- ಅಪ್ಪನನ್ನು ಸಿಎಂ ಕುರ್ಚಿಯಲ್ಲಿ ನೋಡುವ ಆಸೆ ವ್ಯಕ್ತಪಡಿಸಿದ ಡಿಕೆಶಿ ಪುತ್ರಿ
- ಬಹುಮತ ಪಡೆದು ಕಾಂಗ್ರೆಸ್ ರಾಜ್ಯದ ಆಡಳಿತ ನಡೆಸುವಂತಾಗಲಿ ಎಂದ ಐಶ್ವರ್ಯ
ರಾಜ್ಯ ವಿಧಾನಸಭಾ ಚುನಾವಣಾ ರಣಕಣದ ಜಿದ್ದಾಜಿದ್ದಿನ ಹೋರಾಟಕ್ಕೆ ತೆರೆ ಬಿದ್ದಿದೆ. ನಾಡಿನ ಜನ ಮತ ಚಲಾಯಿಸಿ ತಮ್ಮ ಆಯ್ಕೆಯನ್ನು ಮತಪಟ್ಟಿಗೆಗೆ ಸೇರಿಸಿದ್ದಾರೆ.
ಈ ನಡುವೆ ಬಂದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದರ ಜೊತೆಗೆ ಅಧಿಕಾರಕ್ಕೇರುವ ಸಾಧ್ಯತೆ ದಟ್ಟವಾಗಿರುವುದು ಕಂಡುಬಂದಿದೆ.
ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆನ್ನುವ ವಿಚಾರ ಚರ್ಚೆ ಮುನ್ನೆಲೆಗೆ ಬಂದಿದೆ.
ಈ ಚರ್ಚೆ ನಿಧಾನಗತಿಯಲ್ಲಿ ಕಾವು ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಡಿಕೆಶಿ ಹೆಗಡೆ ತಮ್ಮ ತಂದೆ ವಿಚಾರದಲ್ಲೊಂದು ಸಂವೇದನಾತ್ಮಕ ಹೇಳಿಕೆ ನೀಡಿದ್ದಾರೆ.
ನಮ್ಮ ತಂದೆ ಹಾಗೂ ಚಿಕ್ಕಪ್ಪ ಇಬ್ಬರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಮುಂದೀಗ ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲಿದೆ. ಈ ಸನ್ನಿವೇಶ ನೋಡಿದರೆ ಅವರ ಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ದೇವರು ಆಶೀರ್ವದಿಸಿದರೆ ಜನರ ಇಚ್ಚೆಯಂತೆ ಅಪ್ಪ ಸಿಎಂ ಕುರ್ಚಿಯಲ್ಲಿ ಕೂರುವಂತಾಗಲಿ. ಹೀಗಾದಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯವನ್ನು ಅವರು ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ?:ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಎದುರಾಗಿ ಆಪರೇಷನ್ ಹಸ್ತ?
ರಾಷ್ಟ್ರೀಯ ಸುದ್ದಿ ವಾಹಿನಿ ಜೊತೆ ಮಾತನಾಡುವ ವೇಳೆ ತಮ್ಮ ಈ ಅಭಿಪ್ರಾಯವನ್ನು ಐಶ್ವರ್ಯ ಶಿವಕುಮಾರ್ ಹೆಗಡೆ ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದ್ದು, ರಾಜಕೀಯ ವಲಯದೊಳಗೆ ಸಣ್ಣ ಸಂಚಲನ ಮೂಡಿಸಿದೆ.
ಆದರೆ ಇದೇ ವಿಚಾರದಲ್ಲಿ ಮತದಾನದ ಹಿಂದಿನ ದಿನ ಮಾತನಾಡಿದ್ದ ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರದ ವೇಳೆ ತಮ್ಮನ್ನು ಸಿಎಂ ಮಾಡುವಂತೆ ಮತಭಿಕ್ಷೆ ಕೇಳಿದ್ದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಸಿಎಂ ಆಯ್ಕೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದಿದ್ದರು.
ಇಂದು (ಮೇ 11) ಚುನಾವಣಾ ಜವಾಬ್ಧಾರಿ ಕಳೆದ ಬಳಿಕ ವಿಶ್ರಾಂತಿ ಪಡೆದುಕೊಂಡಿದ್ದ ಡಿಕೆ ಸಹೋದರರು ತಮ್ಮ ಹುಟ್ಟೂರು ಕನಕಪುರ ದೊಡ್ಡಾಲನಹಳ್ಳಿಗೆ ತೆರಳಿ ತಾಯಿಯೊಂದಿಗೆ ಕೆಲಕಾಲ ಕಳೆದರು.