ಮಧ್ಯಪ್ರದೇಶ ಆಡಳಿತಾರೂಢ ಬಿಜೆಪಿಯಲ್ಲಿ ಅಂತರಿಕ ಬಿಕ್ಕಟ್ಟು ಬಹಿರಂಗಗೊಂಡಿದೆ. ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಅಸಮಾಧಾಗೊಂಡಿದ್ದಾರೆ. ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರವನ್ನು ದೂರುತ್ತಿದ್ದಾರೆ. ಇದು, ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇತ್ತೀಚೆಗೆ, ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿತ್ತು. ಆ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಕಾರಣಕ್ಕಾಗಿ ಅಸಮಾಧಾನಗೊಂಡಿದ್ದ ದಿಯೋರಿ ಕ್ಷೇತ್ರದ ಶಾಸಕ ಬಿಹಾರಿ ಪಟೇರಿಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು, ಮಧ್ಯಪ್ರದೇಶ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.
ಪಟೇರಿಯ ಮಾತ್ರವಲ್ಲದೆ, ಹಲವಾರು ಬಿಜೆಪಿ ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಗೌಪ್ಯ ಸಭೆಗಳನ್ನು ನಡೆಸುತ್ತಿದ್ದಾರೆ. ಕೆಲ ಶಾಸಕರು ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ಇತ್ತೀಚೆಗೆ, ಮೌಗಂಜ್‌ನ ಬಿಜೆಪಿ ಶಾಸಕ ಪ್ರದೀಪ್ ಪಟೇಲ್ ಅವರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಪೊಲೀಸರು ಮದ್ಯ ಮಾಫಿಯಾವನ್ನು ರಕ್ಷಿಸುತ್ತಿದ್ದಾರೆ. ಕೆಲ ಗೂಂಡಾಗಳು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯು ಬಿಜೆಪಿಯೊಳಗಿನ ಪ್ರಕ್ಷುಬ್ಧತೆ ಸೃಷ್ಠಸಿತ್ತು.

ಇನ್ನು, ನಾರಿಯಾವಾಲಿ ಕ್ಷೇತ್ರದ ಬಿಜೆಪಿ ಶಾಸಕ ಕೂಡ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರೂ, ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದರು.
ಮಧ್ಯಪ್ರದೇಶದಲ್ಲಿ ಒಬ್ಬರ ನಂತರ ಒಬ್ಬರಂತೆ ಬಿಜೆಪಿ ಶಾಸಕರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ, ಪೋಸ್ಟ್, ರಾಜೀನಾಮೆ ಮೂಲಕ ಸುದ್ದಿಯಾಗುತ್ತಿದ್ದಾರೆ. ಬಿಜೆಪಿಯ ಆಂತರಿಕ ಬಿಕ್ಕಟ್ಟನ್ನು ಬಹಿರಂಗಗೊಳಿಸಿದ್ದಾರೆ.