ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಘಟನೆ ನಡೆದಿದೆ.
ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಕಾಯ್ದಿರಿಸಲಾಗಿದ್ದ ಮತ ಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದ ವೇಳೆ ಘಟನೆ ನಡೆದಿದೆ.
ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿದ ಗ್ರಾಮಸ್ಥರು ಮತ ಯಂತ್ರ ಒಡೆದು ಹಾಕಿದ್ದಾರೆ. ಅದಲ್ಲದೇ ಅಧಿಕಾರಿಗಳ ಕಾರನ್ನು ಕೂಡ ಗ್ರಾಮಸ್ಥರು ಜಖಂಗೊಳಿಸಿದ್ದಾರೆ. ಜೊತೆಗೆ ಚುನಾವಣಾ ಸಿಬ್ಬಂದಿಗೂ ಗ್ರಾಮಸ್ಥರು ಥಳಿಸಿದ್ದಾರೆ. ಸದ್ಯ ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಇವಿಎಂ ನಾಶ ಮಾಡಿದವರ ಬಂಧನ
ಇನ್ನು ಘಟನಾ ಸ್ಥಳಕ್ಕೆ ಡಿಸಿ ವಿಜಯಕುಮಾರ ದಾನಮ್ಮನವರ ಹಾಗೂ ಎಸ್ಪಿ ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಘಟನೆಗೆ ಕಾರಣವಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದ ಕೆಲವರನ್ನು ಬಂಧಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
“ಇದು ಕಾನೂನು ಬಾಹೀರ ಕೆಲಸ. ಯಾರೇ ಆಗಲಿ ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗಲಾಟೆಯಲ್ಲಿ ಭಾಗಿಯಾಗಿರೋ 20 ರಿಂದ 25 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಂಥ ಘಟನೆಗಳಲ್ಲಿ ಯಾರಾದರೂ ಭಾಗಿಯಾದರೆ ಅವರ ಮೇಲೂ ಆ್ಯಕ್ಸನ್ ಫಿಕ್ಸ್” ಎಂದು ಎಸ್ಪಿ ಆನಂದ ಕುಮಾರ ಎಚ್ಚರಿಕೆ ನೀಡಿದ್ದಾರೆ.
ಗಲಾಟೆ ನಡೆದ ಮಸಬಿನಾಳ ಗ್ರಾಮವೂ ಬಸವನಬಾಗೇವಾಡಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದೆ. ಇಲ್ಲಿ ಸದ್ಯ ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಅವರು ಹಾಲಿ ಶಾಸಕರಾಗಿದ್ದು, ಮತ್ತೊಮ್ಮೆ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಎಸ್‌ಕೆ ಬೆಳ್ಳುಬ್ಬಿ, ಜೆಡಿಎಸ್‌ನಿಂದ ಸೋಮನಗೌಡ ಪಾಟೀಲ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇಲ್ಲಿ ನೇರ ಪೈಪೋಟಿ ಇದೆ.