ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ರಾಯಭಾರಿಯ ಪಾತ್ರವಿದೆ ಎಂದು ಕೆನಡಾ ಆರೋಪಿಸಿದ ಬೆನ್ನಲ್ಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆನಡಾದ 6 ಮಂದಿ ರಾಜತಾಂತ್ರಿಕರನ್ನು ಭಾರತ ಉಚ್ಚಾಟಿಸಿದೆ. ಅ.19ರೊಳಗೆ ದೇಶದಿಂದ ನಿರ್ಗಮಿಸುವಂತೆ ಅವರಿಗೆ ಸೂಚಿಸಿದೆ.
ಕೆನಡಾ ರಾಯಭಾರಿ ಕಚೇರಿಯ ಚಾರ್ಜ್ ಡಿ ಅಫೇರ್ಸ್ ಸ್ಟಿವರ್ಟ್ ವ್ಹೀಲರ್, ಉಪ ರಾಯಭಾರಿ ಪ್ಯಾಟ್ರಿಕ್ ಹೆಬರ್ಟ್, ಪ್ರಥಮ ಕಾರ್ಯದರ್ಶಿಗಳಾದ ಮಾರೀ ಕ್ಯಾಥರಿನ್ ಜೊಲಿ, ಇಯಾನ್ ರಾಸ್ ಡೇವಿಡ್, ಆ್ಯಡಂ ಜೇಮ್ಸ್ ಚಿಪ್ಕಾ ಮತ್ತು ಪೌಲಾ ಒರ್ಜುವೇಲಾ ಉಚ್ಛಾಟಿತ ರಾಜತಾಂತ್ರಿಕರಾಗಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುರ್ರೆ ನಗರದ ಗುರುದ್ವಾರದ ಬಳಿ ಖಲಿಸ್ತಾನಿ ಉಗ್ರ ನಿಜ್ಜಾರ್ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದ. ಕೃತ್ಯದಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಆರೋಪ ಮಾಡಿದ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಸರಿಯಾಗಿ ಒಂದು ವರ್ಷದ ಬಳಿಕ ಪ್ರಕರಣಕ್ಕೆ ಮತ್ತೆ ಜೀವ ನೀಡಿರುವ ಕೆನಡಾ ಸರ್ಕಾರ, ಹತ್ಯೆಯ ಹಿಂದೆ ಭಾರತೀಯ ರಾಯಭಾರಿ ಸಂಜಯ್‌ಕುಮಾರ್ ವರ್ಮಾ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್‌ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ
ಕೆನಡಾ ಸರ್ಕಾರದ ನಡೆಗೆ ಸೋಮವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ,ಭಾರತೀಯ ಹಿರಿಯ ರಾಜತಾಂತ್ರಿಕ ಅಧಿಕಾರ ವಿರುದ್ಧ ಆರೋಪ ಅಸಂಬದ್ಧ ಎಂದು ತಳ್ಳಿ ಹಾಕಿದೆ. ಹಾಗೆಯೇ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ತನಿಖೆಯ ವ್ಯಾಪ್ತಿಗೆ ತರಬೇಕು ಎಂಬ ಕೆನಡಾ ಮನವಿಯನ್ನು ತಿರಸ್ಕರಿಸಿದೆ.
ನಿಜ್ಜಾರ್ ಹತ್ಯೆಯಲ್ಲಿ ಭಾರತದ ಪಾತ್ರ ಎಳ್ಳಷ್ಟೂ ಇಲ್ಲ. ಕಾನೂನುಬಾಹಿರವಾಗಿ ಕೆಲವು ಕ್ರಿಮಿನಲ್‌ಗಳಿಗೆ ಕೆನಡಾ ಸರ್ಕಾರ ಪೌರತ್ವ ನೀಡಿದೆ. ಪ್ರತ್ಯೇಕತಾವಾದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ. ಭಾರತದ ಅತೀ ಮುಣ್ಯ ಅಪರಾಧಿಗಳನ್ನು ಹಸ್ತಾಂತರಿಸುವ ಮನವಿಗೂ ಸ್ಪಂದಿಸದೆ ಪ್ರಧಾನಿ ಜಸ್ಟಿನ್ ಟ್ರುಡೊ ಸರ್ಕಾರ ಆಶ್ರಯ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ.
ಸಂಜಯ್‌ಕುಮಾರ್ ವರ್ಮಾ ಭಾರತ ಸರ್ಕಾರದ ಹಿರಿಯ ರಾಜತಾಂತ್ರಿಕ ಅಧಿಕಾರಿ. ಕಳೆದ 36 ವರ್ಷಗಳಿಂದ ವಿದೇಶಾಂಗ ಇಲಾಖೆಯಲ್ಲಿಕೆಲಸ ನಿರ್ವಹಿಸುತ್ತಿದ್ದಾರೆ. ಜಪಾನ್, ಸುಡಾನ್, ಟರ್ಕಿ, ವಿಯೆಟ್ನಾಂ, ಚೀನಾದಲ್ಲಿ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕೆನಡಾದಲ್ಲಿ ಭಾರತೀಯ ರಾಯಭಾರಿಯಾಗಿದ್ದಾರೆ.
