ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ದರ್ಶನ್
ಭ್ರಷ್ಟಾಚಾರಿಗಳ ವಿರುದ್ಧ ಮತ ಚಲಾಯಿಸಿದ್ದೇನೆ ಎಂದ ಪ್ರಕಾಶ್ ರಾಜ್
ರಾಜ್ಯ ವಿಧಾನಸಭಾ ಚುನಾವಣೆಗೆ ಬುಧವಾರ ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಹಿರಿಯ ನಟ ಶಿವರಾಜ್ ಕುಮಾರ್, ದರ್ಶನ್, ಗಣೇಶ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ತಾರೆಯರು ತಮ್ಮ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಬೆಂಗಳೂರಿನ ರಾಚೇನಹಳ್ಳಿಯಲ್ಲಿರುವ ಮತಗಟ್ಟೆಗೆ ಪತ್ನಿ ಗೀತಾ ಅವರೊಂದಿಗೆ ತೆರಳಿ ಶಿವರಾಜ್ ಕುಮಾರ್ ಮತ ಚಲಾಯಿಸಿದ್ದಾರೆ. ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, “ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡಿ, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ನ ಸ್ಟಾರ್ ನಟ ದರ್ಶನ್ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಸಾಮಾನ್ಯರಂತೆ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಇಂದು ಬೆಳಗ್ಗೆಯೇ ಮತದಾನ ಮಾಡಿದ್ದು, ಟ್ವಿಟರ್ ಖಾತೆಯಲ್ಲಿ ತಾವು ಮತ ಚಲಾಯಿಸಿರುವ ಗುರುತಿಗಾಗಿ ಫೋಟೋ ಹಂಚಿಕೊಂಡು, “ನಮ್ಮ ಒಂದು ಕ್ಷಣದ ನಿರ್ಧಾರ ನಾಡಿನ ಭವಿಷ್ಯವನ್ನೇ ಬದಲಿಸಬಲ್ಲದು. ವಿವೇಚನೆಯಿಂದ ಮತ ಹಾಕೋಣ. ನಾನು ಮತ ಹಾಕಿ ಬಂದೆ. ನೀವು?” ಎಂದು ತಮ್ಮ ಅಭಿಮಾನಿಗಳಿಗೆ ಮತ ಚಲಾವಣೆಗೆ ಕರೆ ನೀಡಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಬೆಂಗಳೂರಿಗೆ ಆಗಮಿಸಿ ಶಾಂತಿನಗರದ ಮತಗಟ್ಟೆಯಲ್ಲಿ ಸಾಮಾನ್ಯರ ಜೊತೆಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಮತದಾನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನಾವು ಕೋಮುವಾದಿ ರಾಜಕಾರಣದ ವಿರುದ್ಧ ಮತ ಚಲಾಯಿಸಬೇಕಿದೆ. ಇಂತಹ ಚುನಾವಣೆಯ ಸಂದರ್ಭದಲ್ಲೇ ಜನ ತಮ್ಮ ನಿರ್ಧಾರವನ್ನು ಪ್ರಕಟಿಸುವ ಹಕ್ಕನ್ನು ಹೊಂದಿರುತ್ತಾರೆ. ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು ಎಂಬುದು ಮತದಾರರಿಗೆ ಚೆನ್ನಾಗಿ ಗೊತ್ತಿರುತ್ತದೆ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಇರಬೇಕಿದೆ. ನಾವು ಸೌಹಾರ್ದತೆಯನ್ನು ಉಳಿಸಿಕೊಳ್ಳಬೇಕಿದೆ. ಕರ್ನಾಟಕದಿಂದ ಕೋಮುವಾದವನ್ನು ಕಿತ್ತೆಸೆಯಬೇಕಿದೆ” ಎಂದಿದ್ದಾರೆ.
ʼಕಾಂತಾರʼ ಖ್ಯಾತಿಯ ನಟಿ ಸಪ್ತಮಿ ಗೌಡ ಕೂಡ ಮತ ಚಲಾವಣೆ ಮಾಡಿದ್ದು, “ನಿಮ್ಮ ಮತ, ನಿಮ್ಮ ಹಕ್ಕು. ನೀವು ಮತ ಚಲಾಯಿಸಿ” ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.