ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಂಭೂನಹಳ್ಳಿ ಗ್ರಾಮದಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮತ್ತೋರ್ವ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಗ್ರಾಮದ ಶಿವರಾಜು ಎಂಬಾತ ಅದೇ ಗ್ರಾಮದ ಮಂಜುನಾಥ್ ಎಂಬಾತನ ಮೇಲೆ ದಾಳಿ ನಡೆಸಿದ್ದು, ಗುಂಡಿನ ದಾಳಿಗೊಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮುಂಬೈನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜು ಎರಡು ನಾಡ ಪಿಸ್ತೂಲಿನಿಂದ ಮಂಜುನಾಥ್ ಹಾಗೂ ಆತನ ಭಾವನ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಮಂಜುನಾಥನ ತಲೆ ಹಾಗೂ ಕಂಕುಳ ಬಳಿ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ಆರೋಪಿ ಶಿವರಾಜ್ ಕಳೆದ ಎರಡು ವರ್ಷಗಳ ಹಿಂದೆ ಕೂಡ ಮಂಜುನಾಥ್ ಮೇಲೆ ಹತ್ಯೆಗೆ ಯತ್ನಿಸಿ ಚಾಕುವಿನಿಂದ ಇರಿದಿದ್ದ ಎನ್ನಲಾಗಿದೆ.
ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.