ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ದೇಶದ ಖ್ಯಾತ ಮಾನವಹಕ್ಕುಗಳ ಹೋರಾಟಗಾರ, ಪ್ರೊ. ಜಿ.ಎನ್.ಸಾಯಿಬಾಬಾ ಅವರು ಹೃದಯಾಘಾತದಿಂದ ಹೈದರಾಬಾದ್ನ ನಿಮ್ಸ್ನಲ್ಲಿ ಶನಿವಾರ ರಾತ್ರಿ 9ರ ಸುಮಾರಿಗೆ ನಿಧನರಾಗಿದ್ದಾರೆ.
ಅವರಿಗೆ 58 ವರ್ಷ ವಯಸ್ಸಾಗಿತ್ತು. ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಜಿ ಎನ್ ಸಾಯಿಬಾಬಾ ಅವರು, ಸುದೀರ್ಘ ಸೆರೆವಾಸದ ನಂತರ ಈ ವರ್ಷ ಮಾರ್ಚ್ನಲ್ಲಿ ಖುಲಾಸೆಗೊಂಡಿದ್ದರು.
ಶಂಕಿತ ಮಾವೋವಾದಿ ಸಂಪರ್ಕಗಳ ಆರೋಪದ ಮೇಲೆ 2014 ರಲ್ಲಿ ಅವರನ್ನು ಬಂಧಿಸಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ಅದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದ್ದರು.
ಶೇ. 90 ರಷ್ಟು ಅಂಗ ವೈಕಲ್ಯ ಹೊಂದಿದ್ದ ಅವರ ದೇಹ ಹತ್ತು ವರ್ಷದ ನರಕ ಸದೃಷ ಜೈಲುವಾಸ, ಸರ್ಕಾರ ಹಾಗೂ ಜೈಲು ಅಧಿಕಾರಿಗಳ ದುರುದ್ದೇಶ ಪೂರ್ವಕ ನಿರ್ಲಕ್ಷ್ಯದಿಂದಾಗಿ ಇನ್ನಷ್ಟು ಬಿಗಡಾಯಿಸಿತ್ತು.ಇದನ್ನು ಜೈಲಿನಿಂದ ಹೊರಗಡೆ ಬಂದ ನಂತರ ಅವರೇ ಪತ್ರಿಕಾಗೋಷ್ಠಿಯಲ್ಲಿ ವಿವರವಾಗಿ ತಿಳಿಸಿದ್ದರು.
ಬಿಡುಗಡೆಯಾಗಿ ಹೊರಗಡೆ ಬಂದ ಮೇಲೂ ಹಲವಾರು ಹೊಸ ಹಾಗೂ ವಿಲಕ್ಷಣ ದೈಹಿಕ ತೊಂದರೆಗಳು ಕಾಡತೊಡಗಿದ್ದವು. ಮೊನ್ನೆ ಸರ್ಜಾರಿಯೊಂದಕ್ಕೆ ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು.. ಆದರೆ ಅದು ವಿಪರೀತ ಪರಿಣಾಮಗಳಿಗೆ ಕಾರಣವಾಗಿ ಇಂದು ರಾತ್ರಿ 8.37ಕ್ಕೆ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
