ಶಿವಮೊಗ್ಗ ನಗರದಲ್ಲಿ ಆರೋಗ್ಯಕರ ಮತ್ತು ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕರ್ತವ್ಯ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪತ್ರಕೆ ಹೇಳಿಕೆ ನೀಡಿರುವ ಅವರು, “ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಸರಬರಾಜು ಆಗುವ ನೀರು ಕಲುಷಿತಗೊಂಡಿದ್ದು, ಜನಸಾಮಾನ್ಯರು ಆ ನೀರು ಕುಡಿಯಲಾಗದೆ ಪರದಾಡುತ್ತಿದ್ದಾರೆ. ನಿಜವಾಗಿಯೂ ʼನೀರು ಶುದ್ಧೀಕರಣ ಘಟಕʼದಿಂದ ಸರಬರಾಜಾಗುತ್ತಿರುವ ನೀರು ಶುದ್ಧೀಕರಣ ಆಗುತ್ತಿದೆಯೇ? ಎಂಬ ಪ್ರಶ್ನೆ ಉಂಟಾಗುತ್ತದೆ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇದರ ಜವಾಬ್ದಾರಿ ವಹಿಸಿದ್ದು, ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ರೋಗ ಹರಡುವ ಕಲುಷಿತ ನೀರು ಸರಬರಾಜಾಗುತ್ತಿದೆ. ನೀರಿನ ಶುದ್ಧೀಕರಣ ಘಟಕಗಳನ್ನು ಸರಿಪಡಿಸಿಕೊಂಡು ಶುದ್ಧ ಮತ್ತು ಸ್ವಚ್ಛ ಹಾಗೂ ಆರೋಗ್ಯಕರ ನೀರು ಸರಬರಾಜು ಮಾಡುವುದು ಮಂಡಳಿಯ ಕರ್ತವ್ಯ” ಎಂದಿದ್ದಾರೆ.
“ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಹೋರಾಟ ಮಾಡುವುದು ಖಂಡಿತ” ಏಂದು ಎಚ್ಚರಿಕೆ ನೀಡಿದ್ದಾರೆ.
“ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿಯೆಂದು ಹೆಸರು ಪಡೆದರೂ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ನೀಡಲು ಇಲ್ಲಿನ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಕ್ರಮವಾಗಿ ಡಿಜಿಟಲ್ ಖಾತಾ ವಿತರಣೆ ಆರೋಪ; ಜನವಾಡ ಪಿಡಿಒ ಅಮಾನತು
“ಜಿಲ್ಲಾಡಳಿತ ಮತ್ತು ವಿಶೇಷವಾಗಿ ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ರೋಗಗಳಿಂದ ನಾಗರಿಕರನ್ನು ರಕ್ಷಿಸಬೇಕು” ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪರವಾಗಿ ಆಗ್ರಹಿಸಿದ್ದಾರೆ.