ಮಂಗಳೂರು ನಗರದಲ್ಲಿ ಹೈಕೋರ್ಟ್ ಪೀಠ ರಚನೆಗಾಗಿ ಸಂಘಟಿತ ಹೋರಾಟ ರೂಪಿಸುವುದಕ್ಕಾಗಿ ಆರು ಜಿಲ್ಲೆಗಳ ಪ್ರಮುಖರನ್ನು ಒಳಗೊಂಡ ಶಾಶ್ವತ ಹೈಕೋರ್ಟ್ ಹೋರಾಟ ಸಮಿತಿ ರಚಿಸಲು ಹೈಕೋರ್ಟ್ ಪೀಠ ಹೋರಾಟ ಸಮಿತಿ ತೀರ್ಮಾನಿಸಿದೆ.
ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಹೈಕೋರ್ಟ್ ಪೀಠ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.
ಮಂಗಳೂರಿನಲ್ಲಿ ಅಥವಾ ಮಂಗಳೂರು– ಉಡುಪಿ ನಡುವೆ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಸಾರ್ವಜನಿಕರ ನಿಯೋಗದಿಂದ ಮನವಿ ಸಲ್ಲಿಸಲು ಹಾಗೂ ಬಜೆಟ್‌ನಲ್ಲಿ ₹ 25 ಕೋಟಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಲು ಹಾಗೂ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿದೆ.

ಕೋರ್ ಕಮಿಟಿಯಲ್ಲಿ ಮಂಗಳೂರು ವಕೀಲರ ಸಂಘದ ಪ್ರಮುಖರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಸದಸ್ಯರಾಗಿರಲಿದ್ದಾರೆ. ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆಯುವ ಹೋರಾಟದ ಸಮನ್ವಯಕ್ಕಾಗಿ ಈ ಕೋರ್ ಕಮಿಟಿ ಶ್ರಮಿಸಲಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ. ತಿಳಿಸಿದ್ದಾರೆ.
ಹೋರಾಟ ಕಾನೂನಾತ್ಮಕ ರೂಪರೇಷೆಗಳ ಬಗ್ಗೆ ವಕೀಲ ಎಂ. ಪಿ ನರೋನ್ಹ ವಿವರಿಸಿದರು. ‘ಹೈಕೋರ್ಟ್ ಪೀಠ ರಚನೆಯ ಸಂದರ್ಭದಲ್ಲಿ ಈ ಹಿಂದೆ ಅನುಸರಿಸಿದ್ದ ಮಾನದಂಡಗಳು, ಈ ಹಿಂದೆ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ನಿಖರವಾಗಿ ಉಲ್ಲೇಖಿಸಿ ಮನವಿ ಸಿದ್ಧಪಡಿಸಬೇಕು’ ಎಂದು ವಕೀಲರೊಬ್ಬರು ಸಲಹೆ ನೀಡಿದರು.

‘ಮನವಿ ಸಲ್ಲಿಸಿದ ತಕ್ಷಣವೇ ಹೋರಾಟ ಯಶಸ್ವಿಯಾಗದು. ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆದಿದೆ. ಈ ಪೀಠ ಸ್ಥಾಪನೆ ಅಗತ್ಯವನ್ನು ಪ್ರತಿಪಾದಿಸುವುದರ ಜೊತೆಗೆ ಪ್ರಮುಖರ ಗಮನ ಸೆಳೆಯುವ ಕಾರ್ಯವೂ ನಡೆಯಬೇಕಿದೆ’ ಎಂಬ ಸಲಹೆ ಕೂಡ ಸಭೆಯಲ್ಲಿ ವ್ಯಕ್ತವಾಯಿತು.
ಇದನ್ನು ಓದಿದ್ದೀರಾ? ಪೋಕ್ಸೊ ಪ್ರಕರಣ | ಸಂತ್ರಸ್ತೆ ವಿರುದ್ದವೇ ಹಲ್ಲೆ ಪ್ರಕರಣ ದಾಖಲು; ಕಾನೂನು ಸಂಘರ್ಷದಲ್ಲಿ ವಿದ್ಯಾರ್ಥಿನಿ
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆ ವಕೀಲರಿಗಾಗಿ ಮಾತ್ರ ಅಲ್ಲ. ಹೈಕೋರ್ಟ್ ಪೀಠ ಇಲ್ಲಿ ಸ್ಥಾಪನೆಯಾದರೆ ಇಲ್ಲಿನ ಹೋಟೆಲ್ ಉದ್ಯಮ, ಟ್ಯಾಕ್ಸಿ, ಬಸ್ ಸೇವೆಗಳಿಗೂ ಅನುಕೂಲವಾಗಲಿದೆ. ಹಾಗಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಪ್ರಮುಖರ ಹಾಗೂ ಸಂಘ ಸಂಸ್ಥೆಗಳ ನೆರವನ್ನು ಪಡೆಯುವ ಮೂಲಕ ಇದನ್ನು ಸಾರ್ವಜನಿಕ ಹೋರಾಟವನ್ನಾಗಿ ರೂಪಿಸಬೇಕು ಎಂದು ವಕೀಲರೊಬ್ಬರು ಸಲಹೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಧ್ಯಾಪಕ ಮಹೇಶಚಂದ್ರ ಹಾಗೂ ಬೆಂಗಳೂರು ಬಾರ್ ಕೌನ್ಸಿಲ್‌ನ ಟಿ.ಎನ್. ಪೂಜಾರಿ, ವಕೀಲರಾದ ಎಂ. ಆರ್ ಬಲ್ಲಾಳ್, ಪೃಥ್ವಿರಾಜ್ ರೈ, ಶ್ರೀಧರ್ ಎಣ್ಮಕಜೆ, ಚಿನ್ಮಯ್ ರೈ, ರಿಚರ್ಡ್ ಕ್ರಾಸ್ತ, ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. ವಕೀಲರಾದ ಆಶಾ ನಾಯಕ್ ಧನ್ಯವಾದ ಸಲ್ಲಿಸಿದರು.

