ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡುರ ತಾಂಡದ ಸಮೀಪ ಬಂಡೆಕಲ್ಲು ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಗಾಯಗೊಂಡಿದ್ದ ಯುವಕ ಕೂಡ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ರಘು(23) ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ. ಆ ಮೂಲಕ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಮಕ್ಕಳಾದ ಮಂಜುನಾಥ(9), ವೈಶಾಲಿ (7) ಸ್ಥಳದಲ್ಲೇ ಮೃತಪಟ್ಟಿದ್ದರು.
ಹೊಲವನ್ನು ಸ್ವಚ್ಛಗೊಳಿಸಿ ಕಲ್ಲುಗಳನ್ನು ಒಂದರ ಮೇಲೊಂದು ಬದಿಗಿಡಲಾಗಿತ್ತು. ಅದರ ಮೇಲೆ ಮಕ್ಕಳು ಕುಳಿತುಕೊಂಡಿದ್ದರು. ಮಳೆ ಬಂದ ಕಾರಣ ಕಲ್ಲು ಉರುಳಿ ಮೂವರ ಮೇಲೆ ಉರುಳಿ ಬಿದ್ದಿದೆ. ಸ್ಥಳದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು.

ಗಂಭೀರ ಗಾಯಗೊಂಡಿದ್ದ ರಘುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ನಿವಾಸಿ ಮಾಹಿತಿ ನೀಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನು ಓದಿದ್ದೀರಾ? ರಾಯಚೂರು | ಉರುಳಿಬಿದ್ದ ಬಂಡೆಕಲ್ಲು: ಇಬ್ಬರು ಮಕ್ಕಳ ದಾರುಣ ಸಾವು
ಯುವಕ ರಘು ಭಾರತೀಯ ಸೇನೆಯಲ್ಲಿ ಸೇವೆ ಮಾಡಬೇಕು ಎಂದು ಗುರಿ ಹೊಂದಿದ್ದ. ಅದಕ್ಕಾಗಿ ಹಗಲು ರಾತ್ರಿ ದೈಹಿಕ ಸದೃಢತೆಗಾಗಿ ಪರಿಶ್ರಮಪಟ್ಟಿದ್ದ. ಭಾರತೀಯ ಸೇನೆಯ ತರಬೇತಿಗೆ ಆಯ್ಕೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಆದೇಶದ ಪ್ರತಿ ಬರಬೇಕಿತ್ತು. ಅದಕ್ಕೂ ಮುನ್ನವೇ ಬಂಡೆಕಲ್ಲು ಆತನ ಪ್ರಾಣವನ್ನೇ ಕಸಿದುಬಿಟ್ಟಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

