ಮೈಸೂರಿನಲ್ಲಿ ದರ್ಭಾಂಗ್‌ಗೆ ಹೊರಟಿದ್ದ ಭಾಗ್ಮತಿ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ರಾತ್ರಿ ಚೆನ್ನೈ ಸಮೀಪದ ಕವರಾಯಿಪ್ಪೆಟ್ಟೈ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ದುರ್ಘಟನೆಯಲ್ಲಿ 19 ಪ್ರಯಾಣಿಕರು ಗಾಯಗೊಂಡಿದ್ದಾರೆ. ಭಾಗ್ಮತಿ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿತಪ್ಪಿವೆ.
ನಿಂತಿದ್ದ ಗೂಡ್ಸ್ ರೈಲಿಗೆ ವೇಗವಾಗಿ ಬಂದ ಭಾಗ್ಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿರುವುದು ರೈಲ್ವೇ ಇಲಾಖೆಯಲ್ಲಿನ ಸಮನ್ವಯದ ಕೊರತೆಯನ್ನು ಎತ್ತಿತೋರಿಸಿದೆ. ಆದಾಗ್ಯೂ, ಭಾಗ್ಮತಿ ಎಕ್ಸ್‌ಪ್ರೆಸ್ ಅಪಘಾತಕ್ಕೀಡಲು ಕಾರಣವೇನು ಎಂಬ ಬಗ್ಗೆ ಅಧಿಕಾರಿಗಳು ವಿವರಿಸಿದ್ದಾರೆ.
ಭಾಗ್ಮತಿ ಎಕ್ಸ್‌ಪ್ರೆಸ್ ರೈಲು ಕವರೈಪ್ಪೆಟ್ಟೈ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕಿರಲಿಲ್ಲ. ಆ ನಿಲ್ದಾಣದ ಮೂಲಕ ಹಾದುಹೋಗಬೇಕಿತ್ತು. ಚೆನ್ನೈನಿಂದ ಹೊರಟ ನಂತರ, ಲೋಕೋ ಪೈಲೆಟ್ ಎಕ್ಸ್‌ಪ್ರೆಸ್‌ನ ಸಿಗ್ನಲ್‌ಗಳನ್ನು ಸರಿಯಾಗಿಯೇ ಅನುಸರಿಸಿದ್ದಾರೆ. ಆದರೂ, ಮುಖ್ಯ ಮಾರ್ಗದಲ್ಲಿ ರೈಲು ಹೋಗುವ ಬದಲು, ತಪ್ಪಾಗಿ ಲೂಪ್ ಲೈನ್‌ಗೆ ಬಂದಿದೆ. ಪರಿಣಾಮ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ” ಎಂದು ದಕ್ಷಿಣ ರೈಲ್ವೇಯ ಜನರಲ್ ಮ್ಯಾನೇಜರ್ ಆರ್.ಎನ್.ಸಿಂಗ್ ಹೇಳಿದ್ದಾರೆ.
“ಕವರಪೆಟ್ಟೈ ನಿಲ್ದಾಣವನ್ನು ರೈಲು ಪ್ರವೇಶಿಸುವಾಗ ರೈಲು ಸಿಬ್ಬಂದಿಗೆ ಭಾರಿ ಜರ್ಕ್ ಆಗಿರುವ ಅನುಭವವಾಗಿದೆ. ನೀಡಲಾಗಿದ್ದ ಸಿಗ್ನಲ್ ಪ್ರಕಾರ 75 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ಮುಖ್ಯ ಮಾರ್ಗದಲ್ಲಿ (ಹಳಿ) ಹೋಗುವ ಬದಲು, ಲೂಪ್ ಲೈನ್‌ಗೆ ಬಂದಿದೆ” ಎಂದು ಹೇಳಿದ್ದಾರೆ.
ಅಪಘಾತದಿಂದಾಗಿ ರೈಲಿನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರಿಗಾಗಿ ವಿಶೇಷ ರೈಲನ್ನು ನಿಯೋಜಿಸಲಾಗಿದೆ. ಪ್ರಯಾಣಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಲಾಗಿದೆ. ಪ್ರಯಾಣಿಕರಿಗೆ ಸಹಾಯ ಮಾಡಲು ರೈಲ್ವೇಯು ಸಹಾಯ ಕೇಂದ್ರವನ್ನು ತೆರೆಯಲಾಗಿದೆ.