ಮಧ್ಯಪ್ರದೇಶದಿಂದ ಉತ್ತರಪ್ರದೇಶಕ್ಕೆ ತೆರಳುತ್ತಿದ್ದ ಕೋಟಾ-ಇಟಾವಾ ಎಕ್ಸ್‌ಪ್ರೆಸ್‌ನಿಂದ ಯುವತಿಯನ್ನು ಅಪಹರಿಸಿ, ಆಕೆಯ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಸೋಮವಾರ ನಡೆದಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
22 ವರ್ಷದ ಸಂತ್ರಸ್ತ ಯುವತಿ ಮಧ್ಯಪ್ರದೇಶದ ಭಿಂಡ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ತೆರಳಿದ್ದರು. ಅಲ್ಲಿಂದ ಉತ್ತರ ಪ್ರದೇಶದ ಇಟಾವಾದಲ್ಲಿರುವ ತಮ್ಮ ನಿವಾಸಕ್ಕೆ ಮರಳಲು ರೈಲು ಹತ್ತಿದ್ದರು. ಈ ವೇಳೆ, ಕಾಮುಕರು ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಪೋಷಕರು ಇಟಾವಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ತಮ್ಮ ಮಗಳಿಗೆ ನಿದ್ರೆ ಮಾತ್ರೆ ಕೊಟ್ಟು, ಪ್ರಜ್ಞೆ ತಪ್ಪಿಸಿ, ದುಷ್ಕರ್ಮಿಗಳು ಅಪಹರಿಸಿದ್ದಾರೆ” ಎಂದು ಪೋಷಕರು ಆರೋಪಿಸಿದ್ದಾರೆ.
“ಅಕ್ಟೋಬರ್ 12 ರಂದು ಯುವತಿ ರೈಲು ಹತ್ತಿದ್ದರು. ಈ ವೇಳೆ, ರೈಲಿನಲ್ಲಿದ್ದ ಅಪರಿಚಿತನೊಬ್ಬ ಆಕೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಅದನ್ನು ಗಮನಿಸಿದ ಯುವತಿ, ಆತನ ನಡೆಯನ್ನು ವಿರೋಧಿಸಿದ್ದಾರೆ. ತಾವು ಕುಳಿತಿದ್ದ ಬೋಗಿಯನ್ನು ಬದಲಿಸಿದ್ದಾರೆ. ಅಲ್ಲದೆ, ಆತನ ಮೇಲೆ ಅನುಮಾನಗೊಂಡು ಆತನ ಫೋಟೋವನ್ನೂ ಯುವತಿ ತನ್ನ ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಹೆಣ್ಣಿನ ಮೇಲಿನ ಶೋಷಣೆ ತಡೆಯುವಲ್ಲಿ ಕುಟುಂಬಗಳಿಗಿದೆ ಪ್ರಧಾನ ಪಾತ್ರ!
“ಆಕೆ ಬೋಗಿ ಬದಲಿಸಿದರೂ, ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿ, ಆಕೆಯ ಪ್ರಜ್ಞೆ ತಪ್ಪಿಸಿ ಅಪಹರಿಸಿದ್ದಾನೆ. ಆಕೆಗೆ ಪ್ರಜ್ಞೆ ಬಂದ ಬಳಿಕ ಆಕೆಯ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಮತ್ತೆ ಪ್ರಜ್ಞೆ ತಪ್ಪಿಸಿ ಉಜ್ಜೈನಿ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಆಕೆಯನ್ನು ಬಿಟ್ಟು ಹೋಗಿದ್ದಾರೆ. ಆಕೆಯನ್ನು ಕಂಡ ಸ್ಥಳೀಯರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ” ಎಂದು ದೂರಿನಲ್ಲಿ ವಿವರಿಸಲಾಗಿದೆ.
ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಕಾಮುಕರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ(ಬಿಎನ್‌ಎಸ್) ಸೆಕ್ಷನ್ 70(1) (ಗ್ಯಾಂಗ್ ರೇಪ್) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.