2022ರಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ, ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದ ಅನ್ವಯ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ ರಸ್ತೆ, ಚರಂಡಿ ನಿರ್ಮಾಣಕ್ಕೆ ₹1.30 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳಿದ್ದಾರೆ.
ಕಮಲನಗರ ತಾಲೂಕು ಕೇಂದ್ರದ ಎಸ್ಸಿ, ಎಸ್ಟಿ ಬಡಾವಣೆಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ₹98.65 ಲಕ್ಷ ಹಾಗೂ ಕಮಲನಗರ ತಾಲೂಕಿನ ಸೋನಾಳ ಗ್ರಾಮದ ಪರಿಶಿಷ್ಟ ಜಾತಿ (ಬಸವನಗರ) ಕಾಲೋನಿಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ₹32.00 ಲಕ್ಷ ಸೇರಿ ಒಟ್ಟು ₹130.65 ಲಕ್ಷ ಅನುದಾನ ಮಂಜೂರಾಗಿದ್ದು, ಈಗಾಗಲೇ ಎರಡು ಕಾಮಗಾರಿಗಳಿಗೆ ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯಿಂದ 2024 ಅಕ್ಟೋಬರ್ 3ರಂದು ಟೆಂಡರ್ ಕರೆಯಲಾಗಿದೆʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಮಲನಗರ ಹಾಗೂ ಸೋನಾಳ ಗ್ರಾಮಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಸದರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆದು 2022 ಡಿಸೆಂಬರ್ 5ರಂದು ಆದೇಶವಾಗಿತ್ತು. ಹೈಕೋರ್ಟ್ ಆದೇಶದ ಅನುಸಾರ ಸರ್ಕಾರದಿಂದ 2024ರ ಫೆಬ್ರವರಿ 20ರಂದು 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ಎರಡು ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಿದೆʼ ಎಂದು ಹೇಳಿದರು
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪ್ರತ್ಯೇಕ ಅಪಘಾತ : ಇಬ್ಬರು ಬೈಕ್ ಸವಾರರು ಸಾವು
ಜನಸಾಮಾನ್ಯರು ಕೂಡ ತಮ್ಮ ಮೂಲಭೂತ ಸೌಲಭ್ಯ ಪಡೆಯಲು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಅನುದಾನ ಪಡೆಯಬಹುದಾಗಿದೆ ಎಂದು ಗುರುನಾಥ ವಡ್ಡೆ ತಿಳಿಸಿದ್ದಾರೆ.