ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವ ರಾಮನಗರ ಜಿಲ್ಲಾಧಿಕಾರಿ ಅಸಂವಿಧಾನಿಕ ದೋರಣೆ ತಾಳಿರುವ ಹಿನ್ನೆಲೆಯಲ್ಲಿ ಅ.12ರ ಶನಿವಾರ ಮೈಸೂರು ದಸರಾದಂದು ರೈತ ಸಂಘ ಹಾಗೂ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳು ರಾಮನಗರದ ಬೆಂಗಳೂರು-ಮೈಸೂರು ರಸ್ತೆಯ ಐಜೂರು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ನಾಗರಾಜು ಮಾತನಾಡಿ, “ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿ ಎದುರು ಯಾವುದೇ ಸಂಘಟನೆಗಳು ಧರಣಿ ಮಾಡಬಾರದೆಂದು 144 ಸೆಕ್ಷನ್ ಜಾರಿ ಮಾಡಿರುವುದು ಅಕ್ಷಮ್ಯ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.

“ಜಿಲ್ಲಾಧಿಕಾರಿಗಳು ಕೂಡಲೇ ರೈತರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸುತ್ತಿದ್ದರೂ ಕೂಡಾ ರೈತರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು” ಎಂದು ಆಗ್ರಹಿಸಿದರು.
“ಜಿಲ್ಲಾಧಿಕಾರಿ ರಸ್ತೆ ತಡೆ ಪ್ರತಿಭಟನೆಗೂ ಸ್ಪಂದಿಸದಿದ್ದರೆ ರೈತ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಅವರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ” ಎಂದು ಎಚ್ಚರಿಸಿದರು.

ರೈತ ಸಂಘದ ಪದಾಧಿಕಾರಿಗಳು ಬೆಂಗಳೂರು-ಮೈಸೂರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತು. ದಸರಾ ಹಿನ್ನಲೆಯಲ್ಲಿ ಮೈಸೂರು ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಮನಗರ | ಅಕ್ರಮ ಖಾತೆ ರದ್ದುಪಡಿಸುವಂತೆ ಆಗ್ರಹ; ಡಿಎಸ್ಎಸ್‌ನಿಂದ ಅನಿರ್ದಿಷ್ಟಾವಧಿ ಧರಣಿ
ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ ಮಲ್ಲಯ್ಯ, ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಗೌರವಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ಜಿಲ್ಲಾ ಯುವಘಟಕದ ಅಧ್ಯಕ್ಷ ಹಾಗೂ ಚನ್ನಪಟ್ಟಣ ತಾಲೂಕು ಅಧ್ಯಕ್ಷ ರಾಮೇಗೌಡ, ತಾಲೂಕು ಕಾರ್ಯದರ್ಶಿ ರಾಮು, ರಾಮನಗರ ತಾಲೂಕು ಅಧ್ಯಕ್ಷ ನಾಗರಾಜು ಕಾರ್ಯದರ್ಶಿ ತೇಜಸ್ವಿ, ಮುನಿರಾಜು, ರಮ್ಯಾ, ರಾಮಣ್ಣ, ಶಿಲ್ಪ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರು ಇದ್ದರು.