ವಿ ಡಿ ಸಾವರ್ಕರ್ | ಆಧುನಿಕ ಭಾರತದ ರಾಜಕೀಯದಲ್ಲಿ ʼಪಿತೂರಿ ಸಿದ್ಧಾಂತʼವನ್ನು ಬೆಳೆಸಿದ ವಿಲಕ್ಷಣ ವ್ಯಕ್ತಿ

Date:

Advertisements

ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹವನ್ನು ಆರಂಭಿಸಿದಾಗ, ಸಾವರ್ಕರ್ ಅವರು ಮಥುರಾದಲ್ಲಿ 1940ರ ಡಿಸೆಂಬರ್‌ನಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನದಲ್ಲಿ, ಹಿಂದೂಗಳು ಬ್ರಿಟಿಷ್ ಸೈನ್ಯವನ್ನು ಸೇರಬೇಕೆಂದು ಕರೆಯಿತ್ತಿದ್ದರಂತೆ!

ವಿನಾಯಕ್ ದಾಮೋದರ ಸಾವರ್ಕರ್ ಅವರು ಅಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿ ಪಿತೂರಿ ಸಿದ್ಧಾಂತವನ್ನು ಬೆಳೆಸಿದ ವಿಲಕ್ಷಣ ವ್ಯಕ್ತಿ. ಸಾವರ್ಕರ್ ಕುರಿತು ಖ್ಯಾತ ಸ್ವತಂತ್ರ ಪತ್ರಕರ್ತ ಪವನ್ ಕುಲಕರ್ಣಿ ಅವರು ‘ದಿ ವೈರ್’ ವೆಬ್ ಜರ್ನಲ್‌ನಲ್ಲಿ 28ಮೇ 2017 ಮತ್ತು 2019ರಲ್ಲಿ ಬರೆದ ಲೇಖನವನ್ನಾಧರಿಸಿ ನಾನು ಇಲ್ಲಿ ಅವರ ಭಿನ್ನ ವ್ಯಕ್ತಿತ್ವದ ಕುರಿತು ವಿಮರ್ಶಿಸಿದ್ದೇನೆ. ಸಾವರ್ಕರ್ ಒಬ್ಬ ಉಗ್ರ ಹಿಂದುತ್ವವಾದಿಯಾಗಿದ್ದರು. ಅವರು ತಮ್ಮ ಅನೇಕ ವಿವಾದಾತ್ಮಕ ನಡೆಗಳಿಂದ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ ನಂತರದಲ್ಲಿ ಜನಪ್ರಿಯವಾಗಿದ್ದರು. ಸಾವರ್ಕರ್ ಅವರದ್ದು ಒಂದು ಬಗೆಯಲ್ಲಿ ವಿಲಕ್ಷಣ ವ್ಯಕ್ತಿತ್ವ. ತಮ್ಮನ್ನು ತಾವು ಪೌರಾಣಿಕ ಶೈಲಿಯಲ್ಲಿ ‘ವೀರ ಸಾವರ್ಕರ್’ ಎಂಬ ಕರೆದುಕೊಳ್ಳುತ್ತಿದ್ದರು. ಸಾವರ್ಕರ್ ಅವರು ಮಹಾರಾಷ್ಟ್ರದ ಸಾಂಪ್ರದಾಯವಾದಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವರು. ಅನ್ಯಧರ್ಮ ದ್ವೇಷ, ದಲಿತ ಹಾಗೂ ಬಹುಜನರ ಕುರಿತ ಹಗೆತನಕ್ಕೆ ಹೆಸರಾದ ಚಿತ್ಪಾವನ ಬ್ರಾಹ್ಮಣ ಜಾತಿಯ ಪ್ರಮುಖ ವ್ಯಕ್ತಿಗಳೆಂದರೆ ಬಾಲಗಂಗಾಧರನಾಥ್ ಟೀಳಕ್, ಕೇಶವ್ ಬಳಿರಾಮ್ ಹೆಡಗೇವಾರ್, ಗೋಳ್ವಾಲ್ಕರ್, ನಾಥೂರಾಮ್ ಗೋಡ್ಸೆ ಮುಂತಾದವರು.

ಆರಂಭದಲ್ಲಿ ಸಾವರ್ಕರ್ ಉಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಆಮೇಲೆ ಏನಾಯ್ತೊ ಗೊತ್ತಿಲ್ಲ, ಅವರು ಬ್ರಿಟಿಷ್ ಸರಕಾರಕ್ಕೆ ಎಡೆಬಿಡದೆ ಸತತ ನಾಲ್ಕಾರು ಬಾರಿ ದಯಾ ಕ್ಷಮಾಪಣಾ ಪತ್ರಗಳು ಸಲ್ಲಿಸಿ ಜೈಲಿನಿಂದ ಬಿಡುಗಡೆಯಾಗಿ ಬ್ರಿಟಿಷ್ ಆಡಳಿತಕ್ಕೆ ಶರಣಾಗಿ, ನಿಷ್ಠರಾಗಿ, ಸಹಕರಿಸಿ ಪಿಂಚಣಿ ಪಡೆದು ಬದುಕಿದ ವರ್ಣರಂಜಿತ ವ್ಯಕ್ತಿ. ಬ್ರಿಟಿಷ್ ಆಡಳಿತದ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟುತ್ತಿದ್ದ ಸಂದರ್ಭದಲ್ಲಿ, ಸಾವರ್ಕರ್ ಮಾತ್ರ ಲಕ್ಷಾಂತರ ಭಾರತೀಯ ಹಿಂದೂಗಳನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಲು ಅವಿರತ ದುಡಿದರು. ಆನಂತರ ಅವರು ಹಿಂದುತ್ವವನ್ನು ಮುನ್ನೆಲೆಗೆ ತಂದು ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರು. ಅವರ ಈ ಹಿಂದುತ್ವದ ಸಿದ್ಧಾಂತ ಅಂದು ಅಗತ್ಯವಿದ್ದ ಬ್ರಿಟಿಷರ ವಿರುದ್ಧದ ಒಗ್ಗಟ್ಟನ್ನು ಮುರಿದು ಕೋಮುವಾದದ ಆಧಾರದಲ್ಲಿ ಭಾರತೀಯರನ್ನು ವಿಭಜಿಸಿತು. ಸ್ವಾತಂತ್ರ್ಯಾ ನಂತರ, ಅವರು ಗಾಂಧಿ ಹತ್ಯೆಯ ಪಿತೂರಿ ಆರೋಪಿಯಾಗಿದ್ದು ಅಗತ್ಯ ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆಗೊಂಡರು. ಸಾವರ್ಕರ್ ಅವರನ್ನು ಅಂದು ಗಾಂಧಿ ಹತ್ಯೆಯ ಮಾಸ್ಟರ್ ಮೈಂಡ್ ಎಂದೇ ಗುರುತಿಸಲಾಗುತ್ತಿತ್ತು. 2015ರಲ್ಲಿ ಮೋದಿಯವರು ಸಾವರ್ಕರ್ ಅವರ 132ನೇ ಜನ್ಮದಿನದ ನಿಮಿತ್ತ “ಭಾರತ ಮಾತೆಯ ನೈಜ ಸುಪುತ್ರ” ಎಂದು ಟ್ವೀಟ್ ಮಾಡಿ ಅವರ ಗುಣಗಾನ ಮಾಡಿದ್ದರು.

ಆರಂಭದಲ್ಲಿ ಸಾವರ್ಕರ್ ನಿಜವಾಗಿಯೂ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಜೈಲಿನಿಂದ ಬಂದ ಮೇಲೆ ಹಿಂದುತ್ವ ಸಿದ್ಧಾಂತದ ಹಿಂದೆ ಬೀಳುವ ಮೊದಲು ಅವರೊಬ್ಬ ಅಪ್ಪಟ ನಾಸ್ತಿಕವಾದಿ ಮತ್ತು ವಿಚಾರವಾದಿಯಂತೆ ಮಾತನಾಡುತ್ತಿದ್ದರು. ಮೊದಮೊದಲು ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟವೇ ಬೇಕು ಎಂದು ವಾದಿಸುತ್ತಿದ್ದರು. ಕ್ರಾಂತಿ ಮಾತ್ರ ನಮ್ಮ ಹಕ್ಕನ್ನು ಮರು ಸ್ಥಾಪಿಸುವ ಏಕೈಕ ಪರಿಣಾಮಕಾರಿ ಸಾಧನ ಎನ್ನುತ್ತಿದ್ದರು. 1906ರಲ್ಲಿ ಬ್ಯಾರಿಸ್ಟರ್ ಓದಲು ಇಂಗ್ಲೆಂಡಿಗೆ ಹೋದ ನಂತರ, ಸಾವರ್ಕರ್ ಅವರು ಸ್ವತಂತ್ರ ಭಾರತ ಸೊಸೈಟಿ ಯನ್ನು ಸ್ಥಾಪಿಸಿ, ಬ್ರಿಟಿಷರ ವಿರುದ್ಧ ಹೋರಾಡಲು ಇಂಗ್ಲೆಂಡಿನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸಿದರು. ಆನಂತರ ಬ್ರಿಟಿಷ್ ವಸಹಾತುಶಾಹಿ ದಬ್ಬಾಳಿಕೆಯ ಸರಕಾರದ ನಿಷ್ಠಾವಂತ ಸಮರ್ಥಕರಾಗಿ ಬದಲಾದರು. 1909ರಲ್ಲಿ ಅಭಿನವ್ ಭಾರತ್ ಸಂಸ್ಥೆಯ ಸದಸ್ಯನೊಬ್ಬನಿಗೆ ಆಗಿನ ನಾಸಿಕ್ ಜಿಲ್ಲಾ ಕಲೆಕ್ಟರ್ ಆಗಿದ್ದ ಎಎಮ್‌ಟಿ ಜಾಕ್ಸನ್ ಹತ್ಯೆಗೆ ಬಳಸಿದ ಪಿಸ್ತೂಲ್ ಪೂರೈಸಿದ ಆರೋಪದಲ್ಲಿ ಸಾವರ್ಕರ್ 50 ವರ್ಷಗಳ ಕಠಿಣ ಶಿಕ್ಷೆಗೊಳಗಾಗಿ ಅಂಡಮಾನ್‌ನ ಸೆಲ್ಯುಲಾರ್ ಜೈಲು ಸೇರಿದರು. ಜೈಲು ಶಿಕ್ಷೆಗೆ ಹೆದರಿ ಕೇವಲ ಒಂದೇ ತಿಂಗಳಲ್ಲಿ ‘ವೀರ್’ ಸಾವರ್ಕರ್ ಅವರು ತನ್ನ ಮೊದಲ ಕ್ಷಮಾದಾನ ಮತ್ತು ದಯಾ ಅರ್ಜಿಯನ್ನು ಬರೆದರು.

Advertisements
Andaman cell edited

ಸಾವರ್ಕರ್ ಅವರ ಕ್ಷಮಾಪಣಾ ಅರ್ಜಿ 1911ರಲ್ಲಿ ಬ್ರಿಟಿಷ್ ಸರಕಾರ ತಿರಸ್ಕರಿಸಿತು. 1913ರಲ್ಲಿ ಅವರು ತಮ್ಮ ಎರಡನೇ ಕ್ಷಮಾದಾನ ಅರ್ಜಿಯನ್ನು ಬರೆದರು. ಅದರಲ್ಲಿ ಅವರು ಇತರ ಕೈದಿಗಳಿಗೆ ತನಗಿಂತ ಉತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ದೂರಿದ್ದರು. “ನನಗೆ ಮಾತ್ರ ಡಿ ಅಂದರೆ ಡೇಂಜರ್ (ಅಪಾಯಕಾರಿ) ಕೈದಿ ಎಂದು ವರ್ಗೀಕರಿಸಲಾಗಿದೆ; ಇದರಿಂದ ನಾನು ಸಂಪೂರ್ಣವಾಗಿ ಆರು ​​ತಿಂಗಳು ಏಕಾಂತದಲ್ಲಿ ಇರಬೇಕಾಯಿತು” ಎಂದು ಅಳಲು ತೋಡಿಕೊಂಡಿದ್ದರು. 1920ರಲ್ಲಿ ಸಾವರ್ಕರ್ ತಮ್ಮ ನಾಲ್ಕನೇ ಕ್ಷಮಾದಾನ ಅರ್ಜಿ ಸಲ್ಲಿಸಿದ ನಂತರ 1921ರಲ್ಲಿ ಅವರ ಸಹೋದರನೊಂದಿಗೆ ಅವರನ್ನು ಬ್ರಿಟಿಷ್ ಸರಕಾರ ರತ್ನಗಿರಿ ಜೈಲಿಗೆ ಸ್ಥಳಾಂತರಿಸಿತು. ಆನಂತರ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡುವವರ ಮಾಹಿತಿ ಕೊಡುತ್ತೇನೆ ಮತ್ತು ಸಾಯುವವರೆಗೆ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠನಾಗಿರುತ್ತೇನೆಂದು ಮುಚ್ಚಳಿಕೆ ಬರೆದುಕೊಟ್ಟು ಬ್ರಿಟಿಷರಿಂದ ಮಾಸಿಕ 60 ರೂ. ಪಿಂಚಣಿ ಪಡೆದು 1924ರಲ್ಲಿ ಬಿಡುಗಡೆಯಾದರು. ಅವರ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಬ್ರಿಟಿಷ್ ಸರಕಾರ 1937ರಲ್ಲಿ ಹಿಂತೆಗೆದುಕೊಂಡಿತು. ಹೀಗೆ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಆರ್ಭಟಿಸಿ ಆನಂತರ ಕಠಿಣ ಶಿಕ್ಷೆಗೆ ಹೆದರಿ ಬ್ರಿಟಿಷರಿಗೆ ಶರಣಾಗಿದ್ದ ಸಾವರ್ಕರ್‌ ಅವರು ‘ವೀರ’ ಎಂಬ ಬಿರುದಾಂಕಿತರಾಗಿದ್ದು ಆಶ್ಚರ್ಯದ ಸಂಗತಿಯಾಗಿದೆ.

‘ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್’ ಎಂಬ ಪುಸ್ತಕವು ಸಾವರ್ಕರ್ ಅವರ ಜೀವನಚರಿತ್ರೆಯಾಗಿದ್ದು ಇದು ಮೊದಲು ಪ್ರಕಟವಾಗಿದ್ದು 1926ರಲ್ಲಿ. ಈ ಪುಸ್ತಕದ ಲೇಖಕನ ಹೆಸರು ಚಿತ್ರಗುಪ್ತನೆಂಬ ವಿಚಿತ್ರವಾದ ಅನಾಮಿಕ. ಆ ಗ್ರಂಥದಲ್ಲಿ ಸಾವರ್ಕರ್‌ ಅವರ ಧೈರ್ಯ, ಸಾಹಸಗಳನ್ನು ವೈಭವೀಕರಿಸಿ ಅವರನ್ನು ಒಬ್ಬ ಮಹಾ ನಾಯಕನಂತೆ ಚಿತ್ರಿಸಲಾಗಿದೆ. ಸಾವರ್ಕರ್ ಮರಣಹೊಂದಿ ಇಪ್ಪತ್ತು ವರ್ಷಗಳ ನಂತರ, ಈ ಪುಸ್ತಕದ ಎರಡನೇ ಆವೃತ್ತಿ ಪ್ರಕಟವಾಗಿದ್ದು 1987ರಲ್ಲಿ. ವಿಚಿತ್ರವೆನ್ನುವಂತೆ ಈ ಪುಸ್ತಕದ ಎರಡನೇ ಆವೃತ್ತಿ ಪ್ರಕಟಿಸಿದ್ದು ಸಾವರ್ಕರ್ ಬರಹಗಳ ಅಧಿಕೃತ ಪ್ರಕಾಶನ ಸಂಸ್ಥೆ ವೀರ ಸಾವರ್ಕರ್ ಪ್ರಕಾಶನ. ಇದರ ಪ್ರಕಾಶಕರ ಹೆಸರು ರವೀಂದ್ರ ರಾಮದಾಸ್. ಆಶ್ಚರ್ಯವೆನ್ನುವಂತೆ ಪ್ರಕಾಶಕರು ತಮ್ಮ ಮುನ್ನುಡಿಯಲ್ಲಿ ʼಚಿತ್ರಗುಪ್ತ ಬೇರೆ ಯಾರೂ ಅಲ್ಲ ಸಾವರ್ಕರ್ʼ ಎನ್ನುವ ಗುಟ್ಟನ್ನು ಆಗ ರಟ್ಟು ಮಾಡಿದ್ದರು. ಪುಸ್ತಕವನ್ನು ಒಬ್ಬ ಅನಾಮಿಕನ ಹೆಸರಿನಲ್ಲಿ ಸ್ವತಃ ಸಾವರ್ಕರ್ ಅವರೆ ಬರೆದು ತಮ್ಮನ್ನು ತಾವು ಸಾಹಸಿ, ಮಹಾನ್ ನಾಯಕ ಮುಂತಾಗಿ ವೈಭವೀಕರಿಸಿಕೊಂಡಿದ್ದರು. ಜೈಲು ಶಿಕ್ಷೆಗೆ ಹೆದರಿ ಬ್ರಿಟಿಷ್ ವಸಹಾತುಶಾಹಿ ಸರಕಾರಕ್ಕೆ ಶರಣಾಗತನಾದ ಮಾಜಿ ಕ್ರಾಂತಿಕಾರಿಯೊಬ್ಬ ಕ್ಷಮೆಯಾಚನೆ ಮಾಡಿ ಜೈಲಿನಿಂದ ಬಿಡುಗಡೆಯಾಗಿ ಬಂದು ಮತ್ತೊಂದು ಅನಾಮಿಕ ಮುಖವಾಡದಲ್ಲಿ ಸ್ವಯಂ ವೈಭವೀಕರಣದಲ್ಲಿ ತೊಡಗಿದ ಅಪರೂಪದ ಕತೆಯಿದು.

ಕಠಿಣವಾದ ಜೈಲು ಶಿಕ್ಷೆಗೆ ಹೆದರಿ ಕ್ಷಮೆಯಾಚಿಸಿ ಹೊರಗೆ ಬಂದ ಅವರ ನಿಲುವನ್ನು ನಾವ್ಯಾರೂ ಟೀಕಿಸುವುದು ಸಮಂಜಸವಲ್ಲ ಎನ್ನುತ್ತಾರೆ ಪವನ್ ಕುಲಕರ್ಣಿ. ಆದರೆ ಸಾವರ್ಕರ್ ಪ್ರತಿಪಾದಿಸಿದ ಹಿಂದುತ್ವ ಸಿದ್ಧಾಂತವು ದೇಶದ ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಿˌ ಜನರನ್ನು ಧರ್ಮಾಧಾರದಲ್ಲಿ ವಿಭಜಿಸಿದ್ದು ಮಾತ್ರ ಭಾರತೀಯರು ಎಂದಿಗೂ ಮರೆಯುವಂತಿಲ್ಲ ಎನ್ನುತ್ತಾರೆ ಪವನ್ ಕುಲಕರ್ಣಿ. ಸಾವರ್ಕರ್ ಅವರು ಜೈಲಿನಿಂದ ಹೊರಬಂದ ನಂತರ ಬ್ರಿಟಿಷ್ ಸರಕಾರವನ್ನು ಬೆಂಬಲಿಸಿದ ಕೆಲಸ ಕೂಡ ನಾವೆಲ್ಲ ಮರೆಯುವಂತಿಲ್ಲ. ಆದ್ದರಿಂದ ಸಾವರ್ಕರ್ ಅವರು ನಿಜವಾದ ದೇಶ ಭಕ್ತರ ಕ್ಷಮೆಗೆ ಹಾಗೂ ವಿಶೇಷವಾಗಿ ‘ದೇಶಪ್ರೇಮಿ’ ಮತ್ತು ‘ರಾಷ್ಟ್ರೀಯವಾದಿ’ ಎಂಬ ಸುಳ್ಳು ವಿಶೇಷಣಗಳಿಗೂ ಅರ್ಹರಲ್ಲ ಎನ್ನುತ್ತಾರೆ ಲೇಖಕ ಪವನ್ ಕುಲಕರ್ಣಿ. ಸಾವರ್ಕರ್ ಅವರ ತಮ್ಮ ಅಪಾಯಕಾರಿ ಮತ್ತು ವಿಭಜನಕಾರಿ ಹಿಂದುತ್ವ ಸಿದ್ಧಾಂತವು ಸ್ವಾತಂತ್ರ್ಯ ಚಳವಳಿಯನ್ನು ದಿಕ್ಕುತಪ್ಪಿಸಲು ಯತ್ನಿಸಿದ ಮತ್ತು ಅವರ ಪರಿಕಲ್ಪನೆಯಾಗಿರುವ ಹಿಂದುತ್ವ ಸಿದ್ಧಾಂತವು ದೇಶದಲ್ಲಿ ಶಾಶ್ವತವಾಗಿ ಜನಾಂಗಭೇದವನ್ನು ಜೀವಂತವಾಗಿರಿಸಿ ಈ ನೆಲದ ಬಹುತ್ವ ಮತ್ತು ಸೌಹಾರ್ದತೆಗೆ ಧಕ್ಕೆ ತಂದಿತು. ಬಾಂಬೆ ಮತ್ತು ಪುಣೆಯಲ್ಲಿ 1894-95ರಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭೆಗಳ ನಂತರ 12 ವರ್ಷದ ಬಾಲಕ, ಸಾವರ್ಕರ್ ತನ್ನ ಸಹಪಾಠಿಗಳ ಗುಂಪಿನ ನಾಯಕನಾಗಿದ್ದ.

savarkar

ಆಗ ಆತ ಮಸೀದಿಯೊಂದರ ಮೇಲೆ ದಾಳಿ ಮಾಡಿದ್ದ. ಹಳ್ಳಿಯ ಮುಸ್ಲಿಂ ಹುಡುಗರನ್ನು ಈ ಬಾಲಕ ಗುಂಪು ಕಟ್ಟಿಕೊಂಡು ಕಾಡುತ್ತಿದ್ದ. ಸಾವರ್ಕರ್ ಮತ್ತು ಆತನ ಸಂಗಡಿಗರು ಮಸೀದಿಗಳ ಮೇಲೆ ಕಲ್ಲು ಎಸೆಯುವುದು ಅಂದು ಸಾಮಾನ್ಯವಾಗಿತ್ತು. ಬಾಲ್ಯದ ಮತ್ತು ಯೌವ್ವನದ ಈ ಘಟನೆಯನ್ನು ನೆನಪಿಸಿಕೊಂಡ ಅವರು: “ನಾವು ಮಸೀದಿಯನ್ನು ನಮ್ಮ ಮನಸ್ಸಿಗೆ ಬಂದಂತೆ ಧ್ವಂಸಗೊಳಿಸಿದ್ದೇವೆ ಮತ್ತು ಅದರ ಮೇಲೆ ನಮ್ಮ ಶೌರ್ಯದ ಧ್ವಜವನ್ನು ಹಾರಿಸಿದ್ದೇವೆ” ಎಂದು ಬರೆದುಕೊಂಡಿದ್ದಾರಂತೆ. ಮತೀಯ ಗಲಭೆಯಲ್ಲಿ ಹಿಂದೂಗಳು ಮುಸ್ಲಿಮರ ಮೇಲೆ ಹಲ್ಲೆ ಮಾಡುವ ಸುದ್ದಿ ಕೇಳಿ, ಪುಟ್ಟ ಸಾವರ್ಕರ್ ಮತ್ತು ಆತನ ಸ್ನೇಹಿತರು ಆನಂದದಿಂದ ಕುಣಿಯುತ್ತಿದ್ದರಂತೆ. ಅಂದರೆ, ಬಾಲ್ಯದಲ್ಲೇ ಸಾವರ್ಕರ್ ಮನಸ್ಥಿತಿಯು ಕೋಮುವಾದಿ ಸಂಸ್ಕೃತಿಯಿಂದ ಪ್ರವಾವಿತವಾಗಿತ್ತು ಎನ್ನುತ್ತಾರೆ ಪವನ್ ಕುಲಕರ್ಣಿ. ಸಾವರ್ಕರ್‌ ಮನಸ್ಥಿತಿಯು ಒಂದು ರೀತಿಯಲ್ಲಿ ವಿಲಕ್ಷಣ, ವಿಭಜಕ‌, ಪ್ರಕ್ಷುಬ್ಧ ಮತ್ತು ವಿಕೃತವಾಗಿತ್ತು ಎಂದು ಲೇಖಕ ಪವನ್ ಕುಲಕರ್ಣಿಯವರು ಆಧಾರಗಳ ಸಮೇತ ವಿವರಿಸಿದ್ದಾರೆ. ಸಾವರ್ಕರ್ ಅವರು ಪ್ರತಿಪಾದಿಸುತ್ತಿದ್ದ ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳು ಅವರಲ್ಲಿನ ವಿಘಟನಕಾರಿ ಮನಸ್ಥಿತಿಯ ಸಂಕೇತಗಳಾಗಿದ್ದವು.

ಅದು ಅವರಲ್ಲಿ ಮುಸ್ಲಿಮ್ ದ್ವೇಷವನ್ನು ಆಳವಾಗಿ ಬೇರೂರಿಸಿದ್ದು ಮಾತ್ರವಲ್ಲದೆ ದೇಶದ ಇತಿಹಾಸದ ಬಗ್ಗೆ ಅವರ ತಿಳುವಳಿಕೆಯನ್ನು ಮಂಕಾಗಿಸಿತ್ತು. ಮುಂದೆ ಈ ಮನಸ್ಥಿತಿಯು 1857ರ ಸಿಪಾಯಿ ದಂಗೆಯನ್ನು “ಹಿಂದೂಗಳು ಮತ್ತು ಮುಸ್ಲಿಮರು ಜಂಟಿಯಾಗಿ ಕ್ರಿಶ್ಚಿಯನ್ ಧರ್ಮದ ವಿರುದ್ಧ ಪ್ರತೀಕಾರ ಕೈಗೊಂಡರು ಎನ್ನುವ ಅವರ ವಿಲಕ್ಷಣ ಗ್ರಹಿಕೆಗೆ ಕಾರಣವಾಯಿತು. ಒಮ್ಮೊಮ್ಮೆ ಅವರು ಬ್ರಿಟನ್ ಭಾರತವನ್ನು ಕ್ರೈಸ್ತೀಕರಣಗೊಳಿಸುತ್ತಿದೆ, ಅದಕ್ಕೆ ನಾವು ಹಿಂಸಾತ್ಮಕವಾಗಿ ಪ್ರತಿಕ್ರಿಸಬೇಕೇ ಎಂದು ವಾದಿಸುತ್ತಿದ್ದರು. ಸಾವರ್ಕರ್ ಅವರು 1909ರ ತಮ್ಮ ಕ್ರಾಂತಿಕಾರಿ ಧೋರಣೆಯ ದಿನಗಳಲ್ಲಿ “1857 ರ ಸ್ವಾತಂತ್ರ್ಯ ಸಂಗ್ರಾಮ” ಎಂಬ ಪುಸ್ತಕವನ್ನು ಬರೆದರು. ಪುಸ್ತಕ ಪ್ರಕಟಿಸಿದ ಕೆಲವೇ ವರ್ಷಗಳಲ್ಲಿ ಬ್ರಿಟಿಷ್ ಸರ್ಕಾರಕ್ಕೆ ತನ್ನ ನಿಷ್ಠೆಯನ್ನು ಘೋಷಿಸಿದರು. ಆ ಪುಸ್ತಕದಲ್ಲಿ ಜಸ್ಟಿನ್ ಮೆಕಾರ್ಥಿಯನ್ನು ಉಲ್ಲೇಖಿಸಿ, “ಮುಸ್ಲಿಮರು ಮತ್ತು ಹಿಂದೂಗಳು ತಮ್ಮ ಹಳೆಯ ಧಾರ್ಮಿಕ ದ್ವೇಷವನ್ನು ಮರೆತು ಕ್ರಿಶ್ಚಿಯನ್ನರ ವಿರುದ್ಧ ಒಂದಾಗಬೇಕು” ಎಂದು ಅವರು ಪ್ರತಿಪಾದಿಸಿದ್ದಾಗಿ ಪವನ್ ಕುಲಕರ್ಣಿ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಸಾಂಪ್ರದಾಯಿಕ ಆಚರಣೆಗಳ ಹೆಸರಿನಲ್ಲಿ ಅನೇಕ ಮೌಢ್ಯ ಹಾಗೂ ಅಮಾನುಷ ಪದ್ದತಿಗಳು ಅಸ್ತಿತ್ವದಲ್ಲಿದ್ದವು. ಬ್ರಿಟಿಷ್ ಸರಕಾರ ಅವೆಲ್ಲವನ್ನು ಒಂದೊಂದಾಗಿ ಕಾನೂನಿನ ಮೂಲಕ ನಿಷೇಧಿಸಿತ್ತು. ಆಗ ಬ್ರಾಹ್ಮಣವಾದಿಗಳು ಕುದ್ದುಹೋಗಿದ್ದರು.

ಸಾವರ್ಕರ್ ಅವರು ಬ್ರಿಟಿಷರ ಜನಪರ ಮತ್ತು ಪ್ರಗತಿಪರ ಕಾನೂನುಗಳನ್ನು ವಿರೋಧಿಸಲು ಮುಸ್ಲಿಮರೊಂದಿಗೆ ಸೇರಿ ಹೋರಾಡುತ್ತೇನೆ ಎನ್ನುತ್ತಿದ್ದರು. ಸತಿ ಪದ್ಧತಿ ನಿಷೇಧಿಸಿರುವ ಬ್ರಿಟಿಷ್ ಸರಕಾರವು ಮುಂದೆ ಮೂರ್ತಿಪೂಜೆಯನ್ನು ಕೂಡ ನಿಷೇಧಿಸಿ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಮತ್ತಷ್ಟು ಹಸ್ತಕ್ಷೇಪ ಮಾಡಬಹುದು. ನಾವು ಅದನ್ನು ತಡೆಯಬೇಕು ಎನ್ನುತ್ತಿದ್ದರಂತೆ ಸಾವರ್ಕರ್. “ಭಾರತದಲ್ಲಿ ಹಿಂದೂ ಮತ್ತು ಇಸ್ಲಾಮ್ ಧರ್ಮಗಳು ನಾಶಗೊಳಿಸಲು ಬ್ರಿಟಿಷರು ಯತ್ನಿಸುತ್ತಿದ್ದಾರೆ. ಬ್ರಿಟಿಷರು ಈಗಾಗಲೇ ಹಿಂದೂ ಮತ್ತು ಮುಸ್ಲಿಮ್ ಧರ್ಮಗಳ ಅಡಿಪಾಯವನ್ನು ನಾಶಮಾಡಲು ಒಂದರ ನಂತರ ಒಂದರಂತೆ ಕಾನೂನನ್ನು ಜಾರಿಗೆ ತರುತ್ತಿದ್ದಾರೆ. ದೊಡ್ಡ ದೊಡ್ಡ ಕ್ರೈಸ್ತ ಮಿಷನರಿ ಶಾಲೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಲಾರ್ಡ್ ಕ್ಯಾನಿಂಗ್ ಸ್ವತಃ ಪ್ರತಿಯೊಂದು ಮಿಷನರಿ ಶಾಲೆಗಳಿಗೆ ಸಾವಿರಾರು ರೂಪಾಯಿ ಅನುದಾನ ನೀಡುತ್ತಾದ್ದಾರೆ ಮತ್ತು ಇದರಿಂದ ಲಾರ್ಡ್ ಕ್ಯಾನಿಂಗ್ ನ ಹೃದಯದಲ್ಲಿ ಭಾರತೀಯರನ್ನು ಕ್ರೈಸ್ತರನ್ನಾಗಿಸುವ ಆಸೆ ಬಲವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ” ಎಂದು ಸಾವರ್ಕರ್ ವಾದಿಸುತ್ತಿದ್ದ ಕುರಿತು ಲೇಖಕ ಪವನ್ ಕುಲಕರ್ಣಿಯವರು ವಿವರವಾಗಿ ಬರೆದಿದ್ದಾರೆ.

“ಬ್ರಿಟಿಷರು ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ವಿಸ್ತರಿಸುವ ಪ್ರಾಥಮಿಕ ಗುರಿ ಹೊಂದಿದ್ದು, ಕ್ರೈಸ್ತರಾದವರನ್ನು ಗೌರವದಿಂದ ನೋಡಲಾಗುತ್ತಿದೆ ಹಾಗೂ ನೌಕರಿಗಳಲ್ಲಿ ಬಡ್ತಿ ನೀಡಲಾಗುತ್ತದೆ” ಎಂದು ಸಾವರ್ಕರ್ ವಾದಿಸುತ್ತಿದ್ದರಂತೆ. ಸಾವರ್ಕರ್ ಅವರ ಮನಸ್ಥಿತಿಯು ಬಾಲ್ಯದಲ್ಲಿಯೇ ಕೋಮುವಾದಕ್ಕೆ ಬಲಿಯಾಗಿತ್ತು, ಮುಂದೆ ಅದು ಹೆಮ್ಮರವಾಗಿ ಹಿಂದುತ್ವ ಸಿದ್ಧಾಂತದ ವಿಷದ ಫಲವನ್ನು ಅವರ 20ನೇ ವಯಸ್ಸಿನ ಅಂತ್ಯದಲ್ಲಿ ನೀಡಲಾರಂಭಿಸಿತು ಎನ್ನುತ್ತಾರೆ ಪವನ್ ಕುಲಕರ್ಣಿ. ಸಾವರ್ಕರ್ ಅವರ ಆರಂಭಿಕ ಕ್ರೈಸ್ತರ ಬಗೆಗಿನ ದ್ವೇಷವು ಅವರಿಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಗೆ ಹೆದರಿ ಮಣ್ಣು ಪಾಲಾಗಿಯಿತು. ಆನಂತರ ಅವರ ದ್ವೇಷವು ಮುಸ್ಲಿಮರ ಕಡೆಗೆ ಹೊರಳಿತು. ಜೈಲಿನಿಂದ ಹೊರಬರುವ ಹಿಂದಿನ ವರ್ಷ ಸಾವರ್ಕರ್ ಅವರು ಮೊಟ್ಟ ಮೊದಲು ಹಿಂದುತ್ವದ ಪರಿಕಲ್ಪನೆಯನ್ನು 1923ರಲ್ಲಿ “ಎಸೆನ್ಷಿಯಲ್ಸ್ ಆಫ್ ಹಿಂದುತ್ವ” ಎಂಬ ಪುಸ್ತಕ ಬರೆದು ಪ್ರಕಟಿಸಿದರು. ಮುಂದೆ 1928ರಲ್ಲಿ ಅದನ್ನು “ಹಿಂದುತ್ವ: ಯಾರು ಹಿಂದೂ?” ಎಂಬ ಹೊಸ ಹೆಸರಿನಲ್ಲಿ ಮರು ಮುದ್ರಿಸಿದರು. ಹಿಂದುತ್ವ ಸಿದ್ಧಾಂತವು ಆಳವಾದ ವಿಘಟನಕಾರಿ ಸಿದ್ಧಾಂತವಾಗಿದ್ದು ಅದು ದೇಶದ ಜನರ ಗಮನವನ್ನು ಬ್ರಿಟಿಷರಿಂದ ಹಾಗೂ ಸ್ವತಂತ್ರ ಚಳವಳಿಯಿಂದ ಬೇರೆ ಕಡೆಗೆ ಸೆಳೆಯುವ ಮತ್ತು ಜನರಲ್ಲಿ ಮುಸ್ಲಿಮ ದ್ವೇಷ ಬಿತ್ತುವ ಉದ್ದೇಶ ಹೊಂದಿತ್ತು ಎನ್ನುತ್ತಾರೆ ಲೇಖಕ.

ಸಾವರ್ಕರ್ ಅವರು ಪ್ರತಿಪಾದಿಸುತ್ತಿದ್ದ ಮುಸ್ಲಿಮ್ ದ್ವೇಷವನ್ನು ಬ್ರಿಟಿಷರು ಉತ್ತೇಜಿಸುತ್ತಿದ್ದರು. ಉಪಖಂಡದಲ್ಲಿ ತಮ್ಮ ಆಳ್ವಿಕೆಯ ಅವಧಿಯನ್ನು ಮುಂದುವರೆಸಲು ಮತ್ತು ಸ್ವಾತಂತ್ರ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷರು ಸಾವರ್ಕರ್ ಅವರನ್ನು ದಾಳವಾಗಿ ಬಳಸಿಕೊಂಡರು ಎನ್ನುತ್ತಾರೆ ಕುಲಕರ್ಣಿ. 1920ರ ದಶಕದಲ್ಲಿ, ಸಾವರ್ಕರ್ ಅವರ ವಿಘಟನಕಾರಿ ಸಿದ್ಧಾಂತದಿಂದ ಸ್ವಾತಂತ್ರ್ಯ ಚಳವಳಿಗೆ ಆಗಬಹುದಾದ ನಷ್ಟವನ್ನು ಬ್ರಿಟಿಷರು ಚೆನ್ನಾಗಿ ಗ್ರಹಿಸಿದ್ದರು. ಜೈಲಿನಿಂದ ಬಿಡುಗಡೆಯಾಗುವಾಗ ಹೇರಿದ್ದ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದೆಂಬ ನಿಷೇಧವಿದ್ದರೂ ಬ್ರಿಟಿಷರು ಅವರಿಗೆ ರತ್ನಗಿರಿ ಮಹಾಸಭಾ ಆಯೋಜಿಸಲು ಅನುಮತಿ ನೀಡಿದ್ದರು. ಇದು ಮುಸ್ಲಿಮರು ಪ್ರಾರ್ಥನೆ ಮಾಡುವಾಗ ಮಸೀದಿಗಳ ಮುಂದೆ ಸಂಗೀತ ನುಡಿಸುವ ಕಾರ್ಯಕ್ರಮವಾಗಿತ್ತು. ಸಾವರ್ಕರ್ ಅವರ ಹಿಂದುತ್ವ ಸಿದ್ಧಾಂತದಿಂದ ಪ್ರೇರಣೆಗೊಂಡು ಮತ್ತು ಕಾಂಗ್ರೆಸ್ಸಿನಿಂದ ಭ್ರಮನಿರಸನಗೊಂಡಿದ್ದ ಕೇಶವ್ ಬಳಿರಾಮ್ ಹೆಡಗೇವಾರ್ ಅವರನ್ನು ಕಾಣಲು ಸಾವರ್ಕರ್ ಅವರಿಗೆ ಬ್ರಿಟಿಷ್ ಸರಕಾರ ಅನುಮತಿಸಿತ್ತು. ಉಭಯತರು ಹಿಂದೂ ರಾಷ್ಟ್ರ ಕಟ್ಟುವ ತಮ್ಮ ಉದ್ದೇಶಿತ ಕಾರ್ಯತಂತ್ರವನ್ನು ಚರ್ಚಿಸಿದರು.

ಹೆಡಗೇವಾರ್‌
ಕೇಶವ್ ಬಳಿರಾಮ್ ಹೆಡಗೇವಾರ್

ಈ ಸಭೆ ಮುಗಿದ ಕೆಲವು ತಿಂಗಳುಗಳ ನಂತರ, ಸೆಪ್ಟೆಂಬರ್ 1925ರಲ್ಲಿ, ಹೆಡಗೇವಾರ್ ಆರ್‌ಎಸ್‌ಎಸ್ ಎಂಬ ಮತೀಯವಾದಿ ಸಂಸ್ಥೆಯನ್ನು ಹುಟ್ಚುಹಾಕಿದರು. ಹೆಡಗೇವಾರ್ ಹುಟ್ಟು ಹಾಕಿದ ಈ ಸಂಘ ಕೂಡ ಸಾವರ್ಕರ್ ಅವರಂತೆ ಬ್ರಿಟಿಷರಿಗೆ ವಿಧೇಯವಾಗಿ ಕೆಲಸ ಮಾಡುತ್ತಿತ್ತು ಎಂದು ಕುಲಕರ್ಣಿಯವರು ವರ್ಣಿಸಿದ್ದಾರೆ. ಸಾವರ್ಕರ್ ಮೇಲೆ ತಾವೇ ಹೇರಿದ್ದ ನಿಷೇಧವನ್ನು ಬ್ರಿಟಿಷ್ ಆಡಳಿತಗಾರರು ಉದ್ದೇಶಪೂರ್ವಕವಾಗಿ ಕಡೆಗಣಿಸಿದರು. ಏಕೆಂದರೆ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯು ಕೋಮು ವಿಭಜನೆಯ ಮೇಲೆ ನಿಂತಿತ್ತು ಮತ್ತು ಸಾವರ್ಕರ್ ಅವರಿಗೆ ಹಿಂದೂ-ಮುಸ್ಲಿಂ ಹೆಸರಿನಲ್ಲಿ ಜನರಲ್ಲಿ ದೊಡ್ಡ ಕಂದಕವನ್ನು ನಿರ್ಮಿಸಿ ಪರಿಸ್ಥಿತಿ ಉಲ್ಬಣಗೊಳಿಸುವಲ್ಲಿ ಬ್ರಿಟಿಷ್ ಸರಕಾರ ಯಾವುದೇ ಬಗೆಯಲ್ಲಿ ತಡೆಯೊಡ್ಡಲಿಲ್ಲ. ಮುಂದೆ ಸಾವರ್ಕರ್ ಅವರು ಬ್ರಿಟಿಷ್ ವಸಾಹತುಶಾಹಿ ಸರಕಾರದೊಂದಿಗೆ ಸ್ನೇಹ ಮಾಡಿಕೊಂಡರು. 1937ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಸಾವರ್ಕರ್ ಆಯ್ಕೆಯಾದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಂತೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಆಗ ಎರಡು ಕೋಮುವಾದಿ ಪಕ್ಷಗಳಾದ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಅನ್ನು ಕಾಂಗ್ರೆಸ್ ಪಕ್ಷವು ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿಯೂ ಸೋಲಿಸಿ ಪ್ರಾಂತೀಯ ಸರಕಾರ ರಚಿಸಿತ್ತು.

ಕೇವಲ ಎರಡು ವರ್ಷಗಳ ನಂತರ, ಎರಡನೇ ಜಾಗತಿಕ ಯುದ್ಧ ಶುರುವಾದಾಗ, ವೈಸ್‌ರಾಯ್ ಲಾರ್ಡ್ ಲಿನ್‌ಲಿತ್‌ಗೋ ಯಾರೊಂದಿಗೂ ಸಮಾಲೋಚನೆ ಮಾಡದೆ ಭಾರತವು ಜರ್ಮನಿಯೊಂದಿಗೆ ಯುದ್ಧ ಮಾಡುವುದಾಗಿ ಘೋಷಿಸಿದಾಗ ಕಾಂಗ್ರೆಸ್ ಅದನ್ನು ಪ್ರತಿಭಟಿಸಿ ಪ್ರಾಂತೀಯ ಸರಕಾರಗಳನ್ನು ವಿಸರ್ಜಿಸಿತ್ತು. ಸೆಪ್ಟೆಂಬರ್ 1939ರಲ್ಲಿ, ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯು ತನ್ನ ಬಿಕ್ಕಟ್ಟಿನ ಸಮಯದಲ್ಲಿ ಬ್ರಿಟನ್‌ನ ಯುದ್ಧ ಪ್ರಯತ್ನಗಳಿಗೆ ಬೆಂಬಲವನ್ನು ನೀಡುವುದಾಗಿ ಘೋಷಿಸಿತು. ಬ್ರಿಟಿಷ್ ಸರಕಾರವು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಬೇಕು ಮತ್ತು ದೇಶ ಸ್ವಂತ ಸಂವಿಧಾನ ಹೊಂದಲು ಸಂವಿಧಾನ ರಚನಾ ಸಮಿತಿ ರಚಿಸಬೇಕೆಂಬ ಕಾಂಗ್ರೆಸ್ ನ ಬೇಡಿಕೆ ಹಾಗೂ ನಿಬಂಧನೆಗೆ ಲಿನ್ನಲಿತ್‌ಗೋ ಒಪ್ಪಿಕೊಂಡಿದ್ದರು. ಅಂದು ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್ ಇದರಿಂದ ಗಲಿಬಿಲಿಗೊಂಡು ಈ ಅವಕಾಶವನ್ನು ತ್ವರಿತವಾಗಿ ಬಳಸಿಕೊಂಡು ತಕ್ಷಣ ಲಿನ್ನಲಿತ್‌ಗೋ ಅವರನ್ನು ಭೇಟಿಯಾದರು. ರಾಜ್ಯ ಕಾರ್ಯದರ್ಶಿಗೆ ಕಳುಹಿಸಿದ ಪತ್ರದಲ್ಲಿ ಭೇಟಿಯ ಸಂದರ್ಭದಲ್ಲಿ ಸಾವರ್ಕರ್ ತನ್ನೊಂದಿಗೆ ಆಡಿದ ಮಾತುಗಳನ್ನು ವರದಿಯಲ್ಲಿ ಲಿನ್ನಲಿತ್‌ಗೋ ಹೀಗೆ ಬರೆದಿದ್ದಾರೆಂದು ಕುಲಕರ್ಣಿ ವಿವರಿಸಿದ್ದಾರೆ: “ನಿಮ್ಮ ಸರ್ಕಾರವು ಈಗ ಹಿಂದೂಗಳನ್ನು ಬೆಂಬಲಿಸಬೇಕು. ಏಕೆಂದರೆ, ಹಿಂದೂಗಳ ಮತ್ತು ನಿಮ್ಮ ಆಸಕ್ತಿಗಳು ಒಂದೇ ಆಗಿರುವುದರಿಂದ ಈಗ ನಾವು ಒಟ್ಟಾಗಿ ಕೆಲಸ ಮಾಡಬೇಕು. ಹಿಂದೂ ಧರ್ಮ ಮತ್ತು ಗ್ರೇಟ್ ಬ್ರಿಟನ್ ಸ್ನೇಹಿತರಾಗಿ ಹಳೆಯ ವೈರತ್ವವನ್ನು ಮರೆಯಬೇಕು. ಹಿಂದೂ ಮಹಾಸಭಾ ಎರಡನೇ ಜಾಗತಿಕ ಯುದ್ಧವನ್ನು ಬೆಂಬಲಿಸುತ್ತದೆ ಎನ್ನುವ ಭರವಸೆ ನೀಡುತ್ತೇನೆ.” ಸಾವರ್ಕರ್ ಅವರು ಹೀಗೆ ಹೇಳಿದ್ದಾಗಿ ಲಿನ್ನಲಿತ್‌ಗೋ ತಮ್ಮ ವರದಿಯಲ್ಲಿ ನಮೂದಿಸಿದ್ದರು.

ಇದಾದ ಎರಡು ತಿಂಗಳುಗಳ ನಂತರ, ಹಿಂದೂ ಮಹಾಸಭಾದ ಕೊಲ್ಕತ್ತಾ ಅಧಿವೇಶನವನ್ನು ಉದ್ದೇಶಿಸಿ, ಸಾವರ್ಕರ್ ಎಲ್ಲಾ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಶಾಲೆಗಳು ಯುವಕರಿಗೆ ಬ್ರಿಟಿಷ್ ಮಿಲಿಟರಿ ಪಡೆಗಳಲ್ಲಿ ಸೇರಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಒತ್ತಾಯಿಸಿದ್ದರು. ಗಾಂಧಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹವನ್ನು ಆರಂಭಿಸಿದಾಗ, ಸಾವರ್ಕರ್ ಅವರು ಮಥುರಾದಲ್ಲಿ 1940ರ ಡಿಸೆಂಬರ್‌ನಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನದಲ್ಲಿ, ಹಿಂದೂಗಳು ಬ್ರಿಟಿಷ್ ಸೈನ್ಯವನ್ನು ಸೇರಬೇಕೆಂದು ಕರೆಯಿತ್ತಿದ್ದರಂತೆ. 1941ರಲ್ಲಿ, ಎರಡನೇ ಜಾಗತಿಕ ಯುದ್ಧದ ಸಂದರ್ಭ ಬಳಸಿಕೊಂಡು, ನೇತಾಜಿ ಬೋಸ್ ಅವರು ಬ್ರಿಟಿಷರ ವಿರುದ್ಧ ಹೋರಾಡಲು ಜಪಾನ್ ನೆರವಿನಿಂದ ತಮ್ಮ ಸೈನ್ಯವನ್ನು ಬೆಳೆಸಲಾರಂಭಿಸಿದರು.

Linlitgo
ಲಿನ್ನಲಿತ್‌ಗೋ

1941ರಲ್ಲಿ ಭಾಗಲ್ಪುರ್ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಸಾವರ್ಕರ್ ತನ್ನ ಅನುಯಾಯಿಗಳನ್ನು ಉದ್ದೇಶಿಸಿ ಹೀಗೆ ಹೇಳಿದ್ದರಂತೆ: “ಬ್ರಿಟನ್ ವಿರೋಧಿ ಜಪಾನಿ ಶತ್ರುಗಳ ದಾಳಿಗೆ ನಾವು ನೇರವಾಗಿ ತುತ್ತಾಗುತ್ತಿದ್ದೇವೆ. ಆದ್ದರಿಂದ ಹಿಂದೂ ಮಹಾಸಭಾದ ಅನುಯಾಯಿಗಳು ವಿಶೇಷವಾಗಿ ಬಂಗಾಳ ಮತ್ತು ಅಸ್ಸಾಂ ಪ್ರಾಂತ್ಯಗಳಲ್ಲಿ ಬ್ರಿಟಿಷ್ ಸೇನೆಗೆ ಸೇರಲು ಹೆಚ್ಚು ಹೆಚ್ಚು ಹಿಂದೂಗಳನ್ನು ಪ್ರಚೋದಿಸಬೇಕು”. ಅದಕ್ಕೆ ಪ್ರತಿಯಾಗಿ ಅಂದಿನ ಬ್ರಿಟಿಷ್ ಕಮಾಂಡರ್-ಇನ್-ಚೀಫ್, ಹಿಂದೂ ಮಹಾಸಭಾ ಮತ್ತು ಅದರ ನಾಯಕ ಬ್ಯಾರಿಸ್ಟರ್ ಸಾವರ್ಕರ್ ಹಿಂದೂಗಳು ಬ್ರಿಟಿಷ್ ಸೇನೆಗೆ ಸೇರುವಂತೆ ಉತ್ತೇಜಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದರೆನ್ನುವ ದಾಖಲೆಯು ಹಿಂದೂ ಮಹಾಸಭಾದಲ್ಲಿ ನಮೂದಾಗಿದೆ ಎನ್ನುವ ಶಾಮ್ಯೂಯಲ್ ಇಸ್ಲಾಂ ಅವರ ಲೇಖನವನ್ನು ಕುಲಕರ್ಣಿಯವರು ಇಲ್ಲಿ ಉಲ್ಲೇಖಿಸಿದ್ದಾರೆ. ಆಗಸ್ಟ್ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಶುರುವಾದಾಗ ಅದಕ್ಕೆ ಪ್ರತಿಕ್ರಿಯೆಯಾಗಿ, ಸಾವರ್ಕರ್ ಅವರು ದೇಶಾದ್ಯಂತ ಹಿಂದೂ ಮಹಾಸಭಾದ ಸ್ಥಳೀಯ ಸಂಸ್ಥೆಗಳ ಸದಸ್ಯರುˌ ಶಾಸಕರು ಮತ್ತು ಸೇನೆಯಲ್ಲಿರುವವರು ಎಲ್ಲರೂ ತಮ್ಮ ಸ್ಥಾನಗಳಲ್ಲೇ ಮುಂದುವರೆಯಬೇಕೆಂದು ಆದೇಶಿಸಿದ್ದರಂತೆ.

ಆಗ ಜಪಾನ್ ಭಾರತಕ್ಕೆ ಸುತ್ತಮುತ್ತಲಿನ ಅನೇಕ ಆಗ್ನೇಯ ಏಷ್ಯಾದ ದೇಶಗಳನ್ನು ವಶಪಡಿಸಿಕೊಂಡಿತ್ತು. ನೇತಾಜಿ ಬೋಸ್ ಜರ್ಮನಿಯಿಂದ ಜಪಾನ್‌ಗೆ ಹೋಗಲು ಪ್ರಯತ್ನಿಸುತ್ತಿದ್ದರು. ಅದರ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನೇತಾಜಿಯವರ ಸೇನೆಯು ಬ್ರಿಟಿಷ್ ಪಡೆಗಳ ಮೇಲೆ ದಾಳಿ ಆರಂಭಿಸಿತ್ತು. ಈ ಸಂದರ್ಭದಲ್ಲಿ ಸಾವರ್ಕರ್ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂಗಳಿಗೆ ತಮ್ಮ ಹುದ್ದೆಗಳಲ್ಲಿ ಮುಂದುವರೆಯುವಂತೆ ಸೂಚನೆ ನೀಡಿದ್ದಷ್ಟೇ ಅಲ್ಲದೆ, ಈಶಾನ್ಯ ಭಾರತದಲ್ಲಿ ನೇತಾಜಿಯವರ ಸೈನಿಕರನ್ನು ಹತ್ಯೆ ಮಾಡಲು ಬ್ರಿಟಿಷ್ ಸಶಸ್ತ್ರ ಪಡೆಗಳಿಗೆ ನೇಮಕಾತಿ ಶಿಬಿರಗಳನ್ನು ಆಯೋಜಿಸುತ್ತಿದ್ದರಂತೆ. ಕೇವಲ ಒಂದೇ ವರ್ಷದಲ್ಲಿ ಸಾವರ್ಕರ್ ಅವರು ಮಥುರಾದಲ್ಲಿ “ಮಹಾಸಭಾದ ಪ್ರಯತ್ನದ ಫಲವಾಗಿ ಒಂದು ಲಕ್ಷ ಹಿಂದೂಗಳನ್ನು ಬ್ರಿಟಿಷ್ ಸೇನೆಗೆ ಸೇರಿಸಿಕೊಳ್ಳಲಾಗಿದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರಂತೆ. ಸಾವರ್ಕರ್ ಅವರ ಹಿಂದೂ ಮಹಾಸಭಾದ ಸಹಯೋಗದಿಂದ ಬ್ರಿಟಿಷ್ ಸೇನೆಯು, ನೇತಾಜಿ ಬೋಸ್‌ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು.

ಆನಂತರ ಕೆಂಪು ಕೋಟೆಯಲ್ಲಿ ನೇತಾಜಿಯವರು ಆಯೋಜಿಸಿದ್ದ ಅವರ ಸೇನಾ ಅಧಿಕಾರಿಗಳ ಸಾರ್ವಜನಿಕ ಸಭೆಯು ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸೈನಿಕರಲ್ಲಿ ರಾಜಕೀಯ ಆತ್ಮಸಾಕ್ಷಿಯನ್ನು ಹುಟ್ಟುಹಾಕಿತು. ಇದು 1946ರಲ್ಲಿ ರಾಯಲ್ ಇಂಡಿಯನ್ ನೌಕಾ ದಂಗೆಯನ್ನು ಪ್ರಚೋದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಆನಂತರ ಬ್ರಿಟಿಷರು ಭಾರತವನ್ನು ತೊರೆಯುವ ನಿರ್ಧಾರ ತೆಗೆದುಕೊಂಡರು ಎಂದು ಕುಲಕರ್ಣಿ ವಿವರಿಸಿದ್ದಾರೆ. ಆನಂತರ ಮುಸ್ಲಿಮ್ ಲೀಗ್ ಪಕ್ಷವು ಪಾಕಿಸ್ತಾನ ಸ್ಥಾಪನೆಯ ನಿರ್ಣಯವನ್ನು ಅಂಗೀಕರಿಸಿದಾಗಲೂ ಕೂಡ ಸಾವರ್ಕರ್ ಅವರ ಹಿಂದೂ ಮಹಾಸಭಾ, ಮುಸ್ಲಿಂ ಲೀಗ್ ಜೊತೆಗಿನ ತನ್ನ ರಾಜಕೀಯ ಸ್ನೇಹ ಮುಂದುವರೆಸಿತ್ತು. ಸಾವರ್ಕರ್ ಮತ್ತು ಹಿಂದೂ ಮಹಾಸಭಾಗಳು ಬ್ರಿಟಿಷರೊಂದಿಗೆ ಹೊಂದಿದ್ದ ಸಕ್ರಿಯ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು. ಏಕೆಂದರೆ ಹಿಂದುತ್ವ ಪ್ರತಿಪಾದನೆ ಮಾಡುವ ಗುಂಪುಗಳ ಮೊದಲ ಶತ್ರುಗಳು ಮುಸ್ಲಿಮರಾಗಿದ್ದರೆ ವಿನಃ ಹೊರತು ಬ್ರಿಟಿಷರಾಗಿರಲಿಲ್ಲ. ಆದರೆ ಮುಸ್ಲಿಮ್ ಲೀಗ್ ಕೈಗೊಂಡ ದೇಶ ವಿಭಜನೆಯ ಸಂದಿಗ್ಧ ನಿರ್ಣಯದ ನಂತರವೂ ಹಿಂದೂ ಮಹಾಸಭಾ ಮುಸ್ಲಿಮ್ ಲೀಗ್‌ನೊಂದಿಗೆ ಹೊಂದಿದ್ದ ಅನ್ಯೋನ್ಯ ಸಂಬಂಧವು ಅನೇಕರ ಹುಬ್ಬೇರಿಸಿತ್ತು ಎನ್ನುತ್ತಾರೆ ಕುಲಕರ್ಣಿ.

ಭಾರತ ಬಿಟ್ಟು ತೊಲಗಿ
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ

ಇಡೀ ದೇಶ ಗಾಂಧಿ ಕರೆಕೊಟ್ಟ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸುತ್ತಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ಬ್ರಿಟಿಷ್ ಸರಕಾರ ಬಂಧಿಸುತ್ತಿತ್ತು. ಆಗ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾ, ಮುಸ್ಲಿಂ ಲೀಗ್‌ನೊಂದಿಗೆ ಸೇರಿ ಸಿಂಧ್ ಮತ್ತು ಬಂಗಾಳದಲ್ಲಿ ನಿಶ್ಚಿಂತೆಯಿಂದ ಪ್ರಾಂತೀಯ ಸರ್ಕಾರಗಳನ್ನು ನಡೆಸುತ್ತಿತ್ತು. ತಮ್ಮ ಈ ನಿರ್ಧಾರವವನ್ನು ʼಪ್ರಾಯೋಗಿಕ ರಾಜಕೀಯ ಮತ್ತು ಅದನ್ನು ʼಸಮಂಜಸವಾದ ರಾಜಿ ಸೂತ್ರಗಳ ಮೂಲಕ ಸಾಧಿಸುವ ಮುನ್ನಡೆಯ ಕ್ರಮʼ ಎಂದು ಸಾವರ್ಕರ್ ಸಮರ್ಥಿಸಿದ್ದರಂತೆ. ಸಾವರ್ಕರ್ ಅವರ ಈ ಹೇಳಿಕೆಯು ಅವರಲ್ಲಿದ್ದ ಶುದ್ಧ ಅವಕಾಶವಾದಿತನವನ್ನು ಅನಾವರಣಗೊಳಿಸುತ್ತದೆ. ಮುಸ್ಲಿಮ್ ಲೀಗ್ ಜೊತೆಗಿನ ತಮ್ಮ ನಂಟು ಹಾಗೂ ಅವರ ಪಕ್ಷದ ಆಳವಾದ ಹಿಂದುತ್ವ ಸಿದ್ಧಾಂತದ ನಂಬಿಕೆಯ ಹೊರತಾಗಿಯೂ ಮುಸ್ಲಿಮರನ್ನು ಭಾರತೀಯ ನಾಗರಿಕರೆಂದು ಯಾವತ್ತೂ ಪರಿಗಣಿಸಲಿಲ್ಲ. ಆದಾಗ್ಯೂ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್‌ ಎರಡೂ ಅನೇಕ ಸಾಮ್ಯತೆಗಳನ್ನು ಹೊಂದಿದ್ದವು. ಎರಡೂ ಪಕ್ಷಗಳು ಬ್ರಿಟಿಷ್ ವಸಾಹತುಶಾಹಿ ಸರಕಾರದ ವಿರುದ್ದ ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆಯನ್ನು ನೀಡಲಿಲ್ಲ ಎನ್ನುತ್ತಾರೆ ಲೇಖಕರು.

ಇದನ್ನೂ ಓದಿ ಮೋದಿ ಸರ್ಕಾರದ ಮುಖ್ಯ ಧ್ಯೇಯ, ಮನುವಾದದ ವಿಸ್ತಾರ ಮತ್ತು ವಿಕಾಸ
ಇದನ್ನೂ ಓದಿ ಸಾವರ್ಕರ್‌ ಹಿಂದುತ್ವವಾದಿ ಹಾಗೂ ಹಿಂದೂ ವಿರೋಧಿ

ಆ ಎರಡೂ ಕೋಮುವಾದಿ ಪಕ್ಷಗಳು ಭಾರತ ಅಖಂಡವಾಗಿ ಉಳಿಯುವುದನ್ನು ವಿರೋಧಿಸುತ್ತಿದ್ದವು. 1943ರಲ್ಲಿ ಸಿಂಧ್ ಅಸೆಂಬ್ಲಿಯಲ್ಲಿ ಮುಸ್ಲಿಮ್ ಲೀಗ್ ಪಕ್ಷವು ಭಾರತವನ್ನು ವಿಭಜಿಸಿ ಮುಸ್ಲಿಮರಿಗಾಗಿ ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರದ ಬೇಡಿಕೆಯ ನಿರ್ಣಯ ಅಂಗೀಕರಿಸಿದ ಆನಂತರವೂ ಹಿಂದೂ ಮಹಾಸಭಾ ಸರಕಾರದಲ್ಲಿ ಗಟ್ಟಿಯಾಗಿ ಮುಂದುವರೆದಿತ್ತು. ಏಕೆಂದರೆ, ಸಾವರ್ಕರ್ ದ್ವಿರಾಷ್ಟ್ರ ಸಿದ್ಧಾಂತವನ್ನು ಹದಿನಾರು ವರ್ಷಗಳ ಮೊದಲೇ ಪ್ರತಿಪಾದಿಸಿದ್ದರು ಎನ್ನುತ್ತಾರೆ ಕುಲಕರ್ಣಿ. ಆಶ್ಚರ್ಯದ ಸಂಗತಿ ಏನೆಂದರೆ, ಹಿಂದೂಗಳಿಗೆ ಭಾರತ ಮತ್ತು ಮುಸ್ಲಿಮರಿಗೆ ಪಾಕಿಸ್ತಾನವೆಂಬ ದ್ವಿರಾಷ್ಟ್ರ ಸಿದ್ಧಾಂತ ಮೊದಲು ಪ್ರತಿಪಾದಿಸಿದ್ದ ಸಾವರ್ಕರ್ ಅವರು ಅಂತಿಮವಾಗಿ ಭಾರತ ವಿಭಜನೆಗೊಂಡಾಗ ದೇಶ ವಿಭಜನೆಗೆ ಗಾಂಧಿ ಕಾರಣವೆಂದು ಆರೋಪಿಸಿದ್ದು. ಸಾವರ್ಕರ್ ಅವರ ಈ ಮಿತ್ಯಾರೋಪವು ಅವರ ಖಾಸಗಿ ಗೆಳೆಯ ನಾಥೂರಾಮ್ ಗೋಡ್ಸೆ ಸೇರಿದಂತೆ ಅನೇಕ ಹಿಂದೂ ಮೂಲಭೂತವಾದಿಗಳಲ್ಲಿ ಗಾಂಧೀಜಿ ವಿರುದ್ಧ ದ್ವೇಷದ ಕಿಡಿ ಹೊತ್ತಿಸಿ ಮುಂದೆ ಅದು ಗಾಂಧಿಯನ್ನು ಬಲಿಪಡೆಯಿತು. ಇಷ್ಟಾದ ಮೇಲೂ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ಸಾವರ್ಕರ್ ಒಬ್ಬ ದೇಶಭಕ್ತ, ರಾಷ್ಟ್ರೀಯವಾದಿ ಮತ್ತು ವೀರನಾಗಿ ಕಂಡರೆ ಅದು ಬಿಜೆಪಿಯ ದೃಷ್ಟಿದೋಷ ಅಥವಾ ಬೌದ್ಧಿಕ ದೋಷ ಅಥವಾ ಅದು ಅವರ ವಿಕೃತ ಸಿದ್ಧಾಂತವೆಂದೇ ಹೇಳಬೇಕಾಗುತ್ತದೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X