ಬೀದರ್‌ | ʼವಚನ ದರ್ಶನ’ ಕೃತಿಯಿಂದ ಬಸವಣ್ಣನವರಿಗೆ ಅಪಚಾರ : ಸಾಣೆಹಳ್ಳಿ ಶ್ರೀ

Date:

Advertisements

ʼಇತ್ತೀಚೆಗೆ ಪ್ರಕಟಗೊಂಡ ʼವಚನ ದರ್ಶನʼ ಸಂಪಾದನಾ ಕೃತಿಯಲ್ಲಿ ವಚನಗಳ ಮರು ವಿಶ್ಲೇಷಣೆ ನೆಪದಲ್ಲಿ ಬಸವಣ್ಣನವರನ್ನು ಭಕ್ತಿಯ ಭಾವುಕರನ್ನಾಗಿ ಚಿತ್ರಿಸಿ, ಸನಾತನ ಪರಂಪರೆಯಿಂದ ಪ್ರೇರಣೆ ಪಡೆದರೆಂದು ಉಲ್ಲೇಖಿಸಿ ಅಪಚಾರ ಎಸಗಲಾಗಿದೆʼ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಹರಳಯ್ಯ ಗವಿಯಲ್ಲಿ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಲ್ಲಿ ಶುಕ್ರವಾರ ನಡೆದ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ʼಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿʼ ಸ್ವೀಕರಿಸಿ ಮಾತನಾಡಿದರು.

ʼವಚನ ದರ್ಶನ ಕೃತಿಯಲ್ಲಿ ಬಸವಣ್ಣನವರಿಗೆ ಬೇರೆ ರೂಪ ಕೊಡುವ ಹುನ್ನಾರ ನಡೆದಿದೆ. ಈ ಕೃತಿಯಲ್ಲಿ ವೇದಾಗಮ ವಿರೋಧಿಸಿ ಬರೆದ ಒಂದೂ ವಚನ ಆ ಗ್ರಂಥದೊಳಗೆ ಇಲ್ಲ. ತಮಗೆ ಬೇಕಾದಂತೆ ಸತ್ಯ ಬದಲಾಯಿಸುವ ಪ್ರಯತ್ನ ಬುದ್ಧಿವಂತರಿಂದ ನಡೆಯುತ್ತಿದೆ. ಭಗವಂತ ನೀಡಿದ ಬುದ್ಧಿ ಸುಬುದ್ಧಿ, ಸಂಸ್ಕಾರಯುತ ಬುದ್ಧಿ ಆಗಬೇಕು. ನರಿಬುದ್ಧಿ ಆಗಬಾರದು. ಅರಿವು-ಆಚಾರ ಒಗ್ಗೂಡಿದಾಗ ವಿವೇಕ ಬುದ್ಧಿ ಆಗುತ್ತದೆ. ಅರಿವು-ಆಚಾರ ಬೇರೆಯಾದರೆ ದುರ್ಬುದ್ಧಿ, ನರಿಬುದ್ಧಿ ಆಗುತ್ತದೆʼ ಎಂದು ನುಡಿದರು.

Advertisements

ʼಶರಣರ ವಿಚಾರಗಳಲ್ಲಿ ಅಪಚಾರ ಎಸಗದಂತೆ ದೃಶ್ಯ, ಮುದ್ರಣ ಮಾಧ್ಯಮಗಳು ಸತ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ವಿಚಾರಗಳು ಅದರೊಳಗೆ ತುರುಕಲು ಹೋಗಬಾರದು. ತುರುಕಿದರೆ ಶರಣರ ಅವಕೃಪೆಗೆ ಪಾತ್ರರಾಗುತ್ತೇವೆ. ನಾವು ಶಾಪ ಹಾಗೂ ವರವನ್ನು ನಂಬುವುದಿಲ್ಲ. ವರ, ಶಾಪ ಎನ್ನುವುದು ನಮ್ಮ ಬದುಕಿನ ವಿಧಾನವನ್ನು ಅವಲಂಬಿಸಿದೆ. ಶರಣರು ಮೆಚ್ಚುವ ಹಾಗೆ ನಡೆದರೆ ಅದೇ ವರ. ಶರಣರ ಅವಕೃಪೆಗೆ ಒಳಗಾದರೆ ಅದೇ ಶಾಪ. ನಮ್ಮ ನಡವಳಿಕೆಯೇ ನಮಗೆ ಶಾಪ, ವರ ಆಗಬಲ್ಲದುʼ ಎಂದು ಸಾಣೇಹಳ್ಳಿ ಸ್ವಾಮೀಜಿ ವಿಶ್ಲೇಷಿಸಿದರು.

WhatsApp Image 2024 10 12 at 3.09.37 PM 1
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ 2024ನೇ ಸಾಲಿನ ʼಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.

ʼನಡೆ-ನುಡಿ ಸಿದ್ಧಾಂತದಲ್ಲಿ ಅಂತರವಿಲ್ಲದಂತೆ ಬದುಕನ್ನು ಸಾಗಿಸಬೇಕು. ಕೈಯಲ್ಲಿ ಇಷ್ಟಲಿಂಗ ಹಿಡಿದು 24 ಗಂಟೆ ʼಓಂ ನಮಃ ಶಿವಾಯʼ ಎಂದು ಪ್ರಾರ್ಥಿಸಿದರೆ ಭಗವಂತ ಒಲಿಯುವುದಿಲ್ಲ. ಸದಾಚಾರ, ಸನ್ನಡತೆ, ಸದ್ವಿಚಾರ ಇಟ್ಟುಕೊಂಡು ಪೂಜಿಸಿದರೆ ಭಗವಂತ ಒಲಿಯುವನು. ಈ ಎಚ್ಚರ ಸಾಮಾನ್ಯರಿಗಿಂತ ಉನ್ನತ ಸ್ಥಾನದಲ್ಲಿರುವರಿಗೆ ಇರಬೇಕಾಗುತ್ತದೆ. ಸಮಾಜದ ಪರಿವರ್ತನೆಗಾಗಿ ಶರಣರು ಎಲ್ಲ ರೀತಿಯ ಮೌಢ್ಯಗಳನ್ನು ನಿರಾಕರಿಸಿದರು. ಶರಣರಿಗೆ ಪ್ರಾಣಕ್ಕಿಂತ ತತ್ವ, ಸಿದ್ಧಾಂತವೇ ಮುಖ್ಯವಾಗಿತ್ತುʼ ಎಂದರು.

ʼಬಸವಕಲ್ಯಾಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನೂತನ ಅನುಭವ ಮಂಟಪದ ಕಟ್ಟಡದ ಕಾರ್ಯ ನಡೆಯುತ್ತಿದೆ. ಕೇವಲ ಕಟ್ಟಡದಿಂದಲೇ ಅನುಭವ ಮಂಟಪವಾಗದೇ, ಅಲ್ಲಿ ಶರಣರ ತತ್ವ, ಸಿದ್ಧಾಂತಗಳ ಅನುಸಂಧಾನ ನಡೆಯಬೇಕು. ಅನುಭವ ಮಂಟಪ ಕೇವಲ ಪ್ರೇಕ್ಷಣೀಯ ಸ್ಥಳವಾಗದೆ, ನಮ್ಮ ಅಂತರಂಗದ ಅರಿವನ್ನು ಹೆಚ್ಚಿಸುವ ಮಂಟಪವಾಗಬೇಕು. ಶರಣರು ಸಾಹಿತ್ಯ ಸೃಷ್ಟಿಸಬೇಕೆಂದು ವಚನಗಳನ್ನು ರಚಿಸಲಿಲ್ಲ. ಅವರ ಬದುಕೇ ಬರಹವಾಗಿತ್ತು. ಅರಿವು ಆಚರಣೆಯಾಗಿ ವಚನಗಳಾಗಿ ಮಾರ್ಪಟ್ಟಿವೆʼ ಎಂದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಬಸವ ತತ್ವಕ್ಕೆ ಚ್ಯುತಿ ಬಂದಾಗ ಲಿಂಗಾಯತರು ಎದ್ದು ನಿಲ್ಲಬೇಕು. ನಮ್ಮ ತತ್ವ ನಾವು ಹೇಳಿದರೆ ಬೇರೆಯವರಿಂದ ಟೀಕೆಗೆ ಒಳಗಾಗುತ್ತಿದ್ದೇವೆ. ಇತ್ತೀಚೆಗೆ ಸಾಣೇಹಳ್ಳಿ ಶ್ರೀಗಳು ʼಗಣಪತಿ ನಮ್ಮ ತತ್ವದಲ್ಲಿ ಇಲ್ಲʼ ಎಂದು ಹೇಳಿದ್ದಕ್ಕೆ ಕೆಲವರು ವಿರೋಧಿಸಿದರು. ನಾವು ಯಾರ ವಿರೋಧಿಗಳು ಅಲ್ಲ, ನಮ್ಮ ತತ್ವ ಸಿದ್ಧಾಂತ ಹೇಳಿದ್ದೇವೆʼ ಎಂದು ಹೇಳಿದರು.

ʼನಾಡಹಬ್ಬ ಶರಣ ವಿಜಯೋತ್ಸವ ಎಂಬುದು ʼಲಿಂಗಾಯತರ ಹಬ್ಬʼ ಇದ್ದಂತೆ. ಲಿಂಗಾಯತ ಧರ್ಮಕ್ಕಾಗಿ ಸಾವಿರಾರು ಶರಣರು ಹುತಾತ್ಮರಾಗಿದ್ದು ಐತಿಹಾಸಿಕವಾಗಿದೆ. ಆದರೆ, ಅವರ ತತ್ವ ಸಿದ್ಧಾಂತವನ್ನು ಜಗತ್ತಿಗೆ ಜನರಿಗೆ ಮುಟ್ಟಿಸಲು ಇನ್ನೂ ಆಗಲಿಲ್ಲ. ಬಸವ ಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂಬ ನಮ್ಮೆಲ್ಲರ ಕನಸಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ, ಅದು ಶೀಘ್ರದಲೇ ನೆರವೇರಿದರೆ ಅನುಭವ ಮಂಟಪ ಕಟ್ಟಡಕ್ಕೆ ಇನ್ನಷ್ಟು ಮೆರುಗು ಪಡೆಯುತ್ತದೆʼ ಎಂದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಪತಿ ಡಾ.ದಯಾನಂದ ಅಗಸರ ಮಾತನಾಡಿ, ʼಶರಣ ವಿಜಯೋತ್ಸವ ಜಗತ್ತಿನಾದ್ಯಂತ ಪಸರಿಸಬೇಕಾಗಿದೆ. ವಚನ ಸಾಹಿತ್ಯ ಮಾನವ ಕಲ್ಯಾಣಕ್ಕೆ ಪೂರಕವಾಗಬೇಕಾದರೆ ಈ ರೀತಿಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಸತ್ಯದ ಸಾಕ್ಷಾತ್ಕಾರವಾಗಬೇಕಾದರೆ ವಚನಗಳನ್ನು ಅರಿತು, ಅನುಸರಿಸಬೇಕಾಗುತ್ತದೆ. ವಚನಗಳ ವಿಶ್ಲೇಷಣೆಯ ಮರು ವ್ಯಾಖ್ಯಾನಿಸುವ ಅಗತ್ಯವಿದೆ. ವಚನಗಳ ಅಧ್ಯಯನ, ಸಂಶೋಧನೆಗಳು ನಿರಂತರವಾಗಿ ನಡೆಯಲು ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಪ್ರಾರಂಭಿಸುವುದು ಅವಶ್ಯವಾಗಿದೆʼ ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿದ್ದು‌ ಬಸವ ಧರ್ಮ : ದಿನೇಶ್‌ ಅಮೀನ್‌ ಮಟ್ಟು

ಶಾಸಕ ಶರಣು ಸಲಗಾರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮುಳೆ, ನಿವೃತ್ತ ನ್ಯಾಯಾಧಿಶ ಸುಭಾಶ್ವಂದ್ರ ನಾಗರಾಳೆ, ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಕಲ್ಯಾಣರಾವ್ ಪಾಟೀಲ್, ನಿವೃತ್ತ ಡೀನ್ ಅಮರನಾಥ ಸೋಲಪುರೆ, ಬಿಡಿವಿಸಿ ಉಪಾಧ್ಯಕ್ಷ ಶಶಿಕಾಂತ ದುರ್ಗೆ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ್, ತಾಲೂಕಾಧ್ಯಕ್ಷ ಬಸವರಾಜ ತೊಂಡಾರೆ, ರಾಷ್ಟ್ರೀಯ ಬಸವದಳ ತಾಲೂಕಾಧ್ಯಕ್ಷ ರವೀಂದ್ರ ಕೊಳಕೂರ, ಉದ್ಯಮಿ ಕಾವೇರಿ ಪಾಟೀಲ, ಶಿವರಾಜ ನರಶೆಟ್ಟಿ, ಚನ್ನಪ್ಪಾ ಪರ್ತಾಪೂರೆ ಉಪಸ್ಥಿತರಿದ್ದರು. ಬಸವರಾಜ ಬಾಲಿಕಿಲೆ ಸ್ವಾಗತಿಸಿದರು. ಜ್ಯೋತಿ ತೂಗಾಂವೆ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X