ಭೂಹೀನ ಮತ್ತು ಬಡ ರೈತ ಕೃಷಿ ಕಾರ್ಮಿಕರು ಸುಮಾರು 70-80 ವರ್ಷಗಳಿಂದ ದಾವಣಗೆರೆ ಜಿಲ್ಲೆಯಲ್ಲಿ ಕುರುಚಲುಗಿಡ, ಕಲ್ಲುಗಳಿರುವ ಕಂದಾಯ ಹಾಗೂ ಅರಣ್ಯದ ಭೂಮಿಯಲ್ಲಿ ಇರುವ ಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ರೈತರ ಜೀವನೋಪಾಯಕ್ಕೆ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಹಾಗೂ ಸದಸ್ಯರು ದಾವಣಗೆರೆ ನಗರದ ಜಯದೇವ ವೃತ್ತದ ಬಳಿ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ಪ್ರತಿಭಟನೆ ಯಲ್ಲಿ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಸತೀಶ್ ಕೈದಾಳೆ, ಹಲವು ದಶಕಗಳಿಂದಲೂ ಕಂದಾಯ ಹಾಗೂ ಅರಣ್ಯದಂಚಿನ ಜಮೀನಿನಲ್ಲಿ ರಾಜ್ಯದಾದ್ಯಂತ ಬಡ ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ ಹಿಂದಿನ ಸರ್ಕಾರವಾಗಲಿ, ಈಗ ಅಧಿಕಾರದಲ್ಲಿರುವ ಸರ್ಕಾರವಾಗಲಿ ಉಳುಮೆಗೆ ಅವಕಾಶ ಕೊಟ್ಟಿದ್ದರು. ಸಾಗುವಳಿ ಮಾಡುತ್ತಿರುವ ಎಲ್ಲರಿಗೂ ಹಕ್ಕುಪತ್ರವನ್ನು ನೀಡಲು ಅವಶ್ಯಕ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಶಾಸನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರು ಸಮಾಜದಲ್ಲಿನ ಇತರೆ ಜನರಂತೆ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೋಳಲಾಟದಲ್ಲಿದ್ದು, ಜರ್ಜರಿತರಾಗಿದ್ದಾರೆ. ಅಲ್ಲದೇ, ಅವರ ಕುಟುಂಬ ಹಾಗೂ ಮಕ್ಕಳ ಭವಿಷ್ಯವು ತೀವ್ರ ಅಭದ್ರತೆಯಿಂದ ಕೂಡಿದೆ. ಬಹುತೇಕ ಸಾಗುವಳಿದಾರರು ಅನಕ್ಷರಸ್ಥರಾಗಿದ್ದು, ಕೃಷಿಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಹಕ್ಕುಪತ್ರ ಕೊಡದೆ ಇರುವುದರಿಂದ ಕೃಷಿ, ಬೆಳೆ ಸಾಲ, ಕೃಷಿ ಪರಿಕರಗಳ ಮೇಲಿನ ಸಾಲ, ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಅಲ್ಪಾವದಿ ಸಾಲವು ದೊರೆಯದ ಕಾರಣ ಬಹುತೇಕ ಬಡ ರೈತ, ಕೃಷಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ಖಾಸಗಿ ಸಾಲಕ್ಕೆ ಮೊರೆ ಹೋಗಿ ತೀವ್ರ ಸಂಕಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಎಲ್ಲಾ ತಾಲೂಕಿನ ತಹಶೀಲ್ದಾರ್ ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ಕರೆದು, ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ ಕೊಡಲು ಕ್ರಮ ಕೈಗೊಳ್ಳಬೇಕು. ಆ ಸಭೆಗೆ ಎಲ್ಲಾ ರೈತ ಸಂಘಟನೆಗಳು ಒಳಗೊಂಡು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿಯನ್ನು ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಬಾಕಿ ಇರುವ ಅರ್ಜಿ ಪರಿಶೀಲಿಸಿ ರೈತರಿಗೆ ಕೂಡಲೇ ಹಕ್ಕುಪತ್ರ ಕೊಡಬೇಕು. ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರ ಮೇಲೆ ಅರಣ್ಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ನಿಲ್ಲಿಸಿ ಮತ್ತು ರೈತರ ಮೇಲೆ ಹಾಕಿರುವ ಎಲ್ಲಾ ಕೇಸ್ ಗಳನ್ನು ರದ್ದು ಮಾಡಬೇಕು. ಎಲ್ಲಾ ಬಗರ್ ಹುಕುಂ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ಹಾಗೂ ಈಗಾಗಲೇ ರೈತರಿಗೆ ಕೊಡುತ್ತಿರುವ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಉಪಾಧ್ಯಕ್ಷ ಡಾ ಸುನೀತ್ ಕುಮಾರ್, ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ ನಾಗಮಾಳ್, ದಾವಣಗೆರೆ ಜಿಲ್ಲಾ ಅಧ್ಯಕ್ಷ ಮಧು ತೊಗಲೇರಿ, ಕಾರ್ಯದರ್ಶಿ ನಾಗಸ್ಮಿತ, ಉಪಾಧ್ಯಕ್ಷರಾದ ಬಸವರಾಜಪ್ಪ ನೀರ್ಥಡಿ, ಉಪಾಧ್ಯಕ್ಷ ಭೀಮಣ್ಣ ಮಾಯಕೊಂಡ, ಸಹ ಕಾರ್ಯದರ್ಶಿ ನಾಗರಾಜ ರಾಮಗೊಂಡನಹಳ್ಳಿ, ಸಹ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.


