ಕಾನೂನಿನ ಪ್ರಕಾರ ಹಾಗೂ ನ್ಯಾಯಸಂಹಿತೆಯಂತೆ ಎಡಿಜಿಪಿ ಚಂದ್ರಶೇಖರ್ ಸರಿಯಾಗಿಯೇ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸದರಿ ಅಧಿಕಾರಿಗೆ ಅಗತ್ಯವಿರುವ ನೈತಿಕ ಹಾಗೂ ಕಾನೂನಿನ ಬೆಂಬಲ ನೀಡುವುದು ರಾಜ್ಯದ ಜನತೆಯ ಮತ್ತು ನ್ಯಾಯಪರ ಹಾಗೂ ಕಾನೂನಿನ ಆಡಳಿತ ಬಯಸುವ ಎಲ್ಲರ ಕರ್ತವ್ಯವಾಗುತ್ತದೆ.
ಲೋಕಾಯುಕ್ತ ಎಸ್‌ಐಟಿಯ ಎಡಿಜಿಪಿ ಚಂದ್ರಶೇಖರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ನಡುವೆ ನಡೆಯುತ್ತಿರುವ ಸಮರ, ಅಧಿಕಾರಿಯ ಪೊಲೀಸ್ ದೂರಿನಿಂದ ನಿನ್ನೆ ಇನ್ನೊಂದು ತಿರುವು ಪಡೆದುಕೊಂಡಿದೆ. ಮೇಲ್ನೋಟಕ್ಕೆ ಇಬ್ಬರ ನಡುವೆ ನಡೆಯುತ್ತಿರುವ ‘ಇಗೋ ಸಮರ’ದಂತೆ ಕಾಣುತ್ತಿರುವ ಈ ಬೆಳವಣಿಗೆಯು ನಮ್ಮ ರಾಜಕೀಯ ವ್ಯವಸ್ಥೆ ಯಾವ ಮಟ್ಟಕ್ಕೆ ಇಳಿಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಅದರಲ್ಲೂ ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಈ ರಾಜ್ಯದ ಮಾಜಿ ಮುಖ್ಯಮಂತ್ರಿಯ ಮೇಲೆ ಮಾಡಿರುವ ಆರೋಪಗಳ ತೂಕ ಬಹಳ ದೊಡ್ಡದೆಂಬುದನ್ನು ನಾವು ಉಪೇಕ್ಷಿಸುವಂತಿಲ್ಲ. ಆ ಆರೋಪಗಳು ನಮ್ಮ ಸಾಂವಿಧಾನಿಕ ವ್ಯವಸ್ಥೆಯೇ ಕುಸಿಯುತ್ತಿರುವುದನ್ನು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಮೂಲಭೂತ ತತ್ವವೇ ಅಪಾಯದಲ್ಲಿರುವುದನ್ನು ಬೆರಳು ಮಾಡಿ ತೋರಿಸಿವೆ. ಹೀಗಾಗಿ ನಾಡಿನ ಜನತೆ, ಪ್ರಜ್ಞಾವಂತ ಬುದ್ಧಿಜೀವಿಗಳು ಹಾಗೂ ಪ್ರಭುತ್ವ ಯಂತ್ರಾಂಗಗಳು ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ.
ಎಡಿಜಿಪಿ ಚಂದ್ರಶೇಖರ್ ಅವರು ಮಾಡಿರುವ ಆರೋಪಗಳು ಇವು: ಸುಪ್ರೀಂಕೋರ್ಟಿನ ಆದೇಶದ (2013ರ ಸೆಪ್ಟೆಂಬರ್ 16) ಮೇರೆಗೆ ರಚಿಸಲಾದ ವಿಶೇಷ ತನಿಖಾ ತಂಡದ ಮುಖ್ಯಸ್ಥನಾದ ನಾನು, ನನ್ನ ಮುಂದೆ ಬಂದ ಅಕ್ರಮದ ಕುರಿತಾದ (16/14) ತನಿಖೆಯನ್ನು ಕೈಗೊಂಡಿದ್ದೇನೆಂದೂ, ಸದರಿ ಪ್ರಕರಣದಲ್ಲಿ ಆರೋಪಿಯಾಗಿರುವ ಎಚ್.ಡಿ.ಕುಮಾರಸ್ವಾಮಿಯವರು ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆಂದು ಹೇಳಿದ್ದಾರೆ. ಇದು ಆರೋಪ; ಇದಕ್ಕೆ ಎಡಿಜಿಪಿಯವರು ಹಲವು ಪುರಾವೆಗಳನ್ನು ಮುಂದಿಟ್ಟಿದ್ದಾರೆ. ವಾಸ್ತವದಲ್ಲಿ ‘ತನಿಖೆಗೆ ಅಡ್ಡಿಪಡಿಸುವ’ ಪುರಾವೆಗಳನ್ನು ಎಡಿಜಿಪಿಯವರು ಹೊಸದಾಗಿ ಹೇಳಬೇಕಿಲ್ಲ; ಏಕೆಂದರೆ ಆರೋಪಿ ಕುಮಾರಸ್ವಾಮಿಯವರು ಬಹಿರಂಗವಾಗಿ ಪತ್ರಿಕಾಗೋಷ್ಠಿ ಮಾಡಿಯೇ ಮಾತನಾಡಿದ್ದಾರೆ. ತನಿಖೆ ಮುಗಿದು, ಸಾಕ್ಷ್ಯಾಧಾರಗಳು ಸಿಕ್ಕಿ, ಅವರನ್ನು ಪ್ರಾಸಿಕ್ಯೂಷನ್ನಿಗೆ ಒಳಪಡಿಸಲು ರಾಜ್ಯಪಾಲರಲ್ಲಿ ಅನುಮತಿ ಕೋರಿರುವ ಕಡೆಯ ಹಂತದಲ್ಲಿ, ಅದೇ ಪ್ರಕರಣದ ಆರೋಪಿಯು ಬಹಿರಂಗವಾಗಿ, ಅದೇ ಕೇಸಿನ ತನಿಖಾ ತಂಡದ ಮುಖ್ಯಸ್ಥರ ಮೇಲೆ ಬಹಿರಂಗವಾಗಿ ಆರೋಪಗಳನ್ನು ಮಾಡುವುದು ನಿಜಕ್ಕೂ ಎಲ್ಲರೂ ಆತಂಕಕ್ಕೊಳಗಾಗಬೇಕಾದ ಸಂಗತಿ. ಈ ರೀತಿ ದೇಶದ ಎಲ್ಲಾ ಪ್ರಕರಣಗಳಲ್ಲಿ ನಡೆಯುತ್ತಾ ಹೋದರೆ, ನಮ್ಮ ಕಾನೂನು ವ್ಯವಸ್ಥೆ ಮತ್ತು ಸಾಂವಿಧಾನಿಕ ನೆಲದ ಕಾನೂನಿನ ಮೌಲ್ಯವೇ ಕುಸಿದು ಹೋಗುತ್ತದೆ. ಎಡಿಜಿಪಿಯವರು ದೂರಿನಲ್ಲಿ ಕಾಣಿಸಿರುವಂತೆ ಇದು ಬಿಎನ್‌ಎಸ್ ಸೆಕ್ಷನ್ 224ರ ಅಡಿಯಲ್ಲಿ ಅಪರಾಧ.
ಎರಡನೆಯದಾಗಿ, ತನಿಖಾಧಿಕಾರಿಯ ಮೇಲೆ ಸದರಿ ಆರೋಪಗಳನ್ನು ಮಾಡುತ್ತಿರುವ ಆರೋಪಿಯು ಕೇಂದ್ರ ಸಚಿವರಾಗಿರುವ ತನ್ನ ಸ್ಥಾನದ ದುರುಪಯೋಗ ಮಾಡಿಕೊಳ್ಳುತ್ತಿರಬಹುದಾದ ಸಾಧ್ಯತೆಗಳನ್ನು ಅವರು ಮುಂದಿಟ್ಟಿದ್ದಾರೆ.
ಮೂರನೆಯ ವಿಚಾರ ಮೇಲಿನ ಎರಡಕ್ಕಿಂತ ಇನ್ನೂ ಗಂಭೀರವಾದದ್ದು. ಹೀಗೆಯೇ ಮುಂದುವರೆದರೆ ನಮ್ಮ ಒಕ್ಕೂಟ ವ್ಯವಸ್ಥೆಯ ಬುನಾದಿಯೇ ಅಲುಗಾಡಬಹುದಾದ್ದು. ರಾಜ್ಯಪಾಲರು ಸದರಿ ಪ್ರಕರಣದಲ್ಲಿ ‘ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡುವ ಮೇಲಿನ ಪ್ರಾಧಿಕಾರ’ವಾಗಿದ್ದಾರೆ. ಅವರ ಮುಂದೆ ಇದೇ ಕೇಸಿನಲ್ಲಿ ಸದರಿ ಎಡಿಜಿಪಿಯವರ ತಂಡದ ಅಧಿಕಾರಿಯು ಇದೇ ಆರೋಪಿಯ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೇಳಿದ್ದಾರೆ. ರಾಜ್ಯಪಾಲರ ಕಚೇರಿಯಿಂದ ಎಸ್‌ಐಟಿಗೆ ಬಂದ ಪತ್ರದ ದಿನಾಂಕ ಮತ್ತು ಕುಮಾರಸ್ವಾಮಿಯವರು ಪತ್ರಿಕಾಗೋಷ್ಠಿಗಳಲ್ಲಿ ಝಳಪಿಸುತ್ತಿರುವ ಆಂತರಿಕ ದಾಖಲೆಗಳು ಸಾರ್ವಜನಿಕರಲ್ಲಿ ರಾಜ್ಯಪಾಲರ ಕಚೇರಿಯ ಗುರಿತು ಮಹತ್ವದ ಪ್ರಶ್ನೆಗಳನ್ನು ಏಳಿಸುತ್ತವೆ. ಎಡಿಜಿಪಿಯವರ ಪೊಲೀಸ್ ದೂರಿನ ಪ್ರಕಾರ ರಾಜಭವನವು 29.07.2024ರಂದು ಕುಮಾರಸ್ವಾಮಿಯವರ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡುವ ಸಂಬಂಧ, ಲೋಕಾಯುಕ್ತ ಎಸ್‌ಐಟಿಯು ಕೋರಿದ್ದ ಅನುಮತಿಯ ಮೇಲೆ ಸ್ಪಷ್ಟೀಕರಣ ಕೋರಿ ಪತ್ರವನ್ನು ಬರೆದಿತ್ತು. ಆದರೆ, ಆ ಪತ್ರವು ರಾಜಭವನದಿಂದ ಕೇವಲ ಅರ್ಧ ಕಿ.ಮೀ.ದೂರದಲ್ಲಿದ್ದ ಲೋಕಾಯುಕ್ತ ಕಚೇರಿಯನ್ನು ತಲುಪಲು 11 ದಿನಗಳು ತೆಗೆದುಕೊಂಡವು. ಅದೇ ಸಂದರ್ಭದಲ್ಲಿ, ರಾಜ್ಯಪಾಲರು ಮತ್ತು ಲೋಕಾಯುಕ್ತ ಎಸ್‌ಐಟಿ ನಡುವೆ ನಡೆದ ಆಂತರಿಕ ವ್ಯವಹಾರದ ದಾಖಲೆಗಳು, ಈ ಕೇಸಿನ ಆರೋಪಿ ಕುಮಾರಸ್ವಾಮಿಗೆ ಸಿಗುತ್ತದೆ ಮತ್ತು ಅವರು ಅದನ್ನು ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸುತ್ತಾರೆ ಎಂಬುದೇ ಇಲ್ಲಿ ಗಾಬರಿ ಹುಟ್ಟಿಸುತ್ತದೆ.
ಇನ್ನೂ ಮುಂದುವರೆದು, ಕೇಂದ್ರ ಸಚಿವರಾದ ಕುಮಾರಸ್ವಾಮಿಯವರು, ಕೇಂದ್ರ ಗೃಹ ಸಚಿವರಿಗೆ ತನ್ನ ವಿರುದ್ಧ ತನಿಖೆ ನಡೆಸುತ್ತಿರುವ ತನಿಖಾ ತಂಡದ ಮುಖ್ಯಸ್ಥರ ವಿರುದ್ಧ ಪತ್ರ ಬರೆಯುತ್ತೇನೆಂದು ಬಹಿರಂಗವಾಗಿ ಹೇಳುತ್ತಾರೆ; ಒಬ್ಬ ಕೇಂದ್ರ ಸಚಿವರು ಇನ್ನೊಬ್ಬರಿಗೆ ಬರೆದ ಈ ಪತ್ರವು ಎಲ್ಲಾ ಜಾಲತಾಣಗಳಲ್ಲಿ ಲಭ್ಯವಾಗುತ್ತದೆ ಎಂಬುದೂ ಗಂಭೀರ ಸಂಗತಿ ಎಂದು ಎಡಿಜಿಪಿ ತನ್ನ ದೂರಿನಲ್ಲಿ ಬರೆದಿದ್ದಾರೆ.
ಈ ವಿಚಾರಗಳ ಪೈಕಿ ಒಂದರಲ್ಲಿ ಈದಿನ.ಕಾಮ್ ಹೊರತಂದ ಪ್ರಕರಣವೂ ಸಾಂದರ್ಭಿಕವಾಗಿ ಅಂಟಿಕೊಂಡಿರುವುದರಿಂದ ಇನ್ನೊಂದು ವಿಚಾರವು ಹುಬ್ಬೇರಿಸುವಂತೆ ಮಾಡಿದೆ. ಮುಡಾ ಪ್ರಕರಣದಲ್ಲಿ ಮಾನ್ಯ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ಕೊಟ್ಟಿದ್ದು ಜುಲೈ 26ರಂದು. ಜುಲೈ 25ರಂದು ಕೆಲವು ದೂರುದಾರರು ನೀಡಿದ್ದ ದೂರಿಗೆ ಪ್ರತಿಕ್ರಿಯಿಸಿ ಅದರ ಮರುದಿನವೇ ಅವರು ಮುಖ್ಯಮಂತ್ರಿಗಳಿಗೆ ನೋಟಿಸ್ ಕೊಟ್ಟುಬಿಟ್ಟಿದ್ದರು. ಆ ಸಂದರ್ಭದಲ್ಲಿ ಈದಿನ.ಕಾಮ್ ‘ರಾಜ್ಯಪಾಲರ ಕಚೇರಿಗೆ ತನಿಖೆಗೆ ಅಥವಾ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೇಳಿ’ ಇನ್ಯಾವುದಾದರೂ ದೂರು ಬಂದರೆ ಹೇಗೆ ನಡೆದುಕೊಂಡಿದ್ದಾರೆಂಬುದನ್ನು ಅರಿಯಲು ಅದರ ಹಿಂದೆ ಬಿದ್ದಿತ್ತು. ಆಗ ನಮಗೆ ಸಿಕ್ಕಿದ್ದ ಮಾಹಿತಿಯು ಗಾಬರಿ ಹುಟ್ಟಿಸಿತ್ತು. ಅದೇನೆಂದರೆ ಸುಮಾರು 8ರಿಂದ 10 ತಿಂಗಳುಗಳ ಹಿಂದೆಯೇ ಲೋಕಾಯುಕ್ತ ಪೊಲೀಸರು ಇದೇ ರಾಜ್ಯಪಾಲರ ಮುಂದೆ ಕೆಲವು ಮನವಿ ಸಲ್ಲಿಸಿ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೋರಿದ್ದರು. ಅದರಲ್ಲಿ ಕುಮಾರಸ್ವಾಮಿಯವರ ವಿರುದ್ಧದ ಸಾಯಿ ವೆಂಕಟೇಶ್ವರ ಮಿನರಲ್ಸ್ ಅಕ್ರಮವೂ ಒಂದಾಗಿತ್ತು. ಇದನ್ನು ಆಗಸ್ಟ್ 8ರಂದು ಈದಿನ.ಕಾಮ್ ಬ್ರೇಕ್ ಮಾಡಿ, ಪ್ರಕಟಿಸಿತ್ತು.
ಈಗ ಎಡಿಜಿಪಿಯವರ ದೂರಿನಿಂದ ತಿಳಿದು ಬರುತ್ತಿರುವುದೇನೆಂದರೆ, ಅದೇ ದಿನ ಲೋಕಾಯುಕ್ತ ಎಸ್‌ಐಟಿಯವರಿಗೆ ರಾಜ್ಯಪಾಲರು ಅದೇ ದೂರಿನ ಕುರಿತು ಸ್ಪಷ್ಟೀಕರಣ ಕೇಳಿ ಪತ್ರ ಕಳಿಸಿದ್ದಾರೆ. ಆದರೆ, ರಾಜ್ಯಪಾಲರ ಕಚೇರಿಯಿಂದ ಬಂದ ಪತ್ರದ ದಿನಾಂಕ ಮಾತ್ರ ಜುಲೈ 29 ಎಂದಿದೆ. ಅಂದರೆ, ಇಲ್ಲಿ ಗುಮಾನಿ ಹುಟ್ಟುವುದು, ಈದಿನ.ಕಾಮ್ ಮತ್ತು ಇತರ ಮಾಧ್ಯಮಗಳು ಬ್ರೇಕ್ ಮಾಡಿದ ಈ ಸುದ್ದಿಯು (ಸಿದ್ದರಾಮಯ್ಯನವರ ಮೇಲಿನ ಖಾಸಗಿ ವ್ಯಕ್ತಿಗಳ ದೂರಿಗೆ ಒಂದೇ ದಿನದಲ್ಲಿ ನೋಟಿಸ್ ಕೊಟ್ಟ ರಾಜ್ಯಪಾಲರು, ಕುಮಾರಸ್ವಾಮಿಯವರ ಮೇಲೆ ಪುರಾವೆ ಸಮೇತ ತನಿಖೆಯಲ್ಲಿ ಸಾಬೀತಾಗಿರುವ ವಿಚಾರದ ಪ್ರಾಸಿಕ್ಯೂಷನ್ನಿಗೆ ಏಳೆಂಟು ತಿಂಗಳಿಗೂ ಹೆಚ್ಚು ಕಾಲದಿಂದ ಏನೂ ಮಾಡದೇ ಕೂತಿದ್ದಾರೆ ಎಂಬ ಸುದ್ದಿಯು) ಪ್ರಕಟವಾದ ಕೂಡಲೇ ಹಳೆಯ ತಾರೀಖನ್ನು ನಮೂದಿಸಿ ಪತ್ರ ಕಳಿಸಿದರೇ ಎಂಬ ಪ್ರಶ್ನೆ ಏಳುತ್ತದೆ. ಇಲ್ಲದಿದ್ದರೆ ಕೇವಲ 500 ಮೀ. ದೂರದಲ್ಲಿರುವ ಲೋಕಾಯುಕ್ತಕ್ಕೆ ರಾಜಭವನದಿಂದ ಹೊರಟ ಪತ್ರವೇಕೆ 11 ದಿನಗಳನ್ನು ತೆಗೆದುಕೊಳ್ಳುತ್ತದೆ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮುಂಬೈನ ಧಾರಾವಿ ಕೊಳೆಗೇರಿ ಪುನರಭಿವೃದ್ಧಿ ಎಂಬ ದೈತ್ಯ ಹಗರಣ
ಇವೆಲ್ಲವೂ, ಇಂದು ಒಕ್ಕೂಟ ಸರ್ಕಾರದ ಅಡಿಯಲ್ಲಿರುವ ತನಿಖಾ ಸಂಸ್ಥೆಗಳು, ರಾಜ್ಯಪಾಲರ ಕಚೇರಿಯ ಕಾರ್ಯನಿರ್ವಹಣೆಯ ಕುರಿತಂತೆ ಆತಂಕ ಹುಟ್ಟಿಸುವ ಸಂಗತಿಗಳಾಗಿವೆ. ರಾಜ್ಯಪಾಲರ ಕಚೇರಿಯು ಕುಮಾರಸ್ವಾಮಿಯವರ ಜೊತೆಗೆ ಶಾಮೀಲಾಗಿದೆಯೇ ಎಂಬ ಪ್ರಶ್ನೆಯು ಸಾರ್ವಜನಿಕರಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಎಡಿಜಿಪಿಯವರು ಇಂಥದ್ದೇನೂ ಹೇಳಿಲ್ಲ. ಆದರೆ, ಈಗಾಗಲೇ ಈ ವಿಚಾರದಲ್ಲಿ ಸುದ್ದಿ ಪ್ರಕಟಿಸಿದ್ದ ಈದಿನ.ಕಾಮ್‌ಗೆ, ರಾಜ್ಯಪಾಲರ ಪತ್ರದ ನಿಧಾನ ನಡಿಗೆ ಮತ್ತು ಸದರಿ ವಿಚಾರ ಹೊರಗೆ ಸ್ಫೋಟಗೊಂಡ ದಿನಗಳ ಸಂದರ್ಭವನ್ನು ಗಮನಿಸಿದರೆ, ಈ ಪ್ರಶ್ನೆಯು ಸಹಜವಾಗಿಯೇ ಹುಟ್ಟುತ್ತದೆ.
ತಮ್ಮ ಮೇಲೆ ಕುಮಾರಸ್ವಾಮಿಯವರು ಮಾಡಿದ ಇತರ ಆರೋಪಗಳ ಕುರಿತೂ ಎಡಿಜಿಪಿಯ ದೂರಿನಲ್ಲಿ ಇನ್ನೂ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಲಾಗಿದೆ. ಇವೆಲ್ಲಾ ಅಂಶಗಳೂ ಸಹಾ ಕಾನೂನಿನ ವ್ಯವಸ್ಥೆಯೇ ಕುಸಿದು ಬಿದ್ದಿದೆಯಾ? ನಿರ್ದಿಷ್ಟ ವ್ಯಕ್ತಿಯೊಬ್ಬರ ಮೇಲೆ ದೂರು ದಾಖಲಾಗಿ, ತನಿಖೆ ನಡೆದು, ತನಿಖೆಯಲ್ಲಿ ಪುರಾವೆ ಸಮೇತ ಆ ವ್ಯಕ್ತಿ ಸಿಕ್ಕಿ ಹಾಕಿಕೊಂಡು, ಆ ವ್ಯಕ್ತಿ ಜನಪ್ರತಿನಿಧಿಯಾಗಿದ್ದರು ಎಂಬ ಕಾರಣಕ್ಕೆ ಅವರ ಮೇಲೆ ಪ್ರಾಸಿಕ್ಯೂಷನ್ ನಡೆಸಲು ಕೇಂದ್ರ ಸರ್ಕಾರದ ಅಡಿಯಲ್ಲಿರುವ ರಾಜ್ಯಪಾಲರ ಬಳಿ ಹೋಗಬೇಕಾಗುತ್ತದೆ ಎಂಬುದರಿಂದ, ಆ ನಿರ್ದಿಷ್ಟ ಪ್ರಭಾವಿ ವ್ಯಕ್ತಿ ಇಡೀ ಕಾನೂನು ವ್ಯವಸ್ಥೆಗೆ ಸವಾಲೊಡ್ಡುವಂತೆ ನಡೆದುಕೊಳ್ಳುವುದು ತೀರಾ ತೀರಾ ಅಸಾಮಾನ್ಯವಾದುದು. ಕುಮಾರಸ್ವಾಮಿಯವರು ಮತ್ತು ಅವರ ಕುಟುಂಬದ ಇತರ ವ್ಯಕ್ತಿಗಳು ಇನ್ನೂ ಕೆಲವು ಕೇಸುಗಳಲ್ಲಿ ಇದೇ ರೀತಿ ನಡೆದುಕೊಂಡಿರುವುದು ಎದ್ದು ಕಾಣುತ್ತಿದೆ. ಆ ಎಲ್ಲರೂ ಸಹಾ ರಾಜ್ಯದಲ್ಲಿ ಮತ್ತು ದೇಶದಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದವರಾಗಿದ್ದಾರೆ. ಹೀಗಿರುವಾಗ, ಇದು ದೇಶದಲ್ಲಿ ನೆಲದ ಕಾನೂನು (Law of the land) ಇವರ ವಿಚಾರದಲ್ಲಿ ಕೆಲಸ ಮಾಡುವುದಿಲ್ಲವೇ ಎಂಬಂತಹ ಪ್ರಶ್ನೆಗಳನ್ನು ಎತ್ತುತ್ತದೆ.
ಈ ಚೌಕಟ್ಟಿನಲ್ಲಿ ಇದನ್ನು ಅರ್ಥ ಮಾಡಿಕೊಳ್ಳದೇ, ಪರಸ್ಪರ ಇಗೋ ಸಂಘರ್ಷ ನಡೆಸುತ್ತಿರುವ ಇಬ್ಬರು ವ್ಯಕ್ತಿಗಳ ನಡುವಿನ ಸಮರ ಎಂಬಂತೆ ನೋಡಿದರೆ, ಈ ವಿದ್ಯಮಾನದ ತೂಕವನ್ನು ಕಡೆಗಣಿಸಿದಂತಾಗುತ್ತದೆ. ಸದರಿ ಎಡಿಜಿಪಿಯು ತನ್ನ ಸಹೋದ್ಯೋಗಿ ಸಿಬ್ಬಂದಿಗಳಿಗೆ ಬರೆದ ಪತ್ರದಲ್ಲಿ ‘ಹಂದಿಗಳೊಂದಿಗೆ ಗುದ್ದಾಡಬಾರದು’ ಎಂದು ಹೇಳಬೇಕಿತ್ತೇ ಎನ್ನುವಂತಹ ಕೆಲವು ಪ್ರಶ್ನೆಗಳನ್ನು ನಾವು ಕೇಳಬೇಕಾಗುತ್ತದೆ. ಜಾಮೀನಿನ ಮೇಲಿರುವ ಆರೋಪಿ ಎಂದು ಪದೇ ಪದೇ ಕುಮಾರಸ್ವಾಮಿಯವರನ್ನು ಸಂಬೋಧಿಸುತ್ತಿರುವುದರಲ್ಲಿ ನಿಜವೇ ಇರಬಹುದಾದರೂ, ಅವರ ವ್ಯಂಗ್ಯ ಮತ್ತು ಸಿಟ್ಟು ಸಹಾ ಅವುಗಳಲ್ಲಿ ಕಾಣುತ್ತಿದೆ.
ಆದರೆ, ಅವನ್ನು ಹೊರತುಪಡಿಸಿ ಕಾನೂನಿನ ಪ್ರಕಾರ ಹಾಗೂ ನ್ಯಾಯಸಂಹಿತೆಯಂತೆ ಅವರು ಸರಿಯಾಗಿಯೇ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸದರಿ ಅಧಿಕಾರಿಗೆ ಅಗತ್ಯವಿರುವ ನೈತಿಕ ಹಾಗೂ ಕಾನೂನಿನ ಬೆಂಬಲ ನೀಡುವುದು ರಾಜ್ಯದ ಜನತೆಯ ಮತ್ತು ನ್ಯಾಯಪರ ಹಾಗೂ ಕಾನೂನಿನ ಆಡಳಿತ ಬಯಸುವ ಎಲ್ಲರ ಕರ್ತವ್ಯವಾಗುತ್ತದೆ.
