ತುಮಕೂರು ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಂದು ನವದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 69ರ ಶಿರಾ, ಮಧುಗಿರಿ, ಭೈರನಹಳ್ಳಿ ವಿಭಾಗದ 52 ಕಿಮೀ. ಚತುಷ್ಪಥ ರಸ್ತೆ ಅಭಿವೃದ್ಧಿಗೆ 2024-25ರ ಆಯವ್ಯಯದಲ್ಲಿ 1000 ಕೋಟಿ ರೂ. ಮೀಸಲಿಟ್ಟಿದ್ದು, ಈ ರಸ್ತೆ ಕಾಮಗಾರಿ ಅನುಮೋದನೆಗೆ ಸಹಕರಿಸಿದ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಮತ್ತು ಕೇಂದ್ರ ಸರ್ಕಾರಕ್ಕೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ತುಮಕೂರು-ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 206ರ ತಮಕೂರು ನಗರ ಹಾಗೂ ಮಲ್ಲಸಂದ್ರ ಭಾಗದಲ್ಲಿ ಬೈಪಾಸ್ ನಿರ್ಮಾಣ ಮಾಡುವುದರಿಂದ ಸಾರಿಗೆ ದಟ್ಟಣೆ ಹಾಗೂ ಅಪಘಾತಗಳು ಕಡಿಮೆ ಮಾಡಬಹುದಾಗಿದೆ. ಜಿಲ್ಲೆಯು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ತುಮಕೂರು ಜಿಲ್ಲೆಯ ಹೆದ್ದಾರಿಗಳ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದು ಕೇಂದ್ರ ಮಂತ್ರಿಗಳಿಗೆ ತಿಳಿಸಿದರಲ್ಲದೆ. ರಾಷ್ಟ್ರೀಯ ಹೆದ್ದಾರಿ 206ರ ತುಮಕೂರು ನಗರದಲ್ಲಿ 12.30 ಕಿಮೀ ಮತ್ತು ಗುಬ್ಬಿ ನಗರದಲ್ಲಿ 8.5 ಕಿಮೀ ಚತುಷ್ಪಥ ರಸ್ತೆ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.