ಚಿದೆ. ಅದರಲ್ಲೂ ಚುನಾವಣಾ ವಸ್ತಿಲಿನಲ್ಲಿರುವ ಮಹಾರಾಷ್ಟ್ರದಲ್ಲಿ ಹಬ್ಬವು ರಾಜಕೀಯ ವೇದಿಕೆಯಾಗಿದೆ. ಹಿಂದುತ್ವವನ್ನೇ ಜೀವಾಳವಾಗಿಸಿಕೊಂಡು, ಪ್ರತಿಪಾದಿಸುತ್ತಿರುವ ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಶಿವಸೇನೆಯ ಎರಡೂ ಬಣಗಳು ಬೀದಿ-ಬೀದಿಗಳಲ್ಲಿ ವಿಜಯ ದಶಮಿ ಆಚರಣೆಯೊಂದಿಗೆ ರಾಜಕೀಯವಾಗಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇನ್ನು, ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲೂ ವಿಜಯ ದಶಮಿ ಆಚರಣೆ ನಡೆದಿದ್ದು, ಮೋಹನ್ ಭಾಗವತ್ ಅವರು ಮತ್ತೆ ಅಣಿಮುತ್ತುಗಳನ್ನು ಉದುರಿಸಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಅವರ ಮಾತಿನ ವರಸೆ ಬದಲಾಗಿದೆ. ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಆಗ್ಗಾಗ್ಗೆ ಭಾಗವತ್ ಮಾತನಾಡುತ್ತಿದ್ದಾರೆ. ಅವರ ಮಾತುಗಳು ಆಶ್ಚರ್ಯಕರವಾಗಿದ್ದರೂ, ಅದು ಅವರಿಗೆ ಅನಿವಾರ್ಹವಾಗಿದೆ. ಆರ್‌ಎಸ್‌ಎಸ್‌ನ ರಾಜಕೀಯ ಘಟಕವಾಗಿರುವ ಬಿಜೆಪಿ, ಮೋದಿ-ಶಾ ಅಡಿಯಲ್ಲಿ ಆರ್‌ಎಸ್‌ಎಸ್‌ ಹಿಡಿತದಿಂದ ನುಣುಚಿಕೊಳ್ಳುತ್ತಿದೆ. ಇದನ್ನು, ಭಾಗವತ್‌ಗೆ ಸಹಿಸಲಾಗುತ್ತಿಲ್ಲ. ಹೀಗಾಗಿ, ಪದೇ-ಪದೇ ಪರೋಕ್ಷಾಗಿ ಮೋದಿ-ಶಾಗೆ ಭಾಗವತ್ ಪಾಠ ಹೇಳುತ್ತಿದ್ದಾರೆ.

ಶನಿವಾರ ನಡೆದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಭಾಗವತ್, “ದೇಶದಲ್ಲಿ ವಿನಾಕಾರಣ ಮೂಲಭೂತವಾದವನ್ನು ಪ್ರಚೋದಿಸಲಾಗುತ್ತಿದೆ. ಪರಿಸ್ಥಿತಿ ಮತ್ತು ನೀತಿಗಳ ಕುರಿತ ಅತೃಪ್ತಿಗಳು ಸಹಜವಾಗಿ ಮೂಡುತ್ತವೆ. ಅದನ್ನು ಪ್ರಜಾತಾಂತ್ರಿಕ ಮಾರ್ಗದಲ್ಲಿ ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಹಿಂಸೆಯನ್ನು ಆಶ್ರಯಿಸಿ, ಭಯವನ್ನು ಬಿತ್ತರಿಸಲಾಗುತ್ತಿದೆ. ಇದು, ಗೂಂಡಾಗಿರಿ” ಎಂದು ಹೇಳಿದ್ದಾರೆ.

Advertisements

“ನಮ್ಮ ಸಾಮಾಜಿಕ ಜೀವನವು ಉದಾತ್ತ ಜೀವನ ಮೌಲ್ಯಗಳಿಂದ ಪ್ರೇರಿತವಾಗಿದೆ. ಇಂತಹ ರಾಷ್ಟ್ರೀಯ ಜೀವನಕ್ಕೆ ಹಾನಿ ಮಾಡುವ ಮತ್ತು ನಾಶಗೊಳಿಸುವ ದುಷ್ಟ ಪ್ರಯತ್ನಗಳನ್ನು ಆರಂಭದಲ್ಲಿಯೇ ನಿಲ್ಲಿಸುವ ಅವಶ್ಯಕತೆ ಇದೆ” ಎಂದಿದ್ದಾರೆ.

ಅವರ ಈ ಮಾತಿನ ಅಂತರಾಳವು ಬಿಜೆಪಿಯನ್ನು, ಮುಖ್ಯವಾಗಿ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡಿದೆ. ಆರ್‌ಎಸ್‌ಎಸ್‌ ಮಾತಿಗೆ ಮೋದಿ ಮತ್ತು ಅಮಿತ್ ಶಾ ಮಣೆಹಾಕುತ್ತಿಲ್ಲ. ವಿವಿಧ ಪಕ್ಷಗಳಲ್ಲಿದ್ದು, ಭ್ರಷ್ಟಾಚಾರದ ಆರೋಪ ಹೊತ್ತವನ್ನು ಮೋದಿ-ಶಾ ಬಿಜೆಪಿಗೆ ಕರೆತರುತ್ತಿದ್ದಾರೆ. ಅವರಿಗೆ ಕ್ಲೀನ್‌ಚಿಟ್‌ ಕೊಟ್ಟು, ಪಕ್ಷದಲ್ಲಿ ಇರಿಸಿಕೊಳ್ಳುತ್ತಿದ್ದಾರೆ. ಆ ಮೂಲಕ, ನಾನಾ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸಿ, ಬಿಜೆಪಿ ಸರ್ಕಾರ ರಚಿಸುತ್ತಿದ್ದಾರೆ. ಭ್ರಷ್ಟರನ್ನು ಹೆಚ್ಚಾಗಿ ಸೇರಿಸಿಕೊಂಡು, ಅವರಿಗೆ ಸರ್ಕಾರಗಳಲ್ಲಿ ಹುದ್ದೆ ನೀಡುತ್ತಿರುವುದು ಸಂಘದಿಂದ ಬಿಜೆಪಿಗೆ ಬಂದಿರುವ ಹಲವು ನಾಯಕರಿಗೆ ಸಹಿರಸಲಾಗುತ್ತಿಲ್ಲ. ಸಂಘದ ಹಿನ್ನೆಲೆ ಉಳ್ಳವರು ಅಸಮಾಧಾನಗೊಂಡಿದ್ದಾರೆ. ಇದು, ಆರ್‌ಎಸ್‌ಎಸ್‌ ನಿರಾಶೆ ಹುಟ್ಟುಹಾಕಿದೆ.

ಜೊತೆಗೆ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರ ಅಧಿಕಾರವಾಧಿ ಮುಗಿದು ಬರೋಬ್ಬರಿ 10 ತಿಂಗಳಾಗಿವೆ. ಆದರೂ, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿಲ್ಲ. ನಡ್ಡಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಅಧ್ಯಕ್ಷರ ಆಯ್ಕೆಗೆ ಬಿಜೆಪಿ-ಆರ್‌ಎಸ್‌ಎಸ್‌ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ, ಒಮ್ಮತದ ಅಭಿಪ್ರಾಯ ವ್ಯಕ್ತವಾಗಿಲ್ಲ. ಬಿಜೆಪಿ ಪ್ರಸ್ತಾಪಿಸುತ್ತಿರುವ ಹೆಸರುಗಳನ್ನು ಆರ್‌ಎಸ್‌ಎಸ್‌ ಒಪ್ಪುತ್ತಿಲ್ಲ.

ಗಮನಾರ್ಹವಾಗಿ, ಮೋದಿ-ಶಾ ಜೋಡಿಗೆ ತಮ್ಮ ಅಣತಿಯಲ್ಲಿ ಕೆಲಸ ಮಾಡುವ ನಡ್ಡಾರಂತಹ ಅಧ್ಯಕ್ಷರು ಬಿಜೆಪಿಯಲ್ಲಿರಬೇಕು. ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಅಧ್ಯಕ್ಷರಾಗಿ ಅವರು ಬೆಂಬಲಿಸುವಂತಿರಬೇಕು. ಮೋದಿ-ಶಾ ಹೇಳಿದಂತೆ ಕೇಳುವ ಸೂತ್ರದ ಬೊಂಬೆಗಳಾಗಿರಬೇಕು. ಆದರೆ, ಇದನ್ನು ಆರ್‌ಎಸ್‌ಎಸ್‌ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಕ್ಷವು ಸ್ವತಂತ್ರವಾಗಿ ಸರ್ಕಾರಕ್ಕೆ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಲಹೆ, ಸೂಚನೆಗಳನ್ನು ನೀಡುವಂತಿರಬೇಕು. ಅಗತ್ಯವಿದ್ದಾಗ ತಮ್ಮದೇ ಸರ್ಕಾರ ನೀತಿಗಳನ್ನು ವಿಮರ್ಶಿಸುವಂತಿರಬೇಕು ಎಂದು ಆರ್‌ಎಸ್‌ಎಸ್‌ ಬಯಸುತ್ತಿದೆ. ಅದಕ್ಕಾಗಿ, ಪಕ್ಷ, ಸಂಘ ಹಾಗೂ ಸರ್ಕಾರದ ನಡುವೆ ಗಟ್ಟಿಯಾದ ಕೊಂಡಿಯಂತಿರಬಲ್ಲವರಿಗಾಗಿ ಸಂಘವು ಶೋಧಿಸುತ್ತಿದೆ. ಆದರೆ, ಅಂತಹವರನ್ನು ಬಿಜೆಪಿ ತನ್ನ ಪಟ್ಟಿಯಲ್ಲಿ ಪ್ರಸ್ತಾಪಿಸುತ್ತಿಲ್ಲ.

ಇದೆಲ್ಲವೂ ಆರ್‌ಎಸ್‌ಎಸ್‌ಗೆ ಸಹಿಸಲೂ ಆಗದೆ, ಬಹಿರಂಗವಾಗಿ ಮೋದಿ ವಿರುದ್ಧ ಮಾತನಾಡಲೂ ಆಗದ ಪರಿಸ್ಥಿತಿ ಸೃಷ್ಠಿಸಿದೆ. ಹೀಗಾಗಿಯೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್, ಆಗ್ಗಾಗ್ಗೆ ಬಹಿರಂಗ ಸಭೆಯಲ್ಲಿಯೇ ಪರೋಕ್ಷವಾಗಿ ಮೋದಿ ಅವರಿಗೆ ಪಾಠ ಹೇಳುತ್ತಿದ್ದಾರೆ.

ಈ ವರದಿ ಓದಿದ್ದೀರಾ?: ಆರ್‌ಎಸ್‌ಎಸ್‌ನ ಭಾಗವತರು ಮೌನ ಮುರಿದು ಮೋದಿ ಬಗ್ಗೆ ಗೊಣಗುತ್ತಿರುವುದೇಕೆ?

ಈ ಹಿಂದೆ ಕೂಡ, ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಭಾಗವತ್, ದೇವರೇ ನನ್ನನ್ನು ಕಳಿಸಿದ್ದಾನೆ ಎಂದಿದ್ದ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ”ನಾವು ನಮ್ಮ ಕೆಲಸದ ಮೂಲಕ ಪೂಜ್ಯ ವ್ಯಕ್ತಿಯಾಗಬಹುದು. ಆದರೆ ನಾವು ಆ ಮಟ್ಟವನ್ನು ತಲುಪಿದ್ದೇವೆಯೇ ಎಂಬುದನ್ನು ಇತರರು ನಿರ್ಧರಿಸುತ್ತಾರೆ. ನಮ್ಮಷ್ಟಕ್ಕೆ ನಾವೇ ‘ನಾವು ದೇವರಾಗಿದ್ದೇವೆ’ ಎಂದು ಘೋಷಿಸಿಕೊಳ್ಳಬಾರದು” ಎಂದಿದ್ದರು.

ಮಾತ್ರವಲ್ಲದೆ, ಮಣಿಪುರ ಹಿಂಸಾಚಾರದ ಬಗ್ಗೆಯೂ ಮಾತನಾಡಿದ್ದ ಭಾಗವತ್, “ಮಣಿಪುರದಲ್ಲಿ ಸಂಘರ್ಷ ಉಲ್ಬಣಗೊಂಡು ಒಂದು ವರ್ಷವಾದ ಮೇಲೆ ಅಲ್ಲಿನ ಹಿಂಸಾಚಾರವನ್ನು ಕೊನೆಗಾಣಿಸುವ ಬಗ್ಗೆ, ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಒಮ್ಮತದ ಅಗತ್ಯವಿದೆ. ನಿಜವಾದ ಸೇವಕ ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ಆತ ತಾನು ಮಾಡುವ ಕೆಲಸವನ್ನು ಆನಂದಿಸುತ್ತಾನೆ. ನಾನು ಈ ಕೆಲಸ ಮಾಡಿದೆ ಎಂದು ಹೇಳಿಕೊಳ್ಳುವ ಅಹಂಕಾರವನ್ನು ಹೊಂದಿರುವುದಿಲ್ಲ. ಅಂತಹ ವ್ಯಕ್ತಿ ಮಾತ್ರ ನಿಜವಾದ ಸೇವಕನಾಗುತ್ತಾನೆ” ಎಂದು ಹೇಳುವ ಮೂಲಕ ತನ್ನನ್ನು ತಾನು ‘ಪ್ರಧಾನ ಸೇವಕ’ ಎಂದು ಹೇಳಿಕೊಳ್ಳುತ್ತಿದ್ದ ಮೋದಿಯ ಕಿವಿ ಹಿಂಡಿದ್ದರು. ಆದರೆ, ಇದನ್ನೂ ಮೋದಿಗೇ ಹೇಳುತ್ತಿದ್ದೇನೆಂದು ಭಾಗವತ್ ಹೇಳಿರಲಿಲ್ಲ. ಮೋದಿ ಕೂಡ ಆ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ.

ಒಟ್ಟಿನಲ್ಲಿ, ಈಗ ಸಂಘದ ಮಾತನ್ನು ಮೋದಿ ಕೇಳುತ್ತಿಲ್ಲ. ಮೋದಿ ನಡೆಯನ್ನು ಸಂಘಕ್ಕೆ ಸಹಿಸಲಾಗುತ್ತಿಲ್ಲ. ಹಾಗಂತ, ಬಿಜೆಪಿಯನ್ನು ಕಡೆಗಣಿಸಲೂ ಆಗುತ್ತಿಲ್ಲ. ಆರ್‌ಎಸ್‌ಎಸ್‌ಗೆ ರಾಜಕೀಯ ಶಕ್ತಿಯೂ ಬೇಕು. ಅದಕ್ಕಾಗಿಯೇ, ಹರಿಯಾಣದಲ್ಲಿ ಬಿಜೆಪಿ ಸೋತೇಹೋಯಿತು ಎಂಬ ಪರಿಸ್ಥಿತಿಯಲ್ಲಿಯೂ ಬಿಜೆಪಿ ಮತ್ತೆ ಗೆಲ್ಲುವಲ್ಲಿ ಆರ್‌ಎಸ್‌ಎಸ್‌ ತಂತ್ರ ಎಣೆದಿತ್ತು. ಒಂದೆಡೆ ಬಿಜೆಪಿ ಅಧಿಕಾರದಲ್ಲಿರುವಂತೆ ನೋಡಿಕೊಳ್ಳುವುದು, ಮೊತ್ತೊಂದೆಡೆ, ಬಿಜೆಪಿಯನ್ನು ತನ್ನ ಅಣತಿಗೆ ತೆಗೆದುಕೊಳ್ಳುವುದು – ಈ ಎರಡೂ ಆರ್‌ಎಸ್‌ಎಸ್‌ಗೆ ಅಗತ್ಯವೂ, ಅನಿವಾರ್ಯವೂ ಆಗಿದೆ. ಇದಕ್ಕೆ ಆರಂಭದಲ್ಲಿ ದಾಳವಾಗಿದ್ದ ಮೋದಿ, ಈಗ ಮುಳುವಾಗುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X