ಯುಬಿಡಿಟಿ ಹಳೆಯ ವಿದ್ಯಾರ್ಥಿಗಳ ಸಂಘದ ‘ಯುಬಿಡಿಟಿ ಉಳಿಸಿ ಚಳುವಳಿ’ಗೆ ಸರ್ಕಾರದ ಸಕಾರಾತ್ಮಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂಘ ಮತ್ತು ಎಐಡಿಎಸ್‌ಒ ನೇತೃತ್ವದಲ್ಲಿ ಅಕ್ಟೋಬರ್ 16ರಂದು ದಾವಣಗೆರೆ ನಗರದ ಸ್ವಯಂಪ್ರೇರಿತ ಸಂಪೂರ್ಣ ಬಂದ್‌ಗೆ ಕರೆ ನೀಡಿದೆ.
ʼಯುಬಿಡಿಟಿ ಉಳಿಸಿ ಪೇಮೆಂಟ್ ಕೋಟಾ ರದ್ದುಪಡಿಸಿ’ ಎಂಬ ಘೋಷಣೆಯಡಿ ದಾವಣಗೆರೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಯುಬಿಡಿಟಿಯಲ್ಲಿ ಪೇಮೆಂಟ್ ಕೋಟಾ ರದ್ದುಪಡಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಒಂದು ತಿಂಗಳಿಂದ ಚಳವಳಿ ನಡೆಸುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಯಾವುದೇ ರೀತಿಯ ಸ್ಪಂದನೆಯನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ.

ಬಡ ವಿದ್ಯಾರ್ಥಿಗಳ ಪಾಲಿಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳು ಆಶಾಕಿರಣವಾಗಿವೆ. ಬಡ ವಿದ್ಯಾರ್ಥಿಗಳಿಗೆ ಈಗಿರುವ ಎಂಜಿನಿಯರಿಂಗ್ ಶುಲ್ಕ ₹41,000ವನ್ನು ಭರಿಸುವುದೇ ಕಷ್ಟಸಾಧ್ಯ. ಬಡವರ ಪಾಲಿಗಿದ್ದ ಎಂಜಿನಿಯರಿಂಗ್ ಶಿಕ್ಷಣವನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರದ ವ್ಯಾಪಾರಿ ದೋರಣೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಜನರಿಂದ ಬಂದ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ. ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಎಲ್ಲ ವ್ಯಾಪಾರಸ್ಥರ ಸಂಘಟನೆಗಳು, ಆಟೋ, ಬಸ್, ಲಾರಿ ಸೇರಿದಂತೆ ವಿವಿಧ ಸಾರಿಗೆ ಸಂಘಟನೆಗಳು, ಬೋಧಕ ಮತ್ತು ಬೋಧಕೇತರ ಶೈಕ್ಷಣಿಕ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಯುವಜನ ಸಂಘಟನೆಗಳು, ವೈದ್ಯರ ಸಂಘಟನೆ ಸೇರಿದಂತೆ ನಗರದ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ದಾವಣಗೆರೆ ಹೆಮ್ಮೆಯ ಯುಬಿಡಿಟಿ ಉಳಿಸಲು ನಡೆಯುತ್ತಿರುವ ಬಂದ್ ಯಶಸ್ವಿಗೊಳಿಸಲು ತಯಾರಿ ನಡೆಸಿವೆ.
ಈ ಸುದ್ದಿ ಓದಿದ್ದೀರಾ? ಗೌರಿ ಲಂಕೇಶ್ ಹತ್ಯೆ ಪ್ರಕರಣ | ಜಾಮೀನಿನ ಮೇಲೆ ಹೊರಬಂದ ಆರೋಪಿಗಳಿಗೆ ಸಂಘಪರಿವಾರದಿಂದ ಸನ್ಮಾನ!
ಹಲವು ಸಂಘಟನೆಗಳ ಮುಖಂಡರ ಸಭೆ ಕರೆದು ಬಂದ್ ಯಶಸ್ವಿಗೊಳಿಸಲು ಪೂರ್ವಬಾವಿ ಸಭೆಯನ್ನು ಕೂಡ ನಡೆಸಲಾಗಿದೆ. ನಗರದ ಬಡಾವಣೆಗಳು, ಮುಖ್ಯ ರಸ್ತೆಗಳು, ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವ್ಯಾಪಕ ಪ್ರಚಾರ ಕೂಡ ನಡೆಸಲಾಗುತ್ತಿದ್ದು, ಬಂದ್ ಯಶಸ್ವಿಗೊಳಿಸಲು ಕರೆ ನೀಡಲಾಗಿದೆ. ವಿವಿಧ ಕಡೆ ಭಿತ್ತಿ ಪತ್ರಗಳನ್ನು ಅಂಟಿಸಿ ಬಿರುಸಿನ ಪ್ರಚಾರ ಮಾಡಲಾಯಿತು.
ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಹಾಗೂ ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್ ಸೇರಿದಂತೆ ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ಸದಸ್ಯರಾದ ಅಭಿಷೇಕ್, ಆದರ್ಶ್, ರೋಹಿತ್, ಗೌತಮ್, ಶಿವಕುಮಾರ್ ಹಾಗೂ ಎಐಡಿಎಸ್‌ಒನ ಕಾರ್ಯಕರ್ತರು ಇದ್ದರು.