ಹುಬ್ಬಳ್ಳಿಯ ದೇಶದ್ರೋಹಿ ಕೃತ್ಯದ ಆರೋಪಿಗಳ ಕೇಸನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಶೀಘ್ರವೇ ಹಮ್ಮಿಕೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಂಗಳವಾರ ವಿಧಾನಪರಿಷತ್ ಉಪ ಚುನಾವಣೆ ಸಂಬಂಧ ನಡೆದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಹುಬ್ಬಳ್ಳಿಯಲ್ಲಿ 2022ರಲ್ಲಿ ದೇಶದ್ರೋಹಿಗಳು ಪೊಲೀಸ್ ಠಾಣೆ ಮೇಲೆ ಕಲ್ಲೆಸೆದು, ದಾಳಿ ಮಾಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಆ ಗಲಭೆ ಸೃಷ್ಟಿಸಿದ್ದ ದೇಶದ್ರೋಹಿಗಳ ಮೇಲಿನ ಕೇಸುಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಹಿಂದಕ್ಕೆ ಪಡೆದಿದೆ. ಇದು ಅತ್ಯಂತ ದುರದೃಷ್ಟಕರ ಮತ್ತು ಖಂಡನಾರ್ಹ” ಎಂದರು.
“ಗೃಹ ಸಚಿವರ ನೇತೃತ್ವದ ಉಪ ಸಮಿತಿ ಇದನ್ನು ಶಿಫಾರಸು ಮಾಡಿತ್ತು. ನಿಮ್ಮದೇ ಪೊಲೀಸರು ಈ ಕುರಿತು ಎಫ್‍ಐಆರ್ ಮಾಡಿತ್ತು. ಎನ್‍ಐಎ ತನಿಖೆಯೂ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರದ ಈ ನಡವಳಿಕೆ ಅಕ್ಷಮ್ಯ ಅಪರಾಧ. ನಿನ್ನೆ ಇದರ ವಿರುದ್ಧ ಬೆಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ” ಎಂದು ವಿವರಿಸಿದರು.
“ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರ್ಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತೆ. ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಶೀಘ್ರವೇ ಭೇಟಿ ಮಾಡಿ ರಾಜ್ಯದಲ್ಲಿರುವ ಹಿಂದೂ ವಿರೋಧಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಿದ್ದೇವೆ” ಎಂದು ವಿಜಯೇಂದ್ರ ತಿಳಿಸಿದರು.
“ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳು ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಕಾಂಗ್ರೆಸ್ ಸರಕಾರಕ್ಕೆ ಪಾಠ ಕಲಿಸಲು ಬಿಜೆಪಿ ನಿರಂತರ ಹೋರಾಟ ನಡೆಸುತ್ತ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೈಸೂರು ಮುಡಾ ಹಗರಣ, ಎಸ್‍ಇಪಿ, ಟಿಎಸ್‍ಪಿ ಹಣವನ್ನು ವರ್ಗಾವಣೆ ಮಾಡಿದ ವಿಚಾರಗಳನ್ನು ಇಟ್ಟುಕೊಂಡು ಮುಂದಿನ ಹೋರಾಟದ ರೂಪುರೇಷೆಗಳನ್ನು ನಾವು ಸದ್ಯವೇ ತೀರ್ಮಾನ ಮಾಡಲಿದ್ದೇವೆ” ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರಿಗೆ-ಸರ್ಕಾರಕ್ಕೆ ಸವಾಲಾಗಿರುವ ಸೈಬರ್ ಕ್ರೈಮ್
“ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ಕ್ಷೇತ್ರಕ್ಕೆ ವಿಧಾನಪರಿಷತ್ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿ ಒಬ್ಬ ಯುವ ಕಾರ್ಯಕರ್ತ, ಹಿಂದುತ್ವದ ಕಟ್ಟಾಳು ಕಿಶೋಶ್‌ಕುಮಾರ್ ಪುತ್ತೂರು ಅವರನ್ನು ಅಭ್ಯರ್ಥಿಯಾಗಿ ಪ್ರಕಟಿಸಿದೆ. ನಮ್ಮೆಲ್ಲ ಶಾಸಕರು, ಜನಪ್ರತಿನಿಧಿಗಳು ಉತ್ಸಾಹದಿಂದ ಇವತ್ತು ಕೆಲಸ ಮಾಡುತ್ತಿದ್ದು, ನಮ್ಮ ಅಭ್ಯರ್ಥಿಯನ್ನು ದೊಡ್ಡ ಅಂತರದಿಂದ ಗೆಲ್ಲಿಸಲು ಶ್ರಮಿಸುತ್ತಿದ್ದಾರೆ ಎಂದರು. ಈ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ್ ಕೋಟ್ಯಾನ್, ಕು. ಭಾಗೀರಥಿ ಮುರಳ್ಯ, ವಿಧಾನಪರಿಷತ್ ಉಪಚುನಾವಣೆಯ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ನಿಕಟಪೂರ್ವ ವಿಭಾಗ ಪ್ರಭಾರಿ ಉದಯ್‍ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಉಪಸ್ಥಿತರಿದ್ದರು.