ಅಂದಿನ ಮೈಸೂರು ಸಾಮ್ರಾಜ್ಯ ಇಂದಿನ ಕರ್ನಾಟಕದ ಮಟ್ಟಿಗೆ ಸಾಮ್ರಾಟ್ ಹಜರತ್ ಟಿಪ್ಪುಸುಲ್ತಾನ್ ಆಳ್ವಿಕೆ ವಿಶೇಷ, ಹಾಗೆಯೇ ವಿಭಿನ್ನ. ಕನ್ನಡ ನೆಲದಲ್ಲಿ ಎಂದಿಗೂ ಅವಿಸ್ಮರಣೀಯ ದ್ವೀಪದಂತಿರುವ ಕಾವೇರಿ ನದಿಯ ತಟದಲ್ಲಿನ ಶ್ರೀರಂಗಪಟ್ಟಣ ಟಿಪ್ಪುವಿನ ಸಾಮ್ರಾಜ್ಯದ ರಾಜಧಾನಿ.
ಟಿಪ್ಪು ಅಂದಿಗೆ ಜನಪರ ಕೆಲಸಗಳನ್ನು ಜಾರಿಗೆ ತಂದ ಮೊದಲಿಗ. ರಾಕೆಟ್, ಪಿರಂಗಿ ಬಳಸಿದ ಪ್ರವರ್ತಕ. ರೈತರಿಗಾಗಿ ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ ಧೀಮಂತ. ಬ್ರಿಟಿಷರ ಪಾಲಿನ ಸಿಂಹಸ್ವಪ್ನ, ಸ್ವಾತಂತ್ರ್ಯ ಹೋರಾಟಗಾರ. ಒಬ್ಬ ರಾಜನಷ್ಟೇ ಅಲ್ಲದೆ ಕೃಷಿ, ವ್ಯಾಪಾರ, ರಾಜನೀತಿಗೆ ಒತ್ತುಕೊಟ್ಟ ಆಡಳಿತಗಾರ. ಆದರೆ ಟಿಪ್ಪುವಿನ ಇತಿಹಾಸ ಸಾರುವುದಕ್ಕಿಂತ ತಿರುಚಿದ್ದೇ ಹೆಚ್ಚು.

ಇಂದಿಗೂ ಮೈಸೂರಿನ ಗತವೈಭವದ ಆಳ್ವಿಕೆಯಲ್ಲಿ ಟಿಪ್ಪುವಿನ ಕುರುಹುಗಳು ಎಲ್ಲೆಂದರಲ್ಲಿ ತೆರೆದುಕೊಳ್ಳುತ್ತವೆ, ಇತಿಹಾಸ ಸಾರುತ್ತದೆ. ಅಂದಿನ ಆಡಳಿತಕ್ಕೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಜೈಲು ಹಾಗೂ ಇಟ್ಟಿಗೆ ಕಾರ್ಖಾನೆಯ ಬೃಹತ್ ಆದ ಚಿಮಣಿಗಳೇ ಸಾಕ್ಷಿಯಾಗಿವೆ.
ರಾಜ್ಯದ ಮಟ್ಟಿಗೆ ಹುಣಸೂರಿನಲ್ಲಿ ಟಿಪ್ಪುವಿನ ಕಾರಾಗೃಹಗಳು ಹಾಗೂ ಇಟ್ಟಿಗೆ ಕಾರ್ಖಾನೆಯ ಉಲ್ಲೇಖಗಳು ಎಲ್ಲಿಯೂ ಕೂಡಾ ದಾಖಲಾಗಿಲ್ಲ. ಹಾಗೆಯೇ ಯಾರೂ ಕೂಡಾ ವರದಿಯನ್ನೂ ಮಾಡಿಲ್ಲ. ಇದೀಗ ಈ ದಿನ.ಕಾಮ್ ಇತಿಹಾಸದ ಪುಟದಲ್ಲಿ ಮರೆಯಾದಂತಿರುವ ಕುರುಹುಗಳ ಬೆನ್ನತ್ತಿದ್ದು, ಈ ಕುರಿತ ವರದಿಗಳನ್ನು ಬಿತ್ತರಿಸಲು ಮುಂದಾಗಿದೆ.

ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಟೌನ್ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸುಸಜ್ಜಿತವಾದ, ಇಂದಿಗೂ ಉಳಿಸಿಕೊಳ್ಳಬಹುದಾದ ಜೈಲುಗಳು ಹಾಗೂ ಶಾಲೆಯ ತಡೆಗೋಡೆಗೆ ಹೊಂದಿಕೊಂಡಂತೆ ಇಟ್ಟಿಗೆ ಕಾರ್ಖಾನೆ ಚಿಮಣಿ ಈಗಲೂ ಕಾಣಸಿಗುತ್ತವೆ.
ವಿಪರ್ಯಾಸವೆಂದರೆ ಇತಿಹಾಸ ಹೇಳುವ ಸ್ಮಾರಕಗಳು ಇತಿಹಾಸದಿಂದ ಮರೆಯಾಗುತ್ತಿವೆ. ಯಾವುದನ್ನ ರಕ್ಷಿಸಿ, ಉಳಿಸಿ, ಮುಂದಿನ ತಲೆಮಾರುಗಳಿಗೆ ಕೊಡಬೇಕಿತ್ತೋ ಅವೆಲ್ಲವೂ ಇಂದೋ ನಾಳೆಯೋ ಉರುಳಿ, ಮಣ್ಣು ಪಾಲಾಗುವ ಅಂಚಿಗೆ ತಲುಪುತ್ತಿರುವುದಕ್ಕೆ ನಮ್ಮಗಳ ನಿರ್ಲಕ್ಷ್ಯವೇ ಕಾರಣವಾಗಿದೆ.

ಟಿಪ್ಪುವಿನ ಕಾರಾಗೃಹಗಳ ಕಂಬಿಗಳು ಮಾಸಿಲ್ಲ, ದೊಡ್ಡ ಮಟ್ಟದಲ್ಲಿ ತುಕ್ಕು ಹಿಡಿದಿಲ್ಲ. ಬೃಹತ್ತಾದ ಬಾಗಿಲುಗಳು, ಒಳ ಹೊಕ್ಕರೆ ಗೋಡೆಗಳು ಬಿರುಕು ಬಿಟ್ಟಿಲ್ಲ. ಸುಣ್ಣ ಬಣ್ಣ ಮಾಸಿದೆ. ಬೃಹತ್ ಮರಗಳಿಂದ ಮಾಡಿದ ಬಿಟ್ಟ, ಕಿಟಿಕಿ ಸುಸ್ಥಿತಿಯಲ್ಲಿವೆ. ಬಾಗಿಲ ನಿಲ ಕಿತ್ತಿವೆ. ಧೂಳು ತುಂಬಿದ್ದು, ಜಾಡುಗಟ್ಟಿದೆ.

ಟಿಪ್ಪುವಿನ ಸೆರೆಮನೆಗಳು ಎಷ್ಟು ವ್ಯವಸ್ಥಿತವಾಗಿವೆ ಅಂದರೆ ಕೈದಿಗಳು ಸ್ನಾನ ಮಾಡಲು ಸ್ನಾನಗೃಹ, ಶೌಚಾಲಯವನ್ನೂ ಹೊಂದಿವೆ. ಬೆಳಕಿಗಾಗಿ ಮಾಡಿರುವ ಕಿಟಕಿಗಳು ಅಂದಿನ ಕೆಲಸದ ಕ್ಷಮತೆಗೆ ಹಿಡಿದ ಕೈಗನ್ನಡಿ. ಕಾರಾಗೃಹಕ್ಕೆ ಅಗತ್ಯವಿರುವ ಬೆಳಕು ಒಳಗೆ ಬರುವಂತಹ ವ್ಯವಸ್ಥೆಯಿದೆ. ಈಗಿರುವ ಜೈಲಿನ ಮೇಲ್ಭಾಗದಲ್ಲಿ ಇನ್ನೊಂದು ಅಂತಸ್ತನ್ನೂ ಸಹ ಹೊಂದಿದೆ. ಈ ಹಿಂದೆ ರಾಜಸ್ವ ನಿರೀಕ್ಷಕರ ಕಚೇರಿ ಇಲ್ಲಿಯೇ ಇದ್ದು, ಒಂದಷ್ಟು ವರ್ಷಗಳು ಬಳಕೆ ಮಾಡಿರುವುದು ಕಂಡುಬರುತ್ತದೆ.

ದುರಾದೃಷ್ಟವೆಂದರೆ, ಪುರಾತತ್ವ ಇಲಾಖೆಗೆ, ಇತಿಹಾಸಕಾರರಿಗೆ ಇಲ್ಲಿನ ಇತಿಹಾಸ ತಿಳಿದಿಲ್ಲ. ಯಾರೂ ಕೂಡಾ ಭೇಟಿ ಕೊಟ್ಟಿಲ್ಲ. ಒಂದು ಹಂತದಲ್ಲಿ ಕರ್ನಾಟಕದ ಮಟ್ಟಿಗೆ ಯಾರಿಗೂ ಗೊತ್ತಿಲ್ಲ. ಯಾರೂ ಕೂಡ ಹುಣಸೂರಿನ ಜೈಲುಗಳ ಬಗ್ಗೆ, ಇಟ್ಟಿಗೆ ಕಾರ್ಖಾನೆ ಬಗ್ಗೆ ಬರೆದಿಲ್ಲ. ಹಾಗಾಗಿ ಟಿಪ್ಪುವಿನ ಆಳ್ವಿಕೆ ಎಲ್ಲಿಯವರೆಗೆ ಹಬ್ಬಿತ್ತು ಎನ್ನುವುದೇ ಸಮಾಜಕ್ಕೆ ತಿಳಿಯದಂತಾಗಿದೆ.

ಈಗ ಜೈಲಿನ ಸುತ್ತ ಗಿಡಗಂಟಿಗಳು ಬೆಳೆದುಕೊಂಡಿವೆ, ಹಂಚುಗಳು ಒಡೆದಿವೆ, ಮಳೆ ಬಂದರೆ ಸೋರುತ್ತಿದೆ, ಸ್ವಚ್ಛತೆ ಇಲ್ಲ. ಒಳಗಡೆ ನಿರ್ವಹಣೆ ಇಲ್ಲದೆ ಜೈಲು ಕಂಬಿಗಳು, ಗೋಡೆಗಳು, ಮರದ ಬಿಟ್ಟ ಇವೆಲ್ಲವೂ ಸೊರಗುತ್ತಿವೆ. ಪುರಾತತ್ವ ಇಲಾಖೆ, ತಾಲೂಕು ಆಡಳಿತ, ಮೈಸೂರು ಜಿಲ್ಲಾಡಳಿತ ಇತ್ತಕಡೆ ಗಮನ ಹರಿಸಿದರೆ ಹುಣಸೂರು ಕೂಡ ಪ್ರವಾಸಿಗರು ಭೇಟಿ ಕೊಡಬಹುದಾದ ಸ್ಥಳಗಳಲ್ಲಿ ಒಂದಾಗುತ್ತದೆ.

ಚಿಂತಕ ಹಾಗೂ ಲೇಖಕ ಯೋಗೇಶ್ ಮಾಸ್ಟರ್ ಈ ದಿನ.ಕಾಮ್ ಜೊತೆ ಮಾತನಾಡಿ, “ಚಾರಿತ್ರಿಕವಾಗಿ,
ರಾಜಕೀಯವಾಗಿ ಇತಿಹಾಸದ ಗಾಢವಾದ ಕುರುಹುಗಳನ್ನು ಬಿಟ್ಟುಹೋದಂತ ಇಂತಹ ಸ್ಮಾರಕಗಳನ್ನು ಪುರಾತತ್ವ ಇಲಾಖೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಲಕ್ಷ್ಯವಹಿಸದೇ ಇರುವುದು ಶೋಚನೀಯ” ಎಂದು ಬೇಸರ ವ್ಯಕ್ತರಪಡಿಸಿದರು.

“ಇವತ್ತಿಗೂ ಹಾಳುಗೆಡವಿ ಕಾಪಾಡಿಕೊಳದೆ ಇರುವುದು ನಮ್ಮಲ್ಲಿ ಎಷ್ಟರ ಮಟ್ಟಿಗೆ ಇತಿಹಾಸ ಪ್ರಜ್ಞೆ ಜಾಗರೂಕವಾಗಿದೆಯೆಂಬುದು ತಿಳಿಯುತ್ತದೆ. ಇಂತಹ ಸ್ಮಾರಕಗಳನ್ನು ಕಾಪಾಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಹಾಗೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಲು ಇಂತಹ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕು. ಪುರಾತತ್ತ್ವ ಇಲಾಖೆ ಹಾಗೂ ಸರ್ಕಾರ ಇತ್ತಕಡೆ ಗಮನ ಹರಿಸಿ, ಪುನಶ್ಚೇತನಗೂಳಿಸಿ ಪ್ರವಾಸಿಗರಿಗೆ ಲಭ್ಯವಾಗುವಂತೆ ಮಾಡಬೇಕು. ಇದರ ಬಗ್ಗೆ ಹೆಚ್ಚಿನ ಸಂಶೋಧನೆ, ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸವಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಜರ್ಮಲಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ; ಪಿಡಿಒಗೆ ಗ್ರಾಮಸ್ಥರ ಛೀಮಾರಿ
“ಟಿಪ್ಪು ಆಳ್ವಿಕೆಯ ಕಾಲದಲ್ಲಿ ಜನಪರ ಕೆಲಸದ ಭಾಗವಾಗಿ ಇಟ್ಟಿಗೆ ಕಾರ್ಖಾನೆ ನಿರ್ಮಿಸಿರುವ ಕುರುಹುಗಳು ಇಲ್ಲಿವೆ. ಅದರ ದ್ಯೂತಕವಾಗಿ ಬೃಹತ್ತಾದ ಚಿಮಣಿಗಳು ಈಗಲೂ ಇರುವುದನ್ನು ಕಾಣಬಹುದು. ಇದೆಲ್ಲವೂ ನಶಿಸಿಹೋಗುವ ಮುನ್ನ ಎಚ್ಚೆತ್ತುಕೊಂಡು ಕಾಪಾಡಿಕೊಳ್ಳುವ ಹೊಣೆಗಾರಿಕೆ ಸರ್ಕಾರ, ಪುರಾತತ್ವ ಇಲಾಖೆ ಮತ್ತು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ” ಎಂದರು.
