ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಎಲ್.ಮಂಜಯ್ಯಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ದಬ್ಬೇಘಟ್ಟ ಹೋಬಳಿ ಘಟಕದ ಅಧ್ಯಕ್ಷ ಕೆ.ಟಿ.ಸಂಪತ್ತು ತಿಳಿಸಿದ್ದಾರೆ.
ತುರುವೇಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅ. 26 ರಂದು ದಬ್ಬೇಘಟ್ಟ ಹೋಬಳಿಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷರ ನಿರ್ದೇಶನದ ಮೇರೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ದಬ್ಬೇಘಟ್ಟ ಹೋಬಳಿ ಅಧ್ಯಕ್ಷರು, ಪದಾಧಿಕಾರಿಗಳ ಅಭಿಪ್ರಾಯ ಪಡೆದು ದಬ್ಬೇಘಟ್ಟ ಹೋಬಳಿಯ ಲಕ್ಷ್ಮೀದೇವರಹಳ್ಳಿ ಗ್ರಾಮದ ನಿವೃತ್ತ ಪ್ರಾಧಾಪ್ಯಕ ಎಲ್.ಮಂಜಯ್ಯಗೌಡರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಅವರು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷರಾದ ಎಲ್.ಮಂಜಯ್ಯಗೌಡರು ತಾಲ್ಲೂಕಿನ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ತಾಲ್ಲೂಕು ಕನ್ನಡ ಭಾಷಾ ಭೋಧಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಇವರು, ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಘಟನಾ ಕಲೆಯಲ್ಲಿ ಹೆಚ್ಚು ಆಸಕ್ತಿಯುಳ್ಳವರಾಗಿದ್ದಾರೆ ಎಂದು ಸಂಪತ್ ತಿಳಿಸಿದರು. ದಬ್ಬೇಘಟ್ಟ ಗ್ರಾಮದ ಭೈರವ ಕಾನ್ವೆಂಟ್ ಆವರಣದಲ್ಲಿ ಅ.26 ರ ಶನಿವಾರ ಬೆಳಗ್ಗೆ 8 ಕ್ಕೆ ಸಮ್ಮೇಳನ ಪ್ರಾರಂಭವಾಗಿ ಅದೇ ದಿನ ಸಂಜೆಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಎಂ.ಟಿ.ಕೃಷ್ಣಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್.ಜಿ.ಸಿದ್ದರಾಮಯ್ಯನವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಗಾಂಧೀ ಸೇವಾ ಪ್ರಶಸ್ತಿ ಪುರಸ್ಕೃರಾದ ಪ್ರೊ.ಜಿ.ಬಿ.ಶಿವರಾಜ್ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ಆದಿಚುಂಚನಗಿರಿ ಮಠದ ಪೀಠಾಕ್ಷರಾದ ನಿರ್ಮಲಾನಂಧನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮಾಜಿ ಶಾಸಕರಾದ ಮಸಾಲ ಜಯರಾಮ್, ಎಚ್.ಬಿ.ನಂಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು ಸೇರಿದಂತೆ ಅನೇಕ ಗಣ್ಯರು, ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರು ಆಗಮಿಸಲಿದ್ದಾರೆ ಎಂದು ಸಂಪತ್ ತಿಳಿಸಿದರು.
ಈ ಸಂಧರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣಿ ಶ್ರೀಕಂಠೇಗೌಡರು, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಮುಖಂಡರಾದ ಉಗ್ರೇಗೌಡರು, ಗೌರವಾಧ್ಯಕ್ಷ ಹೇಮಚಂದ್ರು, ಹುಲಿಕಲ್ ಕೃಷ್ಣಾಚಾರ್, ಮಂಜುನಾಥ್, ಕೆ.ಬಿ.ರಾಮಸ್ವಾಮಿ ಇನ್ನಿತರರು ಇದ್ದರು.
ವರದಿ – ನಾಗಭೂಷಣ್ ತುರುವೇಕೆರೆ