ಕರ್ನಾಟಕದಲ್ಲಿ ಸಾಹಿತಿಗಳಿಗೆ ಬರವಿದೆಯೇ? ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯೇ ಅಧ್ಯಕ್ಷರಾಗಲಿ; ಚಿಂತಕರ ಒತ್ತಾಯ

Date:

Advertisements

ಕಸಾಪಕ್ಕೆ ಸಾಹಿತಿಯಲ್ಲದವರು ಅಧ್ಯಕ್ಷರಾಗುವುದು ಹೊಸದೇನಲ್ಲ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಸಾಹಿತಿಗಳೇ ಅಧ್ಯಕ್ಷರಾಗುವುದು ಮುಂದುವರಿದಿತ್ತು. ಈಗ ಕಸಾಪ ಅಧ್ಯಕ್ಷ ಜೋಶಿಯವರು ಆ ಸಂಪ್ರದಾಯವನ್ನೂ ಮುರಿಯಲು ಹೊರಟಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಬೇರೆ ಬೇರೆ ಕ್ಷೇತ್ರದ ಸಾಧಕರೂ ಅಧ್ಯಕ್ಷರಾಗಬಹುದು ಎಂದು ಹೇಳುವ ಮೂಲಕ ಜೋಶಿಯವರು ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ.

ಸಾಹಿತಿಯಲ್ಲದ ಮಾಜಿ ಸರ್ಕಾರಿ ಅಧಿಕಾರಿ ಡಾ ಮಹೇಶ್‌ ಜೋಶಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾದಾಗಲೇ ಕನ್ನಡ ಸಾಹಿತ್ಯ ಪರಿಷತ್ತು ವಿವಾದಗಳನ್ನು ಬೆನ್ನಿಗಂಟಿಸಿಕೊಂಡಿತ್ತು. ಡಾ ಮನು ಬಳಿಗಾರರ ಅವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳಿದ್ದಾಗಲೇ ಜೋಶಿಯವರು ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡು ಸದಸ್ಯತ್ವ ಅಭಿಯಾನ ಶುರು ಮಾಡಿದ್ದರು. ತಮ್ಮ ಗೆಲುವಿಗಾಗಿ ತಮ್ಮವರ ಸದಸ್ಯತ್ವ ಮಾಡಿಸಿ, ತಮಗೇ ಮತ ಹಾಕುವಂತೆ ಪತ್ರ ಚಳವಳಿಯನ್ನೇ ಮಾಡಿದವರು. ಅಷ್ಟು ಸಾಲದೆಂಬಂತೆ ಬಿಜೆಪಿ- ಆರೆಸ್ಸೆಸ್‌ ಕಚೇರಿಗಳಿಗೆ ಎಡತಾಕಿ, ಅವರಿಂದಲೂ ಪ್ರಚಾರ ಮಾಡಿಸಿಕೊಂಡವರು ಸಾಹಿತ್ಯ ಪರಿಷತ್ತು ಕಂಡ ಈ ʼಅಪರೂಪʼದ ಅಧ್ಯಕ್ಷರು. ತಾವು ಅಧ್ಯಕ್ಷರಾಗುತ್ತಿದ್ದಂತೆ ಕಸಾಪದ ನಡಾವಳಿಗಳನ್ನು ತಿದ್ದ ಜಿಲ್ಲಾಧ್ಯಕ್ಷರುಗಳನ್ನೆಲ್ಲ ನಿರ್ಲಕ್ಷ್ಯ ಮಾಡಿ ಕೇಸು ಹಾಕುವ ಬೆದರಿಕೆಯೊಡ್ಡಿದವರು… ಹೀಗೆ ಆರೋಪಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಇದೀಗ ಡಿಸೆಂಬರ್‌ 20-22ರವರೆಗೆ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ಸಾಧಕರೂ ಅಧ್ಯಕ್ಷರಾಗಲಿ ಎಂದು ಹೇಳುವ ಮೂಲಕ ಅಧ್ಯಕ್ಷರಾಗಬಹುದಾದವರ ಪಟ್ಟಿಯನ್ನೂ ಮಾಡಿದ್ದಾರೆ. ಆ ಶಿಫಾರಸ್ಸು ಪಟ್ಟಿ ನೋಡಿದ್ರೆ ಮಂಡ್ಯ ಸಮ್ಮೇಳನ ರಾಜಕೀಯ ಮೇಲಾಟದ ವೇದಿಕೆಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಅದರಲ್ಲಿ ನಡೆದಾಡಲೂ ಆಗದ ಅನಾರೋಗ್ಯಪೀಡಿತ ಇಬ್ಬರು ಹಿರಿಯ ರಾಜಕಾರಣಿಗಳ ಹೆಸರು ಅಚ್ಚರಿ ಮಾತ್ರವಲ್ಲ ಕಸಾಪ ತಲುಪಿರುವ ಬೌದ್ಧಿಕ ದಿವಾಳಿತನಕ್ಕೆ ಕನ್ನಡಿ ಹಿಡಿದಿದೆ.

Advertisements

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಹೆಸರು ಹಾಕಿರುವುದು ನೋಡಿದರೆ ರಾಜಕೀಯದ ವಾಸನೆ ಬರದಿರಲು ಸಾಧ್ಯವೇ? ಇನ್ನು ಮಠಾಧೀಶರ ಹೆಸರುಗಳನ್ನು ನೋಡಿದರೆ ಇದು ಧರ್ಮ‌ ಸಮ್ಮೇಳನವೇ ಎಂಬ ಅನುಮಾನ ಬರುತ್ತದೆ. ನಿರ್ಮಲಾನಂದ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಭಿನವ ಗವಿ ಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಕ್ರಿಕೆಟರ್‌ ಜಿ ಆರ್‌ ವಿಶ್ವನಾಥ್‌, ಅಂಗವಿಕಲ ಕ್ರೀಡಾಪಟು ಮಾಲತಿ ಹೊಳ್ಳ ಮುಂತಾದ ಸಾಹಿತ್ಯ ಕ್ಷೇತ್ರದ ಹೊರತಾದವರ ಹೆಸರುಗಳಿವೆ. ಆ ಮೂಲಕ ಜೋಶಿಯವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ತಾವು ಅಯೋಗ್ಯರು ಎಂಬುದನ್ನು ತಾವೇ ಸಾರಿಕೊಳ್ಳಲು ಹೊರಟಿದ್ದಾರೆಯೇ? ಕರ್ನಾಟಕದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಯೋಗ್ಯ ಸಾಹಿತಿಗಳು ಇಲ್ಲವೇ? ಕಸಾಪ ಅಧ್ಯಕ್ಷರಿಗೆ ಯಾಕೆ ಬೇರೆಯವರನ್ನು ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಯೋಚನೆ ಬಂತು? ಅವರ ಮನಸ್ಸಿನಲ್ಲಿ ಯಾರಿದ್ದಾರೆ? ಇದರ ಹಿಂದಿನ ಹುನ್ನಾರವೇನು?

ಸಾಹಿತ್ಯ ಸಮ್ಮೇಳನ

ನಿವೃತ್ತ ಅಧಿಕಾರಿಗಳಿಗೆ, ಮಾಜಿಯಾದ ಅಥವಾ ಚುನಾವಣೆಯಲ್ಲಿ ಸೋತ ರಾಜಕಾರಣಿಗಳಿಗೆ ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಆಶ್ರಯ ನೀಡುವುದು ಹೊಸದಲ್ಲ. ಆದರೆ, ಸಾಹಿತ್ಯ ಪರಿಷತ್ತಿನಂತಹ ಕನ್ನಡದ ಅತಿದೊಡ್ಡ ಸಂಸ್ಥೆಗೆ ಯಾವಾಗ ಹರಿಕೃಷ್ಣ ಪುನರೂರು ತರಹದ ಹೋಟೆಲ್‌ ಉದ್ಯಮಿ, ಪುಂಡಲೀಕ ಹಾಲಂಬಿ ತರಹದ ಸಹಕಾರ ಕ್ಷೇತ್ರದ ವ್ಯಕ್ತಿ ಬಂದು ವಕ್ಕರಿಸಿದರೋ ಕಸಾಪ ಚುನಾವಣೆಗೆ ಯಾರು ಬೇಕಿದ್ದರೂ ಸ್ಪರ್ಧಿಸಬಹುದು ಎಂಬಂತಾಯಿತು. ಅಷ್ಟೇ ಅಲ್ಲ ಕಸಾಪ ಚುನಾವಣೆ ಎಂಬುದು ಹಣ ಚೆಲ್ಲಿ ಗೆಲ್ಲಬಹುದಾದ ಥೇಟ್‌ ರಾಜಕೀಯ ಚುನಾವಣೆಯಂತಾಗಿ ಬಿಟ್ಟಿತು. ಹರಿಕೃಷ್ಣ ಪುನರೂರು 2001-04ರವರೆಗೆ ಅಧ್ಯಕ್ಷರಾಗಿದ್ದರು. ನಂತರ ಡಾ ಚಂದ್ರಶೇಖರ ಪಾಟೀಲ ಮತ್ತು ಡಾ ನಲ್ಲೂರು ಪ್ರಸಾದ್‌ ಅಧ್ಯಕ್ಷರಾದರು. ನಂತರ ಮತ್ತೆ ಸಾಹಿತ್ಯೇತರ ಕ್ಷೇತ್ರದ ಪುಂಡಲೀಕ ಹಾಲಂಬಿಯವರು ಗೆದ್ದರು. ಆ ನಂತರ ನಿವೃತ್ತ ಅಧಿಕಾರಿಗಳ ಸರದಿ. ಹಾಲಂಬಿಯವರ ನಂತರ ನಿವೃತ್ತ ಕೆಎಸ್ಎಸ್‌ ಅಧಿಕಾರಿ ಮನು ಬಳಿಗಾರ ಅವರು ಅಧ್ಯಕ್ಷರಾಗಿದ್ದರು. ಅವರು ಬೈಲಾ ತಿದ್ದುಪಡಿ ಮಾಡಿ ಅಧ್ಯಕ್ಷರ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಿಕೊಂಡರು. ಆ ನಂತರ ದೂರದರ್ಶನದ ನಿವೃತ್ತ ಅಧಿಕಾರಿ ಮಹೇಶ್‌ ಜೋಶಿ ಅಧ್ಯಕ್ಷರಾಗಿದ್ದಾರೆ. ಆದರೆ ಅಖಿಲಭಾರತ ಮಟ್ಟದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತ್ರ ಸಾಹಿತಿಗಳೇ ಆಯ್ಕೆಯಾಗುವುದು ಮುಂದುವರಿದಿತ್ತು. ಈಗ ಜೋಶಿಯವರು ಆ ಸಂಪ್ರದಾಯವನ್ನೂ ಮುರಿಯಲು ಹೊರಟಿದ್ದಾರೆ.

ಮಹೇಶ್ ಜೋಶಿ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೇರೆ ಬೇರೆ ಕ್ಷೇತ್ರದ ಸಾಧಕರೂ ಅಧ್ಯಕ್ಷರಾಗಬಹುದು ಎಂದು ಹೇಳುವ ಮೂಲಕ ಜೋಶಿಯವರು ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ. ಈ ಬಗ್ಗೆ ಈ ದಿನ.ಕಾಮ್‌ ಸಾಹಿತ್ಯ ವಲಯದ ಹಲವರ ಅಭಿಪ್ರಾಯ ಕೇಳುವ ಪ್ರಯತ್ನ ಮಾಡಿತು.

ಯಾರ್ಯಾರು ಏನಂದರು?

ವಿವಾದ ಹುಟ್ಟು ಹಾಕಿದ ಮೂಲ ಪುರುಷರ ಉದ್ದೇಶವೇ ಪ್ರಶ್ನಾರ್ಹ: ಡಾ ಬರಗೂರು ರಾಮಚಂದ್ರಪ್ಪ (ಸಾಹಿತಿ)
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮತ್ತು ಸಾಹಿತ್ಯ ಸಮ್ಮೇಳನ ಆಯೋಜನೆಗಳ ಮೂಲ ಆಶಯವನ್ನು ಅರ್ಥ ಮಾಡಿಕೊಂಡವರು ಸಾಹಿತಿಯಲ್ಲದವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿ ಎಂದು ಹೇಳುವುದಿಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಸಾಹಿತಿಯೇ ಆಗಿರಬೇಕು. ಬೇರೆ ಕ್ಷೇತ್ರದ ಸಾಧಕರು ಆಯಾ ಕ್ಷೇತ್ರದ ಸಮ್ಮೇಳನಗಳಿಗೆ ಅಧ್ಯಕ್ಷರಾಗಲಿ. ವಿಶ್ವ ಕನ್ನಡ ಸಮ್ಮೇಳನದ ಮನ್ನಣೆಗೆ ಪಾತ್ರರಾಗಲಿ. ನನಗೆ ತಿಳಿದಂತೆ ಬೇರೆ ಕ್ಷೇತ್ರದ ಸಾಧಕರು ಯಾರೂ ತಾವಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕೆಂದು ಆಸೆ ಪಟ್ಟಿಲ್ಲ. ಸಾಧಕರಿಗೆ ಅವರದೇ ಒಂದು ಉನ್ನತ ವಿವೇಕ ಇರುತ್ತದೆ. ಆದರೆ ಸಾಹಿತಿಗಳಲ್ಲದವರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿ ಎಂಬ ತಾರ್ಕಿಕತೆ ಮತ್ತು ತಾತ್ವಿಕತೆ ಇಲ್ಲದ ವಾದ ಹುಟ್ಟು ಹಾಕಿದ ಮೂಲ ಪುರುಷರ ಉದ್ದೇಶವೇ ಪ್ರಶ್ನಾರ್ಹವಾದುದು. ಅಷ್ಟೇ ಅಲ್ಲ ಈ ವಾದವೇ ಅಪ್ರಸ್ತುತ. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಚಿಂತನೆ ಖಂಡಿತ ಆಗಲಿ. ಸಾಹಿತ್ಯ ಸಮ್ಮೇಳನಕ್ಕೆ ಸೂಕ್ತ ಸಾಹಿತ್ಯ ಸಾಧಕರೇ ಅಧ್ಯಕ್ಷರಾಗಲಿ.

ಈಗಿರುವ ಸತ್ಸಂಪ್ರದಾಯವನ್ನು ಕೈಬಿಡಬಾರದು: ಡಾ. ಪುರುಷೋತ್ತಮ ಬಿಳಿಮಲೆ (ಕ.ಅ.ಪ್ರಾ.ಅಧ್ಯಕ್ಷ)
ಕನ್ನಡ ಸಾಹಿತ್ಯ ಪರಿಷತ್ತು, ಅದರ ಹೆಸರೇ ಸೂಚಿಸುವಂತೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಸಬಲೀಕರಣಕ್ಕಾಗಿ ಏಕೀಕರಣದ ಸಂದರ್ಭದಲ್ಲಿ ಹುಟ್ಟಿಕೊಂಡ ಸಂಸ್ಥೆ. ಆರಂಭದಲ್ಲಿ ಕೆಲವು ಕಾರಣಗಳಿಗಾಗಿ ಸಾಹಿತ್ಯೇತರರು ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದು ಹೌದಾದರೂ ಹೆಚ್ಚಿನ ಸಂದರ್ಭದಲ್ಲಿ ಸಾಹಿತಿಗಳು ಮತ್ತು ಕನ್ನಡ ಪರ ಚಿಂತಕರೇ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಅಧ್ಯಕ್ಷ ಭಾಷಣಗಳಲ್ಲಿ ನಾಡು ನುಡಿಯ ಬಗ್ಗೆ ಮಹತ್ವದ ಮಾತುಗಳನ್ನು ಹೇಳಿದ್ದಾರೆ. ಈ ಸತ್ಸಂಪ್ರದಾಯವನ್ನು ಈಗ ಕೈಬಿಡಬೇಕಾಗಿಲ್ಲ. ಕನ್ನಡ ಭಾಷೆಯನ್ನು ಬಹಳ ಎತ್ತರಕ್ಕೆ ಕೊಂಡೊಯ್ದ ಸಾಧಕರು ನಮ್ಮ ನಡುವೆಯೇ ಇರುವಾಗ ಈ ಚರ್ಚೆ ಯಾಕೆ ಹುಟ್ಟಿತೋ ಗೊತ್ತಿಲ್ಲ.

ಇಂತಹ ಗದ್ದಲವೆಬ್ಬಿಸುವ ಪ್ರಯತ್ನಗಳು ಮೆಚ್ಚುವಂತದ್ದಲ್ಲ: ಡಾ. ಎಚ್‌ ಎಲ್‌ ಪುಷ್ಪಾ(ಕ.ಲೇ.ಸಂ. ಅಧ್ಯಕ್ಷೆ)
ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗಾದಿಗೆ ಸಾಹಿತ್ಯೇತರರನ್ನು ಆಯ್ಕೆ ಮಾಡುವುದು ಸೂಕ್ತವಾದ ಕ್ರಮವಲ್ಲ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಹಿರಿಯ ಸಾಹಿತಿಗಳ ಆಯ್ಕೆಯೇ ಸೂಕ್ತ. ಮುಖ್ಯವಾಗಿ ಈ ಬಾರಿ ಎಲ್ಲಾ ರೀತಿಯಲ್ಲಿ ನಾಡುನುಡಿಯ ಘನತೆಯನ್ನು ಬಿಂಬಿಸುವ ಹಿರಿಯ ಲೇಖಕಿಯೊಬ್ಬರು ಅಯ್ಕೆಯಾಗಬೇಕು. ಅವರು ವಿವಾದಾತೀತರಾಗಿರಬೇಕು. ಜನರೆದೆಯಲ್ಲಿ ಗೌರವ ಪಡೆದಿರಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಜನಾಭಿಪ್ರಾಯ ಸಂಗ್ರಹಿಸಿ ಆಯ್ಕೆ ಮಾಡುವ ಕ್ರಮವೇ ಸರಿಯಾದುದಲ್ಲ. ಇದನ್ನು ಸಭೆಯಲ್ಲಿ ನಿರ್ಧರಿಸಬೇಕಾದವರು ಪರಿಷತ್ತಿನ ಜಿಲ್ಲಾ ಪ್ರತಿನಿಧಿಗಳು, ಪರಿಷತ್ತಿನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು. ಯಾರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂದು ಸಾರ್ವಜನಿಕವಾಗಿ ಕೇಳಹೊರಟಾಗ ಅವರವರ ಆದ್ಯತೆಗೆ ತಕ್ಕಂತೆ ಹೆಸರುಗಳು ತೇಲಿ ಬರುತ್ತವೆ. ಇಂತಹ ಗದ್ದಲವೆಬ್ಬಿಸುವ ಪ್ರಯತ್ನಗಳು ಮೆಚ್ಚುವಂತದ್ದಲ್ಲ.

ಕಸಾಪ ಸಜ್ಜನ ಕನ್ನಡಿಗರೆಲ್ಲರ ಮನಸ್ಸನ್ನು ಗೆಲ್ಲಲಿ: ಡಾ ಅಗ್ರಹಾರ ಕೃಷ್ಣಮೂರ್ತಿ (ಸಾಹಿತಿ)
ವ್ಯಕ್ತಿಯಾಗಲಿ ಸಂಸ್ಥೆಯಾಗಲಿ ಇದ್ದಷ್ಟು ಕಾಲ ಅರ್ಥಪೂರ್ಣವಾಗಿರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ರೀತಿಯಿಂದಲೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡು ಅರೆ ರಾಜಕೀಯ ಸಂಸ್ಥೆಯಾಗಿದೆ. ಅದರ ಚುನಾವಣೆಗಳು ಯಾವ ವೃತ್ತಿ ರಾಜಕಾರಣಕ್ಕಿಂತಲೂ ಕಡಿಮೆಯಿಲ್ಲ. ಅರ್ಥಪೂರ್ಣ ಸಾಹಿತ್ಯದ ಚಟುವಟಿಕೆಗಳು, ನಾಡು ಮತ್ತು ನುಡಿಯ ಕ್ಷೇಮ ಚಿಂತನೆ ಇವ್ಯಾವೂ ಪರಿಷತ್ತಿನ ಕಾಳಜಿಗಳಾಗಿ ಕಾಣಿಸುತ್ತಿಲ್ಲ. ಈ ಸಂಸ್ಥೆ ಈಗ ಉಳಿದಿರುವುದು ಕೇವಲ ಅದ್ದೂರಿಯಾಗಿ ಪ್ರತಿವರ್ಷ ಸಮ್ಮೇಳನವೆಂಬ ಜಾತ್ರೆಯನ್ನು ಮಾಡುವುದಕ್ಕಾಗಿ ಎಂಬಂತಾಗಿದೆ. ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನಡೆಯುವ ಈ ಜಾತ್ರೆಗಳಿಂದ ಯಾವ ರೀತಿಯ ಪ್ರಯೋಜನವೂ ಆಗುವುದಿಲ್ಲ. ಯಾವ ಜಿಲ್ಲೆಯಲ್ಲಿ ಸಮ್ಮೇಳನ ನಿಗಧಿಯಾಗಿರುತ್ತದೋ ಅಲ್ಲಿ ಹಣ ಮತ್ತು ಸ್ಥಳೀಯ ರಾಜಕಾರಣದ ಮೇಲಾಟ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಈ ಸಂಸ್ಥೆ ಸಜ್ಜನ ಕನ್ನಡಿಗರೆಲ್ಲರ ಮನಸ್ಸನ್ನು ಗೆಲ್ಲಬೇಕು. ಹಾಗಿಲ್ಲದೆ ಅಧ್ಯಕ್ಷರು ಯಾರೇ ಆದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ. ವೈಯಕ್ತಿಕವಾಗಿ ಪರಿಷತ್ತಿನ ನಡೆ ನನಗೆ ನಿರಾಸೆಯನ್ನುಂಟುಮಾಡಿರುವುದರಿಂದ ಅಧ್ಯಕ್ಷರ ಆಯ್ಕೆಯ ಬಗೆಗೂ ಆಸಕ್ತಿಯಿಲ್ಲ. ಯಾರಾದರೂ ಆಗಲಿ, ಮತ್ತೊಂದು ಜಾತ್ರೆ ನಡೆದೇ ತೀರುತ್ತದೆ.

ಮಹಿಳಾ ಸಾಹಿತಿ ಅಧ್ಯಕ್ಷರಾಗಲಿ: ಡಾ. ವಸುಂಧರಾ ಭೂಪತಿ (ವೈದ್ಯೆ, ಸಾಹಿತಿ)
ಸಾಹಿತ್ಯ ಸಮ್ಮೇಳನವಾದ್ದರಿಂದ ಸಾಹಿತಿಗಳನ್ನೇ ಸಮ್ಮೇಳನಾಧ್ಯಕ್ಷತೆಗೆ ಆಯ್ಕೆ ಮಾಡಬೇಕು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುತ್ತಾ ಮಾತಿಲ್ಲದ ಜನರಿಗೆ ಬರೆಹದ ಮೂಲಕ ಶಕ್ತಿಯಾದ ಮಹಿಳಾ ಸಾಹಿತಿಗಳನ್ನೇ ಈ ಬಾರಿ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಬೇಕು. ಶತಮಾನ ಪೂರೈಸಿದ ಸಂಸ್ಥೆಯಲ್ಲಿ ಇನ್ನು ಮುಂದಾದರೂ ಸಾಮಾಜಿಕ ನ್ಯಾಯ ಮತ್ತು ಲಿಂಗ ನ್ಯಾಯ ಅನುಸರಿಸಬೇಕು. ಇಲ್ಲಿಯವರೆಗೂ ಕೇವಲ ನಾಲ್ವರು ಮಹಿಳೆಯರು ಮಾತ್ರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.

ಕಸಾಪ ರಾಜಕಾರಣಿಗಳ ಗುಂಪುಗಾರಿಕೆ ಕೇಂದ್ರವಾಗುತ್ತದೆ: ಡಾ ಎನ್‌ ಚಿನ್ನಸ್ವಾಮಿ ಸೋಸಲೆ (ಪ್ರಾಧ್ಯಾಪಕ)
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮೊದಲುಗೊಂಡು ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದವರೆಗೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿಗಳೇ ಅಧ್ಯಕ್ಷರಾಗಬೇಕು. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಜೀವಕೋಶವೂ ಹೌದು. ಕನ್ನಡ- ಕನ್ನಡಿಗ – ಕರ್ನಾಟಕವನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ಕಟ್ಟಿಕೊಟ್ಟ ಸಾಹಿತಿಗಳೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಬೇಕು. ಇದನ್ನು ಹೊರತುಪಡಿಸಿ ರಾಜಕಾರಣಿಗಳು, ಉದ್ಯಮಿಗಳು, ಕನ್ನಡ ಸಂಘಟನೆಯ ಸ್ವಾರ್ಥ ಸಾಧನೆಗಾಗಿನ ಹೋರಾಟಗಾರರು ಸರ್ವಾಧ್ಯಕ್ಷರಾದರೆ ಸಾಹಿತ್ಯ ಸಮ್ಮೇಳನದ ಸ್ವರೂಪ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಒಡಲಾಳದ ಭಾವನೆ ಸಂಪೂರ್ಣವಾಗಿ ದಾರಿ ತಪ್ಪುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ರಾಜಕಾರಣಿಗಳ ಗುಂಪುಗಾರಿಕೆ ಕೇಂದ್ರವಾಗುತ್ತದೆ. ಉದ್ಯಮಿಗಳು ಹೂಡುವ ಬಂಡವಾಳದ ಬಹುದೊಡ್ಡ ಕೇಂದ್ರವಾಗುತ್ತದೆ. ಇಂದು ಕೆಲವರು ಹಣದ ಆಸೆಗಾಗಿ ಖಾಸಗಿ ಬ್ಯಾಂಕ್ ಲಕ್ಷಾಂತರ ರೂಪಾಯಿಗಳನ್ನು ಜಮಾ ಮಾಡಿ ಬ್ಯಾಂಕುಗಳು ದಿವಾಳಿಯಾದಾಗ ಪಡುತ್ತಿರುವ ಕಷ್ಟದಂತೆಯೇ ನಾಳೆ ದಿನ ಇದೂ ಆಗಬಹುದು. ಇದಕ್ಕೆ ನೂರಾರು ನಿದರ್ಶನಗಳು ನಮ್ಮ ಕಣ್ಮುಂದೆ ಇದೆ. ಈ ಕಾರಣದಿಂದಾಗಿ ಸಾಹಿತಿಗಳನ್ನು ಹೊರತುಪಡಿಸಿ ಬೇರೆಯವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಾರದು.

Kannada Sahitya Sammelana 5

ಸಾಹಿತ್ಯೇತರರ ಪರಿಗಣನೆ ಚರ್ಚೆಯೇ ಅಪ್ರಸ್ತುತ: ಎನ್‌ ರವಿಕುಮಾರ್‌ ಟೆಲೆಕ್ಸ್‌ (ಪತ್ರಕರ್ತ)
ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸುವ ಅಧ್ಯಕ್ಷ ಸ್ಥಾನವೂ ಈಗಾಗಲೇ ಸಾಹಿತ್ಯೇತರ ಹಿತಾಸಕ್ತಿಗಳ ಪಾಲಾಗಿರುವುದು ವಿಪರ್ಯಾಸ. ಇಂತಹ‌ ಕಾಲಘಟ್ಟದಲ್ಲೆ ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತ್ಯೇತರರನ್ನು ಪರಿಗಣಿಸುವ ಚರ್ಚೆಯೆ ಅಪ್ರಸ್ತುತ. ಹಾಗೊಮ್ಮೆ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಆಯ್ಕೆ ಮಾಡಿದ್ದೇ ಆದಲ್ಲಿ ಕನ್ನಡ ಸಾಹಿತ್ಯ, ಪರಂಪರೆಯ ಪತನಮುಖಿಗೆ ದಾರಿ ಬಗೆದಂತೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸಾಧಕ ಸಾಹಿತಿಗಳಿಗೆ ಮೀಸಲಾದ ಮೌಲಿಕ ಪರಂಪರೆಯದ್ದಾಗಿದೆ. ಸಾಹಿತಿಯಲ್ಲದವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದೆಂದರೆ ಸಾಹಿತಿಗಳ ಮುಖವಾಡದಲ್ಲಿ ರಾಜಕೀಯ ಅಧಿಕಾರ, ಪ್ರಶಸ್ತಿ ಸಮ್ಮಾನಗಳನ್ನು ಪಡೆದುಕೊಳ್ಳುತ್ತಿರುವವರಿಗೆ ಹೆದ್ದಾರಿ ಸಿಕ್ಕಂತಾಗುತ್ತದೆ. ಇದು ಕನ್ನಡ ಸಾಹಿತ್ಯಕ್ಕೆ, ಸಮ್ಮೇಳನಕ್ಕೆ ಯಾವ ಘನತೆಯನ್ನೂ ತಂದುಕೊಡಲಾರದು.

ಅರ್ಹತೆ ಇರುವ ಸಾಹಿತಿಗಳೆಲ್ಲಾ ಮುಗಿದುಹೋದರೆ?: ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ (ಲೇಖಕ)
ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯ ಸಮ್ಮೇಳನ ಎಷ್ಟು ಸಾರ್ಥಕವಾಗಿ ನಡೆಯುತ್ತದೆ; ಎಷ್ಟರ ಮಟ್ಟಿಗೆ ಪ್ರಾತಿನಿಧಿಕವಾಗಿರುತ್ತದೆ ಎಂಬ ಪ್ರಶ್ನೆ ಬೇರೆ. ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕನ್ನಡ ಭಾಷೆಯ ಸರ್ವಾಂಗೀಣ ಬೆಳವಣಿಗೆಗೆ ಎಷ್ಟರ ಮಟ್ಟಿಗೆ ಪೂರಕವಾಗಿರುತ್ತವೆ, ಅವುಗಳನ್ನು ಆಯಾ ವರ್ಷದ ಅವಧಿಯಲ್ಲಿ ಎಷ್ಟರ ಮಟ್ಟಿಗೆ ಅನುಸರಿಸಲಾಗುತ್ತದೆ ಎಂಬ ಅಸಮಾಧಾನವೂ ಇದೆ. ಜೊತೆಗೆ, ಈಗ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿಯಲ್ಲದವರನ್ನು ಮಾಡುವ ಹುನ್ನಾರು ಇದ್ದಂತಿದೆ. ನಮ್ಮ ಆ ಅರ್ಹತೆ ಇರುವ ಸಾಹಿತಿಗಳೆಲ್ಲಾ ಮುಗಿದುಹೋದರೇ? ಕನ್ನಡಮ್ಮನ ಒಡಲು ಬದಿದಾಗಿ ಹೋಯಿತೇ? ಈ ನಡೆ ಸರಿಯಲ್ಲ. ಒಬ್ಬ ಹಿರಿಯ, ಪ್ರಜ್ಞಾವಂತ ಸಾಹಿತಿಯನ್ನೇ ಸರ್ವಾಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ನಮ್ಮೆಲ್ಲರ ಆಗ್ರಹ.

ಈ ವಿಷಯದಲ್ಲಿ ಸರ್ಕಾರ ನಿರ್ದೇಶನ ನೀಡುವ ಅಗತ್ಯವಿದೆ: ಡಾ ಅರುಣ್ ಜೋಳದ ಕೂಡ್ಲಿಗಿ (ಸಾಹಿತಿ)
ತನ್ನಂತೆ ಸಾಹಿತ್ಯೇತರ ವ್ಯಕ್ತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬಹುದಾದರೆ, ಸಾಹಿತ್ಯೇತರ ವ್ಯಕ್ತಿಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇಕೆ ಆಗಬಾರದು ಎಂದು ಕೇಳಿದಂತಿದೆ ಮಹೇಶ್ ಜೋಶಿಯವರ ಸರಳವಾದ ಪ್ರಶ್ನೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತ್ಯೇತರ ವ್ಯಕ್ತಿಗಳನ್ನು ಪರಿಷತ್ತಿನ ಸದಸ್ಯರೇ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಇದರ ಮುಂದುವರಿದ ಭಾಗವೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತ್ಯೇತರ ವ್ಯಕ್ತಿಯನ್ನು ಮಾಡುವ ಚರ್ಚೆ ಮುನ್ನೆಲೆಗೆ ಬಂದಿದೆ. ಅಥವಾ ಈಗಾಗಲೇ ಗುಟ್ಟಾಗಿ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡಿ, ಆ ವ್ಯಕ್ತಿಗೆ ಮಾನ್ಯತೆ ಕೊಡಿಸುವ ಕಾರಣಕ್ಕೆ ಈ ಚರ್ಚೆ ಆರಂಭವಾದಂತೆ ಕಾಣುತ್ತಿದೆ. ಈ ವಿಷಯದಲ್ಲಿ ಸರ್ಕಾರ ನಿರ್ದೇಶನ ನೀಡುವ ಅಗತ್ಯವಿದೆ.

ರಾಜಕಾರಣಿಗಳು, ಮಠಾಧೀಶರು ಅಧ್ಯಕ್ಷರಾಗಬಾರದು: ಉಮರ್‌ ಯು ಎಚ್‌ (ಬ್ಯಾರಿ ಸಾ.ಅಕಾಡೆಮಿ ಅಧ್ಯಕ್ಷ)
ಇದು ಅಕ್ಷಮ್ಯ. ನಮ್ಮಲ್ಲಿ ಸಾಹಿತಿಗಳಿಗೇನು ಬರ ಇದೆಯೇ? ಅಲ್ಲ, ಸಮ್ಮೇಳನಾಧ್ಯಕ್ಷರಾಗಲು ಅರ್ಹತೆ ಇರುವ ಸಾಹಿತಿಗಳಾರೂ ಇಲ್ಲ ಎಂಬ‌ ಸಂದೇಶವೇ? ಸಮ್ಮೇಳನಕ್ಕೆ ನೀಡುವ ಅನುದಾನವನ್ನು ತಡೆ ಹಿಡಿಯುವ ಮೂಲಕ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ರಾಜಕಾರಣಿಗಳು, ಮಠಾಧೀಶರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದನ್ನು ತಡೆಯಬೇಕು.

ಡಾ ಕಿರಣ್‌ ಗಾಜನೂರು (ಪ್ರಾಧ್ಯಾಪಕ): ಸಾಮಾಜಿಕವಾಗಿ ನೋಡುವುದಾದರೆ ಕಾಲ ಎದುರಿಸುತ್ತಿರುವ ಸವಾಲುಗಳನ್ನು ದಾಟಲು ಅಗತ್ಯವಾದ ದೃಷ್ಟಿಕೋನವನ್ನು ಸಾಹಿತ್ಯ ಒದಗಿಸುತ್ತಿರುತ್ತದೆ. ವೈಯಕ್ತಿಕವಾಗಿ ‘ನಮ್ಮ ಅನುಭವಗಳನ್ನು ಗ್ರಹಿಸಲು ಅಗತ್ಯವಾದ ಕಣ್ಣೋಟವನ್ನು ಒದಗಿಸುವ ಸೃಜನಶೀಲ ವಿವೇಕವನ್ನು ಸಾಹಿತ್ಯ ನೀಡುತ್ತದೆ. ಆ ಅರ್ಥದಲ್ಲಿ ಕಲೆ, ವಿಜ್ಞಾನ, ತಂತ್ರಜ್ಞಾನ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳು ಮನುಷ್ಯ ಬದುಕನ್ನು ಸಹ್ಯವಾಗಿಸಲು ಸಾಹಿತ್ಯವನ್ನು ಆತುಕೊಳ್ಳಲೇಬೇಕಿದೆ. ‘ಸಾಹಿತ್ಯ ಸಮ್ಮೇಳನʼದ ಅರ್ಥ ಸಾಹಿತ್ಯದ ತರಗತಿಯಲ್ಲಿ ಕಲೆ, ವಿಜ್ಞಾನ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ಎಲ್ಲಾ ಮಹನೀಯರು ಕುಳಿತು ತಮ್ಮ ತಮ್ಮ ಕಣ್ಣೋಟವನ್ನು ಆತ್ಮ ವಿಮರ್ಶೆಗೆ ಒಡ್ಡಿಕೊಳ್ಳುವ ಮಹತ್ವದ ಹಾದಿಯಂತೆ ಕಾಣಬೇಕಿದೆ.

***
ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಚರ್ಚೆಯಾಚೆಗೂ ಕನ್ನಡದ ಎಲ್ಲರನ್ನೂಒಳಗೊಳ್ಳುವ ಹಬ್ಬವನ್ನಾಗಿ ನೋಡುವ ಅಗತ್ಯವಿದೆ. ಈ ನೆಲದವರೇ ಆದ ಅಲ್ಪಸಂಖ್ಯಾತರು, ಮಹಿಳೆಯರು, ಪರಿಶಿಷ್ಟ ಸಮುದಾಯದ ಯೋಗ್ಯ ಸಾಹಿತಿಗಳನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸುವ ಮೂಲಕ ಕನ್ನಡಿಗರು ವಿಶಾಲ ಹೃದಯಿಗಳಾಗುವುದು ಇಂದಿನ ಅಗತ್ಯ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X