ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ 2019ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವಿಡಿಯೋ ಕ್ಲಿಪ್‌ಅನ್ನು ಉದ್ಧವ್ ಠಾಕ್ರೆ ಶನಿವಾರ ಹಂಚಿಕೊಂಡಿದ್ದಾರೆ. ವಿಜಯ ದಶಮಿಯನ್ನು ಮಹಾರಾಷ್ಟ್ರದಲ್ಲಿ ಸಂಭ್ರಮಿಸಲಾಗುತ್ತಿದ್ದು, ಶಿವಸೇನೆಯ ಎರಡೂ ಬಣಗಳನ್ನು ಸಂಭ್ರಮವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಸಿವೆ. ಉದ್ಧವ್ ಠಾಕ್ರೆ ಅವರು ತಮ್ಮ ಹಳೆಯ ವಿಡಿಯೋವನ್ನು ಹಂಚಿಕೊಂಡು, ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ನವೆಂಬರ್‌ಗೆ ವಿಧಾನಸಭಾ ಚುನಾವಣೆಯ ನಡೆಯಲಿದೆ. ಚುನಾವಣೆಗಾಗಿ ಮತದಾರರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್, ಎನ್‌ಸಿಯ ಎರಡು ಬಣಗಳು ಹಾಗೂ ಶಿವಸೇನೆಯ ಎರಡು ಬಣಗಳು ತಮ್ಮದೇ ಆದ ತಂತ್ರ-ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ವಿಜಯ ದಶಮಿ ಹಬ್ಬದ ಮೂಲಕ ಮತದಾರರನ್ನು ಸೆಳೆಯಲು ಶಿವಸೇನೆಯ ಉದ್ಧವ್ ಬಣ ಮತ್ತು ಶಿಂಧೆ ಬಣಗಳು ಶನಿವಾರ ಮಹಾರಾಷ್ಟ್ರದಾದ್ಯಂತ ಬೀದಿ-ಬೀದಿಗಳು ದಸರಾ ಆರಚಣೆ ಮಾಡಿವೆ.
ಉದ್ದವ್ ಠಾಕ್ರೆ ಅವರು ಐಕಾನಿಕ್ ಮುಂಬೈ ಪಾರ್ಕ್‌ನಲ್ಲಿ ದಸರಾ ಭಾಷಣ ಮಾಡಿದ್ದಾರೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆಜಾದ್ ಮೈದಾನದಲ್ಲಿ ಭಾಷಣ ಮಾಡಿದ್ದಾರೆ. ಶಿಂಧೆ ವಿರುದ್ಧ ಉದ್ಧವ್, ಉದ್ದವ್ ವಿರುದ್ಧ ಶಿಂಧೆ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಉದ್ದವ್ ಠಾಕ್ರೆ ಎಐಎಂಐಎಂ ಮುಖ್ಯಸ್ಥ ಓವೈಸಿ ಜೊತೆ ಸೇರಿ ಮುಸ್ಲಿಂ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ ಎಂದು ಶಿಂಧೆ ಆರೋಪಿಸಿದ್ದಾರೆ. ಅಧಿಕಾರಕ್ಕಾಗಿ ಪಕ್ಷವನ್ನು ಒಡೆದು, ಬಿಜೆಪಿ ಜೊತೆ ಸೇರಿದ ಶಿಂಧೆ ವಿರುದ್ಧ ಉದ್ಧವ್ ಕೂಡ ವಾಗ್ದಾಳಿ ನಡೆಸಿದ್ದಾರೆ.
ಅಂದಹಾಗೆ, 2022ರ ಜೂನ್‌ನಲ್ಲಿ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಏಕನಾಥ್ ಶಿಂಧೆ ಬಂಡಾಯ ಎದ್ದು, ಶಿವಸೇನೆಯನ್ನು ಇಬ್ಬಾಗ ಮಾಡಿದರು. ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರವನ್ನು ಉರುಳಿಸಿದರು. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದರು. ಮಾತ್ರವಲ್ಲದೆ, ಬಾಳಾಸಾಹೇಬ್ ಠಾಕ್ರೆಯವರ ಆದರ್ಶಗಳಿಗೆ ಉದ್ಧವ್ ದ್ರೋಹ ಮಾಡುತ್ತಿದ್ದಾರೆ. ಅವರಿಂದ ಶಿವಸೇನೆಯನ್ನು ರಕ್ಷಿಸಿದ್ದೇನೆ. ನಮ್ಮದ್ದೇ ಮೂಲ ಪಕ್ಷವೆಂದು ಶಿಂಧೆ ಹೇಳಿಕೊಂಡಿದ್ದರು.
“ನಾವು ಬಂಡಾಯ ಏಳದಿದ್ದರೆ, ನಿಜವಾದ ಶಿವಸೈನಿಕರು ಅವಮಾನಕ್ಕೊಳಗಾಗುತ್ತಿದ್ದರು. ಮಹಾರಾಷ್ಟ್ರವು ಹಲವು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತಿತ್ತು. ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ವಿವಿಧ ಅಭಿವೃದ್ಧಿ ಯೋಜನೆಗಳನ್ನು ತಡೆಯುತ್ತಿತ್ತು” ಎಂದು ಶಿಂಧೆ ಶನಿವಾರದ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ.
ಇನ್ನು, ಉದ್ಧವ್ ಠಾಕ್ರೆ ಅವರು ತಮ್ಮ ಭಾಷಣದಲ್ಲಿ ಶಿಂಧೆ ನೇತೃತ್ವದ ಸೇನೆಯನ್ನು ‘ನಕಲು’ ಎಂದು ಉಲ್ಲೇಖಿಸಿದ್ದಾರೆ. ನಿರ್ಮಿಸಿದ ಎಂಟು ತಿಂಗಳಲ್ಲಿಯೇ ಶಿವಾಜಿ ಪ್ರತಿಮೆ ಕುಸಿದು ಬಿದ್ದ ಘಟನೆಯನ್ನು ಉಲ್ಲೇಖಿಸಿದ ಠಾಕ್ರೆ, “ಮಹಾಯುತಿ ಸರ್ಕಾರ ಕೇವಲ ಮತಕ್ಕಾಗಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸಿತು. ಅದು ಕೆಲವೇ ತಿಂಗಳಲ್ಲಿ ಬಿದ್ದುಹೋಯಿತು. ಆದರೆ, ನಾವು ಅಧಿಕಾರಕ್ಕೆ ಬಂದರೆ, ಮಹಾರಾಷ್ಟ್ರದ ಪ್ರತಿಯೊಂದು ಜಿಲ್ಲೆಯಲ್ಲಿ ಶಿವಾಜಿ ಮಹಾರಾಜ ಮಂದಿರವನ್ನು ನಿರ್ಮಿಸುತ್ತೇವೆ. ಶಿವಾಜಿ ಮಹಾರಾಜರು ನಮ್ಮ ದೇವರು ಮತ್ತು ನಾನು ಮಂದಿರವನ್ನು ನಿರ್ಮಿಸುತ್ತೇನೆ. ಛತ್ರಪತಿ ಶಿವಾಜಿ ಶಿಂಧೆ ಮತ್ತು ಬಿಜೆಪಿಗೆ ಮತ ಬ್ಯಾಂಕ್ ಆಗಿದ್ದಾರೆ, ನನಗೆ ದೇವರು” ಎಂದಿದ್ದಾರೆ.