ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎ2 ಆರೋಪಿ ನಟ ದರ್ಶನ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿಯನ್ನು ಸೋಮವಾರ ವಜಾಗೊಳಿಸಿ 57ನೇ ಸಿಸಿಎಚ್ ಕೋರ್ಟ್ ಆದೇಶಿಸಿದೆ.
ಜಾಮೀನು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುದೀರ್ಘವಾಗಿ ನಡೆಸಿದ 57ನೇ ಸಿಸಿಎಚ್ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಗುರುವಾರ ಮುಕ್ತಾಯಗೊಳಿಸಿ, ಇಂದು (ಅ.14) ತೀರ್ಪು ಪ್ರಕಟಿಸಿದೆ. ನಟಿ ಪವಿತ್ರಾ ಗೌಡ ಅವರ ಅರ್ಜಿ ಕೂಡ ಇಂದು ವಜಾಗೊಂಡಿದೆ.
ಹಾಗೆಯೇ ಇದೇ ಪ್ರಕರಣದ ಆರೋಪಿ ಎ8 ರವಿಶಂಕರ್‌ಗೆ 57ನೇ ಸಿಸಿಎಚ್ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ರೇಣುಕಾಸ್ವಾಮಿಯನ್ನು ಎ8 ರವಿಶಂಕರ್ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆ ತಂದಿದ್ದ ಆರೋಪ ಈತನ ಮೇಲಿದೆ.
ದರ್ಶನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ವಾದ ಮಂಡಿಸಿದ್ದರು. ದರ್ಶನ್ ಸೇರಿ ನಾಲ್ವರಿಗೆ ಜಾಮೀನು ಮಂಜೂರು ಮಾಡದಂತೆ ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಿದ್ದರು. ದರ್ಶನ್ ಪರ ವಕೀಲ ಸಿ ವಿ ನಾಗೇಶ್ ಹಾಗೂ ಪವಿತ್ರಾ ಗೌಡ ಪರವಾಗಿ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ನಾಗೇಂದ್ರಗೆ ಜಾಮೀನು
ರೇಣುಕಸ್ವಾಮಿ ಕೊಲೆ ಆರೋಪದ ಮೇಲೆ ಜೂನ್ 11ರಂದು ದರ್ಶನ್ ಹಾಗೂ ಇತರರನ್ನು ಬಂಧಿಸಲಾಗಿತ್ತು. ಸದ್ಯ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜಾತಿಥ್ಯ ಹಿನ್ನೆಲೆಯಲ್ಲಿ ನಟ ದರ್ಶನ್ ತೂಗುದೀಪ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರಿಗೆ ಜಾಮೀನು ಮಂಜೂರಾಗಿದೆ. ಎ15 ಕಾರ್ತಿಕ್, ಎ 16 ಕೇಶವಮೂರ್ತಿ, ಎ17 ನಿಖಿಲ್ ನಾಯಕ್ ಗೆ ಜಾಮೀನು ಮಂಜೂರಾಗಿದೆ. ಕಾರ್ತಿಕ್ ಮತ್ತು ನಿಖಿಲ್ ನಾಯಕ್ ಗೆ 57ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದರೇ ಎ16 ಕೇಶವ್ ಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಚಂದನ್ ನೇತೃತ್ವದಲ್ಲಿ 24ನೇ ಎಸಿಎಂಎಂ ನ್ಯಾಯಾಲಯಕ್ಕೆ 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ದೋಷಾರೋಪ ಪಟ್ಟಿ ಒಟ್ಟು 231 ಸಾಕ್ಷ್ಯಾಧಾರಗಳ ನ್ನೊಳಗೊಂಡಂತೆ ಒಟ್ಟು 291 ಪುಟಗಳ 3991 ಪುಟಗಳುಳ್ಳ ಏಳು ಸಂಪುಟಗಳ 10 ಕಡತಗಳನ್ನು ಒಳಗೊಂಡಿರುತ್ತದೆ. ಪವಿತ್ರಾಗೌಡ ಎ1 ಮತ್ತು ದರ್ಶನ್ ಎ2 ಆರೋಪಿಗಳಾಗಿದ್ದು, ಒಟ್ಟು 17 ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಗ್ಯಾಂಗ್ ವಿರುದ್ಧ ಕೊಲೆ, ಅಪಹರಣ, ಒಳಸಂಚು, ಸಾಕ್ಷ್ಯನಾಶ ಸೇರಿದಂತೆ ಹಲವು ಗಂಭೀರ ಅಪರಾಧಗಳನ್ನು ಉಲ್ಲೇಖಿಸಲಾಗಿದೆ.