ಬೈಕ್‌ಗೆ ಕೆಕೆಆರ್‌ಟಿಸಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ- ಶಹಾಪುರ ರಸ್ತೆಯ ಚಿಕ್ಕಮುಧೋಳ ಕ್ರಾಸ್ ಹತ್ತಿರ ಸೋಮವಾರ ನಡೆದಿದೆ.
ಜೇವರ್ಗಿ ಪಟ್ಟಣದ ಲಕ್ಷ್ಮೀ ಚೌಕ್ ನಿವಾಸಿ ಮೌನೇಶ್ ಭೀಮರಾಯ ವಿಶ್ವಕರ್ಮ (38) ಮೃತರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಇನ್ನಿಬ್ಬರು ಬೈಕ್ ಸವಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮೌನೇಶ್ ಸೇರಿ ಮೂವರು ಬೈಕ್ ಮೇಲೆ ಜೇವರ್ಗಿ ಕಡೆಗೆ ಹೊರಟಿದ್ದರು. ಶಹಾಪುರ ಕಡೆಯಿಂದ ಹೊರಟಿದ್ದ ಬಸ್ ಡಿಕ್ಕಿ ಹೊಡೆದ ಹಿನ್ನಲೆ ದುರ್ಘಟನೆ ಜರುಗಿದೆ ಎನ್ನಲಾಗಿದೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು :
ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಸಮೀಪದ ನಂದಿಕೂರ ತಾಂಡಾ ಕ್ರಾಸ್ ಬಳಿಯ ಬ್ರಿಜ್ ಹತ್ತಿರ ನಡೆದಿದೆ.
ಸೀತನೂರ ಗ್ರಾಮದ ಸಾವನಕುಮಾರ (25) ಮೃತರು. ಬೈಕ್ ಹಿಂಬದಿ ಕುಳಿತ ಹುಸೇನ್ ಪಟೇಲ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾವನಕುಮಾರ ಮತ್ತು ಹುಸೇನ್ ಪಟೇಲ್ ಅವರು ಬೈಕ್ ಮೇಲೆ ಕಲಬುರಗಿ ಕಡೆಯಿಂದ ಸೀತನೂರ ಕಡೆಗೆ ಹೊರಟಿದ್ದರು. ನಂದಿಕೂರ ತಾಂಡಾ ಕ್ರಾಸ್ ಬ್ರಿಜ್ ಬಳಿ ಕಲಬುರಗಿ ಕಡೆಯಿಂದ ಜೇವರ್ಗಿ ಕಡೆಗೆ ಹೋಗುತ್ತಿದ್ದ ಅಪರಿಚಿತ ವಾಹನ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಿಯಂತ್ರಣ ಬೋರ್ಡ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ತಗ್ಗಿನಲ್ಲಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಸಾವನಕುಮಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹುಸೇನ್ ಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರ ಸಾವು
ಗಾಯಗೊಂಡ ಹುಸೇನ್ ಪಟೇಲ್ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.