ಜನಪದ ವಿದ್ವಾಂಸರ ಪ್ರಕಾರ ಶ್ರೇಷ್ಠ, ಕನಿಷ್ಠ ಸಂಸ್ಕೃತಿ ಎಂಬುವುದಿಲ್ಲ. ಬಂಜಾರ ಸಂಸ್ಕೃತಿ ಮತ್ತು ಚಾರಿತ್ರಿಕ ಅಂಶಗಳ ಮೇಲೆ ಬೆಳಕು ಚೆಲ್ಲಬೇಕು. ಜಾನಪದ ಮತ್ತು ಮೌಖಿಕ ಪರಂಪರೆಯ ಪ್ರಕಾರ ಬಂಜಾರರ ಮೂಲ ಪುರುಷ ದಾದಾ ಮೌಲ ತ್ರೇತಾಯುಗದಲ್ಲಿ ಶ್ರೀ ಕೃಷ್ಣನ ಗೋವುಗಳನ್ನು ಪಾಲನೆ ಮಾಡುತ್ತಿದ್ದರೆಂದು ಉಲ್ಲೇಖಿಸುತ್ತ ಬಂಜಾರರ ಪರಂಪರೆ ಕ್ರಿ.ಪೂ.10 ನೇ ಶತಮಾನದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಡಾ. ಸಣ್ಣರಾಮ ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ಅಕ್ಟೋಬರ್ 14ರಂದು ಹಮ್ಮಿಕೊಂಡಿದ್ದ ಕಳತಾವೂರ್ ಮಳಾವ್ -02, ಸಜ್ಜನರ ಸಲ್ಲಾಪ -02, ಮೀನಾರೋ ಪಾಮಣೋ-ತಿಂಗಳ ಅಥಿತಿ ಸಮಾರಂಭದಲ್ಲಿ ಇಂದಿನ ತಿಂಗಳ ಅತಿಥಿಯಾಗಿ ಮಾತನಾಡಿದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ ಮಾತನಾಡಿ, “ಅಕಾಡೆಮಿಯು ಅತ್ಯಂತ ಕಡಿಮೆ ಅನುದಾನ ಹೊಂದಿದ್ದರೂ ನಿರಂತರವಾಗಿ ಸಂಸ್ಕೃತಿ ಮತ್ತು ಭಾಷೆಯ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಭಾರತದಲ್ಲಿನ ಸುಮಾರು 463 ಸಣ್ಣ ಮತ್ತು ಅತಿಸಣ್ಣ ಸಮುದಾಯಗಳಲ್ಲಿ ಬಂಜಾರರ ಕಲೆ ಸಂಸ್ಕೃತಿ ವೇಷಭೂಷಣಗಳ ಕೊಡುಗೆಯನ್ನು ನೀಡಿದ್ದಾರೆ. ಸಜ್ಜನರ ಸಲ್ಲಾಪ ಕಾರ್ಯಕ್ರಮವು ಬಂಜಾರರ ಮುಂದಿನ ಪೀಳಿಗೆಗೆ ಆದರ್ಶಪ್ರಾಯ. ಈ ಹಿನ್ನಲೆಯಲ್ಲಿ ಮೊದಲ ಅತಿಥಿಯಾಗಿ ನಾಡೋಜ ಹಂಪ ನಾಗರಾಜಯ್ಯ ಹಾಗೂ ಎರಡನೇ ಅತಿಥಿಯಾಗಿ ಡಾ. ಸಣ್ಣರಾಮರನ್ನು ಆಹ್ವಾನಿಸಿ ಅವರ ಬದುಕು ಬರಹ ಮತ್ತು ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ : ವಿ.ಸೋಮಣ್ಣ
ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸೂರಪ್ಪ ನಾಯಕ ಮಾತನಾಡಿ, “ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಬೀದರ್‌ನಿಂದ ಚಾಮರಾಜನಗರದವರೆಗೆ ಪರಿಚಯಿಸುವಲ್ಲಿ ಅದ್ಯಕ್ಷ ಡಾ. ಎ ಆರ್ ಗೋವಿಂದಸ್ವಾಮಿ ಕೊಡುಗೆ ಅಪಾರ. ಹಾಗೆಯೇ ಬಂಜಾರರ ಇತಿಹಾಸವು ಬೌದ್ಧ ಧರ್ಮದ ಕಾಲದಲ್ಲಿ ಒಂದು ವ್ಯಾಪಾರಿ ಸಮುದಾಯ. ಬೌದ್ಧ ಧರ್ಮದ ಜನರಿಗೆ ದವಸ ಧಾನ್ಯಗಳನ್ನು ಲಕ್ಷಾಂತರ ಎತ್ತುಗಳ ಮೇಲೆ ಸಾಗಿಸುತ್ತಿದ್ದರು” ಎಂದರು.
ಸರಂಗಿ ಉಮಾ ನಾಯಕ್, ನಾಗರಾಜ ನಾಯ್ಕ್ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.
