ಮೈಸೂರು-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಹಂದಿಜೋಗ ಸಮುದಾಯದ ಜಾಗದ ತಲೆಬಾಗಿಲಿನಲ್ಲಿರುವ 30×40 ಜಾಗವನ್ನು ಅಪರಿಚಿತ ವ್ಯಕ್ತಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಡಿಎಸ್‌ಎಸ್‌ನಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಮನಗರ ಜಿಲ್ಲಾ ಸಮಿತಿಯ ಮುಂದಾಳತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಧರಣಿಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಪುನೀತ್ ರಾಜ್ ಮಾತನಾಡಿ, “ಪಟ್ಟಣದ ಅರ್ಕಾವತಿ ಬಡಾವಣೆಯ 1ನೇ ವಾರ್ಡಿನಲ್ಲಿರುವ 157ನೇ ಸರ್ವೆ ನಂಬರಿನ ಸರ್ಕಾರಿ ಗೋಮಾಳದಲ್ಲಿ 16.5 ಗುಂಟೆಯಲ್ಲಿ ಹಂದಿಜೋಗ ಸಮುದಾಯದ 15 ಕುಟುಂಬಗಳು ಮೂರು ತಲೆಮಾರುಗಳಿಂದ ಹಂದಿಗಳನ್ನು ಸಾಕಿಕೊಂಡು ವಾಸವಾಗಿದ್ದಾರೆ. ಈ ಜಾಗವನ್ನು ಅಪರಿಚಿತ ವ್ಯಕ್ತಿಯೊಬ್ಬ ಅನಧಿಕೃತವಾಗಿ ಖಾತೆ ಮಾಡಿಸಿಕೊಂಡಿರುವುದಲ್ಲದೆ, ಓಡಾಡಲು ಜಾಗವಿಲ್ಲದಂತೆ ತಡೆಗೋಡೆ ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಅಕ್ರಮ ಖಾತೆ ರದ್ದುಗೊಳಿಸಿ, ಒತ್ತುವರಿ ತೆರವುಗೊಳಿಸಬೇಕು. ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಿಕೊಡಬೇಕು” ಎಂದು ಒತ್ತಾಯಿಸಿದರು.

“ಪ್ರತಿಭಟನಾ ನಿರತ ಸ್ಥಳಕ್ಕೆ ಖುದ್ದು ಜಿಲ್ಲಾಧಿಕಾರಿಗಳೇ ಬಂದು, ನಮ್ಮ ಅಹವಾಲು ಸ್ವೀಕರಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ಜಿಲ್ಲಾಧಿಕಾರಿಗಳು ಕಚೇರಿಗೆ ಹೋಗುವಾಗ, ಬರುವಾಗ ಧರಣಿ ನಿರತ ಸ್ಥಳದ ಮುಂದೆ ಹೋಗಬೇಕು. ಆದರೂ ಯಾಕೆ ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ. ಅವರೂ ಕೂಡ ಅಸ್ಪೃಶ್ಯತೆ ಆಚರಿಸುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದರು.

“ನಾಲ್ಕು ದಿನಗಳ ಹಿಂದೆಯೇ ನಮ್ಮ ಸಮಸ್ಯೆ ಕೇಳಬೇಕೆಂದು ಮನವಿ ಮಾಡಿದ್ದರೂ ಕೂಡ ತಿರುಗಿ ನೋಡದ ಜಿಲ್ಲಾಧಿಕಾರಿಗಳ ನಡೆ ಸರಿಯಾದುದಲ್ಲ. ನಗರಸಭೆಯಲ್ಲಿ ಯಾರಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆಯೆಂದು ಪತ್ತೆಹಚ್ಚಿ ಅಕ್ರಮ ಖಾತೆ ರದ್ದುಪಡಿಸಬೇಕು. ಅಕ್ರಮವಾಗಿ ಖಾತೆ ಮಾಡಿದ ನಗರಸಭಾ ಅಧಿಕಾರಿಗಳ ಎದುರು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಈ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆಯಿದೆ. ಇದನ್ನು ತಿಳಿದಿದ್ದರೂ ಕೂಡ ಕಾಂಪೌಂಡ್ ಹಾಕಿಕೊಳ್ಳಲು ರಕ್ಷಣೆ ನೀಡಿದ ಇನ್ಸ್‌ಪೆಕ್ಟರ್ ಕೃಷ್ಣ ಹಾಗೂ ಸಿಬ್ಬಂದಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಜರ್ಮಲಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ; ಪಿಡಿಒಗೆ ಗ್ರಾಮಸ್ಥರ ಛೀಮಾರಿ
ಡಿಎಸ್ಎಸ್‌ನ ಬೆಂಗಳೂರು ವಿಭಾಗಿಯ ಸಂಚಾಲಕ ಸೋಮಶೇಖರ್ ಪಿ, ಜಿಲ್ಲೆ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳಾದ ಶಿವು ಜಗದಾಪುರ, ವಿಶ್ವ, ದೊರೆಸ್ವಾಮಿ, ಬಿಡದಿಯ ಶಿವಕುಮಾರ, ಭೀಮ್ ಆರ್ಮಿಯ ಪರಮೇಶ್, ಕೇತುಹಳ್ಳಿ ನವೀನ್, ಎಸ್‌ಎಸ್‌ಡಿ ಸುರೇಶ್, ವಿನೋದ, ಭಾರತ್, ಭೀಮ್ ಸೇನೆಯ ದಿನೇಶ್, ಕನಕಪುರ ಶಿವಲಿಂಗಯ್ಯ, ಡಿಎಸ್ಎಸ್ ಸಂಯೋಜಕ ವಿನಯ್, ಗಾಯಕರಾದ ಬ್ಯಾಡರಹಳ್ಳಿ ಶಿವಕುಮಾರ್, ಬಿಎಸ್‌ಪಿಯ ರಾಮಣ್ಣ ಹಾಗೂ ಅರ್ಕಾವತಿ ಬಡಾವಣೆಯ ಕಾರ್ಯಕರ್ತರು ಇದ್ದರು.