ಕೆನಡಾದಲ್ಲಿ ಖಲಿಸ್ತಾನಿ ಗುಂಪುಗಳನ್ನು ಮಟ್ಟ ಹಾಕಲು ಭಾರತ ಸರ್ಕಾರ ಕುಖ್ಯಾತ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಗುಂಪಿನೊಂದಿಗೆ ಕೈಜೋಡಿಸಿದೆ ಎಂದು ಕೆನಡಾ ಸರ್ಕಾರ ಗಂಭೀರ ಆರೋಪ ಮಾಡಿದೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್‌ನ ಸಹಾಯಕ ಆಯುಕ್ತ ಬ್ರಿಗಿಟ್ಟೆ ಗೌವಿನ್, “ಭಾರತವು ನಿರ್ದಿಷ್ಟವಾಗಿ ಬಿಷ್ಣೋಯ್ ಗ್ಯಾಂಗ್‌ನಂತಹ ಸಂಘಟಿತ ಅಪರಾಧ ಗುಂಪುಗಳನ್ನು ಬಳಸಿಕೊಂಡು ಕೆನಡಾದಲ್ಲಿ ಖಲಿಸ್ತಾನಿ ಪರ ಗುಂಪುಗಳನ್ನು ಗುರಿಯಾಗಿಸಿಕೊಂಡಿದೆ. ಸಂಘಟಿತ ಅಪರಾಧ ಮಾಡುತ್ತಿರುವ ಬಿಷ್ಣೋಯ್ ಗುಂಪಿನೊಂದಿಗೆ ಭಾರತದ ಏಜೆಂಟರು ಕೈಜೋಡಿಸಿರುವುದನ್ನು ಕೆನಡಾ ಪೊಲೀಸರು ಪತ್ತೆಹಚ್ಚಿದ್ದಾರೆ. ಭಾರತವು ದಕ್ಷಿಣ ಏಷ್ಯಾದ ಸಮುದಾಯವನ್ನು ಗುರಿಯಾಗಿಸುತ್ತಿದೆ. ಪ್ರಮುಖವಾಗಿ ಕೆನಡಾದಲ್ಲಿ ಖಲಿಸ್ತಾನಿ ಗುಂಪುಗಳನ್ನು ಗುರಿಯಾಗಿಸುತ್ತಿದೆ” ಎಂದು ಹೇಳಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗುಂಪಿನ ಸದಸ್ಯರು ಮುಂಬೈನಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ 66 ವರ್ಷದ ಬಾಬಾ ಸಿದ್ದೀಕಿ ಅವರನ್ನು ಗುಂಡಿಕ್ಕಿ ಕೊಂದ ನಂತರ ಕೆನಡಾ ಸರ್ಕಾರ ಭಾರತದ ವಿರುದ್ಧ ಮತ್ತೊಂದು ಗುರುತರವಾದ ಆರೋಪ ಮಾಡಿದೆ.
31 ವರ್ಷದ ಬಿಷ್ಣೋಯ್ ಡ್ರಗ್ಸ್ ಪ್ರಕರಣದಲ್ಲಿ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಜೈಲಿನಲ್ಲಿದ್ದರೂ 2022 ರಲ್ಲಿ ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ, 2023 ರಲ್ಲಿ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಸೇರಿದಂತೆ ಅನೇಕ ಪ್ರಮುಖ ಗಣ್ಯರನ್ನು ಹತ್ಯೆ ಮಾಡಿಸಿದ ಆರೋಪ ಹೊತ್ತಿದ್ದಾನೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್‌ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ
ಈ ನಡುವೆ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ರಾಯಭಾರಿಯ ಪಾತ್ರವಿದೆ ಎಂದು ಕೆನಡಾ ಆರೋಪಿಸಿದ ಬೆನ್ನಲ್ಲೇ ಎರಡೂ ದೇಶಗಳು ತಲಾ 6 ಮಂದಿ ರಾಜತಾಂತ್ರಿಕರನ್ನು ಉಚ್ಚಾಟಿಸಿವೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸುರ್ರೆ ನಗರದ ಗುರುದ್ವಾರದ ಬಳಿ ಖಲಿಸ್ತಾನಿ ಉಗ್ರ ನಿಜ್ಜಾರ್ ಆಗುಂತಕರ ಗುಂಡೇಟಿಗೆ ಬಲಿಯಾಗಿದ್ದ. ಕೃತ್ಯದಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಆರೋಪ ಮಾಡಿದ ಬಳಿಕ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಸರಿಯಾಗಿ ಒಂದು ವರ್ಷದ ಬಳಿಕ ಪ್ರಕರಣಕ್ಕೆ ಮತ್ತೆ ಜೀವ ನೀಡಿರುವ ಕೆನಡಾ ಸರ್ಕಾರ, ಹತ್ಯೆಯ ಹಿಂದೆ ಭಾರತೀಯ ರಾಯಭಾರಿ ಸಂಜಯ್‌ಕುಮಾರ್ ವರ್ಮಾ ಅವರ ಪಾತ್ರವಿದ್ದು, ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.
