ನವೆಂಬರ್ 1ರಂದು ಕರಾಳ ದಿನಾಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಕಾರ್ಯಕರ್ತರು ಕರಾಳ ದಿನಾಚರಣೆ ಮಾಡಿಯೇ ಸಿದ್ಧ ಎಂಬ ನಿರ್ಣಯ ಕೈಗೊಂಡಿದ್ದಾರೆ.
ಬೆಳಗಾವಿ ನಗರದ ಮರಾಠಾ ಮಂದಿರದಲ್ಲಿ ಎಂಇಎಸ್ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ ನೇತೃತ್ವದಲ್ಲಿ ಸಮಿತಿಯ ಕೆಲವು ಮುಖಂಡರು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
“1956ರಲ್ಲಿ ತಾತ್ಕಾಲಿಕ ಕೇಂದ್ರ ಸರ್ಕಾರ ಮರಾಠಿ ಭಾಷಿಕರ ಮೇಲೆ ಮಾಡಿದ ಅನ್ಯಾಯದ ವಿರುದ್ಧ ಕಳೆದ 68 ವರ್ಷಗಳಿಂದ ಮಹಾರಾಷ್ಟ್ರ ಏಕೀಕರಣ ಸಮಿತಿಯು ಕರಾಳ ದಿನವನ್ನು ಆಚರಿಸಿ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುತ್ತ ಬಂದಿದೆ. ಈ ಬಾರಿಯೂ ಎಂಇಎಸ್ ತನ್ನ ಕರಾಳ ದಿನಾಚರಣೆಯನ್ನು ಆಚರಿಸಲಿದೆ. ಎಂಇಎಸ್‌ನ ಈ ನಿಷೇಧ ರ್‍ಯಾಲಿ ರಾಜ್ಯ ಸರ್ಕಾರದ ವಿರುದ್ಧವಲ್ಲದೇ ಕೇಂದ್ರ ಸರ್ಕಾರದ ವಿರುದ್ಧವಾಗಿದೆ” ಎಂದರು.
“ಒಕ್ಕೂಟ ವ್ಯವಸ್ಥೆಗೆ ಕರ್ನಾಟಕ ಸರ್ಕಾರ ಬೆಲೆ ಕೊಡುತ್ತಿಲ್ಲ. ಗಡಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಮುಂದುವರಿಸಿದೆ. ಗಡಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ ಗಡಿ ಭಾಗದ ಎರಡೂ ಕಡೆಯ ಜನರಿಗೆ ಸಮಾನ ಹಕ್ಕು, ಅವಕಾಶಗಳು ಇರುತ್ತವೆ. ಈ ದೃಷ್ಟಿಯಿಲ್ಲಿ ಕರಾಳ ದಿನಾಚರಣೆಗೆ ಅವಕಾಸ ಕೊಡಬೇಕು” ಎಂದು ಸಭೆಯಲ್ಲಿ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಹಕಾರಿ ಸಂಘಗಳು ₹5 ಲಕ್ಷದವರೆಗೆ ಶೂನ್ಯಬಡ್ಡಿ ಸಾಲ ನೀಡುವ ಬ್ಯಾಂಕ್‌ಗಳಾಗಿವೆ: ಸಚಿವ ಶಿವಾನಂದ ಪಾಟೀಲ
ಕರುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ ಈ ದಿನ.ಕಾಮ್ ಜೊತೆ ಮಾತನಾಡಿ, “ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿ ʼಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲʼವೆಂದು ತಿಳಿಸಿದ್ದಾರೆ. ಕನ್ನಡಪರ ಹೋರಾಟಗಾರರು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಒಂದು ವೇಳೆ ನಿಮ್ಮ ಮೀರಿ ಕರಾಳ ದಿನ ಆಚರಿಸಿದರೆ ತೀವ್ರ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಸಿದ್ದಾರೆ.