ವಿಶ್ವದಲ್ಲಿ ಭಾರತ 5ನೇ ಅತಿ ದೊಡ್ಡ ಆರ್ಥಿಕತೆ ಅಂತ ಮೋದಿ ಅವರು ಪದೇಪದೆ ಹೇಳುತ್ತಲೇ ಇರುತ್ತಾರೆ. ಅವರು ಹೇಳುವಂತೆ ಭಾರತವು ಅಭಿವೃದ್ಧಿಯತ್ತ ಸಾಗುತ್ತಿರಬಹುದು. ಆದರೆ, ಆ ಅಭಿವೃದ್ಧಿ ಎಲ್ಲರನ್ನೂ ಒಳಗೊಂಡಿಲ್ಲ. ಮೋದಿಯ ಅಭಿವೃದ್ಧಿಯಲ್ಲಿ ಶ್ರೀಮಂತರು ಶ್ರೀಮಂತರೇ ಆಗುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ಪ್ರಕಟವಾದ ಜಾಗತಿಕ ಹಸಿವು ಸೂಚ್ಯಂಕ ಸಾಕ್ಷಿಯಾಗಿದೆ. ಹಸಿವು ಸೂಚ್ಯಂಕದಲ್ಲಿ ಭಾರತ ಇನ್ನೂ 105ನೇ ಸ್ಥಾನದಲ್ಲಿದೆ. ಅಂದರೆ, 127 ದೇಶಗಳ ಪೈಕಿ ಕಡೆದ 25 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ನೆರೆ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಗಳಿಗಿಂತಲೂ ಭಾರತ ಹಿಂದೆ ಉಳಿದಿದೆ.
2024ರ 19ನೇ ಜಾಗತಿಕ ಹಸಿವು ಸೂಚ್ಯಂಕ ವರದಿಯ ಪ್ರಕಾರ, 127 ದೇಶಗಳಲ್ಲಿ ಭಾರತವೂ 105ನೇ ಸ್ಥಾನದಲ್ಲಿದೆ. ಈ ವರದಿಯ ಪ್ರಕಾರ ಗಂಭೀರ ಹಸಿವಿನ ಸಮಸ್ಯೆಗಳಿರುವ ರಾಷ್ಟ್ರಗಳ ನಡುವೆ ಭಾರತವನ್ನ ಕೂಡ ಇರಿಸಿದೆ. ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಕ್ಕಿಂತ ಹಿಂದುಳಿದೆ. ಆದರೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕಿಂತ ಸ್ವಲ್ಪ ಮೇಲಿದೆ. ಅಲ್ಲದೇ, ಭಾರತದ ನೆರೆಯ ರಾಷ್ಟ್ರಗಳು ಹಸಿವಿಗೆ ಸಂಬಂಧಿಸಿದಂತೆ ಭಾರತಕ್ಕಿಂತ ಮೇಲಿರುವುದು ಭಾರತದ ಪಾಲಿಗೆ ಗಂಭೀರ ವಿಷಯವಾಗಬೇಕು ಎಂದು ಹೇಳಲಾಗಿದೆ.
ಈ ಹಿಂದೆ ಅಂದರೆ, ಅಕ್ಟೋಬರ್ 2023ರಲ್ಲಿ ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್ಐ) ವರದಿ ಬಿಡುಗಡೆಯಾದಾಗ ಸೂಚ್ಯಂಕದಲ್ಲಿ ಭಾರತವು 28.68 ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿತ್ತು. ಅದರ ಹಿಂದಿನ ವರ್ಷ 2022ರ ಸೂಚ್ಯಂಕದಲ್ಲಿ ದೇಶವು 107ನೇ ಸ್ಥಾನದಲ್ಲಿತ್ತು. ಜತೆಗೆ ಸೂಚ್ಯಂಕದ ವರ್ಗೀಕರಣದ ‘ಗಂಭೀರ’ ವರ್ಗದಲ್ಲಿ ದೇಶವು ಸ್ಥಾನ ಪಡೆದುಕೊಂಡಿತ್ತು. ಹಲವು ಸೂಚಿಗಳಲ್ಲಿ ಭಾರತವು ಬೇರೆ ದೇಶಗಳಿಗೆ ಹೋಲಿಸಿದರೆ, ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು.
ಇದೀಗ, 2024ರಲ್ಲಿಯೂ ಕೂಡ ಭಾರತ ತನ್ನ ಕಳಪೆ ಪ್ರದರ್ಶನವನ್ನ ಮುಂದುವರೆಸಿದೆ. 19ನೇ ಜಾಗತಿಕ ಹಸಿವು ಸೂಚ್ಯಂಕ ವರದಿಯನ್ನು ‘ಕನ್ಸರ್ನ್ ವರ್ಲ್ಡ್‌ವೈಡ್’ ಮತ್ತು ‘ವೆಲ್ತುಂಗರ್ ಹಿಲ್ಫ್’ ಜಂಟಿಯಾಗಿ ಪ್ರಕಟ ಮಾಡಿದೆ. ದೇಶದಲ್ಲಿ ಮಕ್ಕಳ ಅಪೌಷ್ಟಿಕತೆಯು ಗಂಭೀರ ಪ್ರಮಾಣದಲ್ಲಿದೆ ಎಂದು ಈ ಬಾರಿಯೂ ಸೂಚ್ಯಂಕ ವಿವರಿಸಿದೆ.
ಈಗ ಬಿಡುಗಡೆ ಮಾಡಿರುವ ವರದಿಯ ಮೇಲೆ ಪ್ರತಿ ರಾಷ್ಟ್ರಗಳು ತಮ್ಮ ದೇಶದ ಹಸಿವಿನ ಪ್ರಮಾಣ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಲೋಚಿಸುತ್ತವೆ. ಜಾಗತಿಕ ಹಸಿವು ಸೂಚ್ಯಂಕ ವರದಿಯ ಸರಣಿಯೂ ವಿಶ್ವದಾದ್ಯಂತ ಹಸಿವನ್ನ ಟ್ರ್ಯಾಕ್ ಮಾಡುತ್ತದೆ. ಹಾಗೆಯೇ, ತುರ್ತು ಕ್ರಮ ಇರುವ ಪ್ರದೇಶಗಳ ಮೇಲೆ ಕೇಂದ್ರಿಕರಿಸಿದೆ.
2023ರಲ್ಲಿ ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್ಐ) ವರದಿ ಬಿಡುಗಡೆಯಾದಾಗ ಸೂಚ್ಯಂಕದಲ್ಲಿ ಭಾರತವು 28.68 ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಅಂದರೆ, 2024ರ ವರದಿಯ ಸೂಚ್ಯಂಕದಲ್ಲಿ ಭಾರತವು 27.3 ಅಂಕಗಳೊಂದಿಗೆ ಕೊಂಚ ಸುಧಾರಿಸಿದ್ದರೂ, ಹಸಿವಿನ ಗಂಭೀರ ಮಟ್ಟವನ್ನ ಪ್ರತಿಬಿಂಬಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ವರದಿಯು ತಿಳಿಸಿದೆ.
ಇನ್ನು 2016ರಲ್ಲಿ 29.3 ಅಂಕ ಇದ್ದು, 2024ರ ಅಂಕಗಳಿಗೆ ಹೋಲಿಸಿದರೇ ಸ್ವಲ್ಪ ಸುಧಾರಣೆ ಕಂಡಿದೆ. ಆದರೆ, ಬರೋಬ್ಬರಿ 8 ವರ್ಷಗಳಲ್ಲಿ ಈ ಅಂಕಗಳಲ್ಲಿ ವ್ಯತ್ಯಾಸವು ಭಾರತವು ಹೆಚ್ಚಿನ ಯಶಸ್ಸನ್ನು ಕಂಡಿಲ್ಲ ಎಂಬುದನ್ನು ಸೂಚಿಸುತ್ತದೆ. ಜೊತೆಗೆ, ಇದನ್ನು ಗಂಭೀರತೆ ಎಂದು ವರದಿ ಹೇಳುತ್ತದೆ. ತನ್ನ ನೆರೆಯ ರಾಷ್ಟ್ರಗಳಿಗಿಂತ ಭಾರತ ಬಹಳ ಹಿಂದೆಯೇ ಇದೆ. 2000 ಮತ್ತು 2008ರಲ್ಲಿ ಕ್ರಮವಾಗಿ 38.4 ಮತ್ತು 35.2 ಅಂಕಗಳಿಗೆ ಹೋಲಿಸಿದರೆ ಗಣನೀಯ ಪ್ರಗತಿ ಕಂಡುಬಂದಿದೆ. ಇವೆರಡನ್ನೂ ‘ಆತಂಕಕಾರಿ’ ಎಂದು ವರ್ಗೀಕರಿಸಲಾಗಿದೆ.
ವಿಧಾನ ಮತ್ತು ಪರಿಷ್ಕೃತ ಡೇಟಾದಲ್ಲಿನ ಬದಲಾವಣೆಯಿಂದಾಗಿ 2024ರ ವರದಿಯನ್ನು 2023ರ ವರದಿಗೆ ನೇರವಾಗಿ ಹೋಲಿಸಲಾಗುವುದಿಲ್ಲ. ಆದಾಗ್ಯೂ, ಇದು 2000, 2008, 2016 ಮತ್ತು 2024 ವರ್ಷಗಳ ತುಲನಾತ್ಮಕ ಡೇಟಾವನ್ನು ಒದಗಿಸುತ್ತದೆ.
ಭಾರತವು ಮಕ್ಕಳ ಅಪೌಷ್ಟಿಕತೆಯಲ್ಲಿ ತೀವ್ರ ಸವಾಲುಗಳನ್ನು ಎದುರಿಸುತ್ತಲೇ ಇದೆ. ಜಾಗತಿಕವಾಗಿ ಅತಿ ಹೆಚ್ಚು ಮಕ್ಕಳ ಕ್ಷೀಣತೆಯ ಪ್ರಮಾಣ 18.7% ಇದೆ. ದೇಶವು 35.5% ನ ಮಕ್ಕಳ ಕುಂಠಿತ ದರವನ್ನು ಹೊಂದಿದೆ. ಐದು ವರ್ಷದೊಳಗಿನ ಮರಣ ಪ್ರಮಾಣವು 2.9% ಮತ್ತು ಅಪೌಷ್ಟಿಕತೆಯ ಪ್ರಮಾಣವು 13.7% ಇದೆ.
2000ರಿಂದ ಭಾರತದಲ್ಲಿ ಮಕ್ಕಳ ಮರಣ ಪ್ರಮಾಣವನ್ನು ಗಣನೀಯವಾಗಿ ಸುಧಾರಿಸಿದೆಯಾದರೂ, ಮಕ್ಕಳ ಅಪೌಷ್ಟಿಕತೆಯು ನಿರ್ಣಾಯಕ ಸಮಸ್ಯೆಯಾಗಿಯೇ ಉಳಿದಿದೆ. ವ್ಯರ್ಥ ಮತ್ತು ಕುಂಠಿತ ದರಗಳು ಇನ್ನೂ ಆತಂಕಕಾರಿಯಾಗಿ ಹೆಚ್ಚಿವೆ. 2000ರಿಂದ ಕುಂಠಿತವಾಗುವುದು ಕಡಿಮೆಯಾದರೂ, ಈ ಸೂಚಕಗಳು ಗಂಭೀರವಾದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಒಡ್ಡುತ್ತಲೇ ಇವೆ ಎಂದು ವರದಿ ಒತ್ತಿಹೇಳುತ್ತದೆ.
2016ರಿಂದ ಹಸಿವನ್ನು ಕಡಿಮೆ ಮಾಡುವಲ್ಲಿ ಜಾಗತಿಕ ಪ್ರಗತಿ ಕುಂಠಿತವಾಗಿದೆ ಎಂದು 2024 GHI ಎತ್ತಿ ತೋರಿಸುತ್ತದೆ. 2030ರ ವೇಳೆಗೆ ಶೂನ್ಯ ಹಸಿವನ್ನು ಸಾಧಿಸುವ ಗುರಿಯು ಹೆಚ್ಚು ಅಸಂಭವವಾಗಿದೆ. ಮೌಲ್ಯಮಾಪನ ಮಾಡಿದ 127 ದೇಶಗಳಲ್ಲಿ, 42 ಇನ್ನೂ ‘ಆತಂಕಕಾರಿ’ ಅಥವಾ ‘ಗಂಭೀರ’ ಹಸಿವಿನ ಮಟ್ಟವನ್ನು ಅನುಭವಿಸುತ್ತಿವೆ.
ವರದಿಯು ಹಸಿವು, ಹವಾಮಾನ ಬದಲಾವಣೆ ಹಾಗೂ ಲಿಂಗ ಅಸಮಾನತೆಯ ನಡುವಿನ ನೇರ ಸಂಪರ್ಕವನ್ನು ಸ್ಥಾಪಿಸುತ್ತದೆ. “ತಾರತಮ್ಯದ ರೂಢಿಗಳು ಮತ್ತು ಲಿಂಗ-ಆಧಾರಿತ ಹಿಂಸಾಚಾರಗಳು ಸಾಮಾನ್ಯವಾಗಿ ಮಹಿಳೆಯರು ಮತ್ತು ಲೈಂಗಿಕ ಮತ್ತು ಲಿಂಗ ಅಲ್ಪಸಂಖ್ಯಾತರನ್ನು ಆಹಾರ ಮತ್ತು ಪೌಷ್ಟಿಕಾಂಶದ ಅಭದ್ರತೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತವೆ. ಈ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯ ಬೇಕಾಗಿದೆ”
ಈ ಸುದ್ದಿ ಓದಿದ್ದೀರಾ? ಮೋದಿಯ ಬಿಜೆಪಿ, ಕೇಂದ್ರ ಸರ್ಕಾರದ ದಮನನೀತಿಗೆ ಉತ್ತರ ಕೊಟ್ಟ ಜಮ್ಮು-ಕಾಶ್ಮೀರ
ಹಸಿವು ಸೂಚ್ಯಂಕದಲ್ಲಿ 125 ದೇಶಗಳ ಪೈಕಿ ಭಾರತ 111ನೇ ಸ್ಥಾನ ಪಡೆದುಕೊಂಡಿದೆ ಎಂದು ಜಾಗತಿಕ ಹಸಿವು ಸೂಚ್ಯಂಕ (ಜಿಎಚ್ಐ)-2023 ವರದಿ ಹೇಳಿತ್ತು. ಆ ವರದಿಯನ್ನು 2023¬ರ ಅಕ್ಟೋಬರ್ನಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಲೇವಡಿ ಮಾಡಿದ್ದರು. ವರದಿ ಕುರಿತ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ಬಗ್ಗೆ ಕೇಂದ್ರ ಸರ್ಕಾರ ಹೇಳೋದೇನು ಅನ್ನೋದನ್ನ ನೋಡೋದಾದ್ರೆ, “ಜಾಗತಿಕ ಹಸಿವು ಸೂಚ್ಯಂಕದಲ್ಲಿ ಅಳೆದಿರುವ ‘ಹಸಿವು’ ಇಡೀಯಾ ಭಾರತದ ಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ. ಇಲ್ಲಿ ಬಳಸಿರುವ ಮಾನದಂಡಗಳು ದೋಷಪೂರಿತವಾಗಿವೆ ಹಾಗೂ ಈ ವರದಿಯು ದುರುದ್ದೇಶದಿಂದ ಕೂಡಿದೆ” ಎಂದು ಕೇಂದ್ರ ಸರ್ಕಾರ ಆರೋಪ ಮಾಡುತ್ತದೆ.
ಆದರೆ, ಜಾಗತಿಕ ಹಸಿವಿನ ಸೂಚ್ಯಂಕ ಪ್ರತಿ ವರ್ಷ ಬಿಡುಗಡೆಯಾಗಲಿದ್ದು, ವಿಶ್ವದಲ್ಲಿ ಹಸಿವಿನಿಂದ ಬಳಲುತ್ತಿರುವ ರಾಷ್ಟ್ರಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತದೆ. ಹಾಗೆಯೇ, ತುರ್ತು ಕ್ರಮ ಇರುವ ಪ್ರದೇಶಗಳ ಮೇಲೆ ಕೇಂದ್ರಿಕರಿಸುತ್ತದೆ. ಅಲ್ಲದೇ, 2030ರ ವೇಳೆಗೆ ಜಗತ್ತಿನಲ್ಲೇ ಹಸಿವಿನ ಪ್ರಮಾಣವನ್ನು ಶೂನ್ಯಕ್ಕೆ ತರಬೇಕು ಎಂಬುದು ಈ ಸೂಚ್ಯಂಕ ತಯಾರಿಸಿದವರ ಉದ್ದೇಶವಾಗಿದೆ.
ಪ್ರತಿ ದೇಶದ ಜಾಗತಿಕ ಹಸಿವು ಸೂಚ್ಯಂಕದ ಸ್ಕೋರ್ ಅನ್ನು ನಾಲ್ಕು ಸೂಚ್ಯಂಕಗಳನ್ನು ಬಳಸಿ ಅದರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಸೂತ್ರವು ಹಸಿವಿನ ಬಹು ಆಯಾಮದ ಸ್ವರೂಪವನ್ನು ಸೆರೆ ಹಿಡಿಯುತ್ತದೆ. ಮೊದಲನೇಯದಾಗಿ ದೇಶದಲ್ಲಿರುವ ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಮಕ್ಕಳ ಕ್ಷೀಣ ಬೆಳವಣಿಗೆ ಹಾಗೂ ಮಕ್ಕಳ ಮರಣ ಪ್ರಮಾಣ ಈ ನಾಲ್ಕು ಸೂಚಕಗಳ ಆಧಾರದ ಮೇಲೆ ಹಸಿವಿನ ತೀವ್ರತೆಯನ್ನ ಪ್ರತಿಬಿಂಬಿಸುವ 100 ಪಾಯಿಂಟ್ ಸ್ಕೇಲ್‌ನಲ್ಲಿ ಜಾಗತಿಕ ಹಸಿವು ಸೂಚ್ಯಂಕ ಅಂಕ ಎಷ್ಟು ಎಂದು ಲೆಕ್ಕ ಹಾಕಲಾಗುತ್ತದೆ. ಅಲ್ಲಿ 0 ಎಂದರೆ ಅತ್ಯುತ್ತಮ ಸ್ಕೋರ್ ಆಗಿರುತ್ತದೆ. ಅಂದರೆ ಆ ಪ್ರದೇಶದಲ್ಲಿ ಹಸಿವು ಇಲ್ಲ ಎಂದು ಅರ್ಥ ಮತ್ತು 100 ಎಂದರೆ ಹಸಿವಿನ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಅರ್ಥ ನೀಡುತ್ತದೆ. ಪ್ರತಿ ದೇಶದ ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ ಅನ್ನು ಅದರ ತೀವ್ರತೆಯನುಸಾರ ವರ್ಗೀಕರಿಸಲಾಗುತ್ತದೆ. ಕಡಿಮೆ ಆತಂಕದಿಂದ ಕಠಿಣ ಪರಿಸ್ಥಿತಿಯವರೆಗೆ ಆರೋಹಣ ಕ್ರಮದಲ್ಲಿ ಇದನ್ನು ದಾಖಲಿಸಲಾಗುತ್ತದೆ.
ಈ ವರದಿಯ ಪ್ರಕಾರ ಹಸಿವು ಎಂದರೆ ಸುಧೀರ್ಘ ಕಾಲದಲ್ಲಿ ಸಾಕಷ್ಟು ಕ್ಯಾಲೋರಿ ಸೇವನೆ ಮಾಡಲಾಗದೇ ಅನುಭವಿಸುವ ತೊಂದರೆಗಳನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ಆರೋಗ್ಯಕರ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಅಗತ್ಯವಾದ ಕನಿಷ್ಟ ಆಹಾರ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚಿನ ಕಾಲ ವಿಫಲವಾದಲ್ಲಿ ಅದನ್ನು ಹಸಿವು ಎಂದು ವ್ಯಾಖ್ಯಾನಿಸುತ್ತದೆ. ಹಾಗೇಯೇ, ಉದಾಹರಣೆಗೆ ಹೇಳೋದಾದ್ರೆ ಎರಡು ಅಥವಾ ನಾಲ್ಕು ದಿನಗಳ ಕಾಲ ಒಬ್ಬ ವ್ಯಕ್ತಿ ಇತರ ಯಾವುದೋ ಕಾರಣಾಂತರಗಳಿಂದ ಆಹಾರವನ್ನು ಸೇವಿಸಲಾಗದಿದ್ದರೆ ಅದನ್ನು ಸೂಚ್ಯಂಕದಲ್ಲಿ ಪರಿಗಣಿಸಲಾಗುವುದಿಲ್ಲ.
ಇನ್ನು ಅಪೌಷ್ಟಿಕತೆ ಎನ್ನುವುದು ಕೇವಲ ಕ್ಯಾಲೋರಿ ಕೊರತೆಯನ್ನ ಮಾತ್ರ ಸೂಚಿಸುವುದಿಲ್ಲ. ಬದಲಾಗಿ ಪ್ರೋಟೀನ್ ಅಥವಾ ನಿರ್ಣಾಯಕ ಜೀವಸತ್ವಗಳು ಮತ್ತು ಖನಿಜಗಳ ಕೊರತೆಯನ್ನು ಸೂಚಿಸುತ್ತದೆ.
ಮನೆಯಲ್ಲಿ ಆಹಾರದ ಅಭದ್ರತೆಯ ವಾತಾವರಣ, ತಾಯಿಯ ಆರೋಗ್ಯ ಅಥವಾ ಶಿಶುಪಾಲನಾ ಅಭ್ಯಾಸಗಳ ಬಗ್ಗೆ ಕಾಳಜಿ ಇಲ್ಲದಿರುವುದು, ಆರೋಗ್ಯ ಸೇವೆಗಳಿಗೆ ಸೀಮಿತ ಪ್ರವೇಶ, ಸುರಕ್ಷಿತ ನೀರು ಮತ್ತು ನೈರ್ಮಲ್ಯದ ಕೊರತೆ ಮುಂತಾದ ಹಲವು ಅಂಶಗಳು ಅಪೌಷ್ಟಿಕತೆಗೆ ಕಾರಣವಾಗುತ್ತವೆ.
ನೋಡದ್ರಲ್ಲಾ, ದೇಶದಲ್ಲಿ ಎಷ್ಟರ ಮಟ್ಟಿಗೆ ಹಸಿವಿನ ಸಮಸ್ಯೆ ಜನರನ್ನ ಭಾಧಿಸುತ್ತಿದೆ ಅಂತ, ಇದರ ಬಗ್ಗೆ ಗಮನ ಕೊಡದ ನಮ್ಮ ಮೋದಿ ಸರ್ಕಾರ ಉಚಿತವಾಗಿ ಅನ್ನಭಾಗ್ಯ ನೀಡುವವರ ಮೇಲೆ ತಮ್ಮ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಾರೆ.