“ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಭಾರಿ ಪ್ರಮಾಣದ (65 ಎಂಎಂ) ಮಳೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ನಿಯಂತ್ರಣ ಕೊಠಡಿ ಹಾಗೂ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಕಾರ್ಯೋನ್ಮುಖರಾಗಿರಲು ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆಯಲ್ಲಿ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
“ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ನಾಲ್ಕು ದಿನಗಳ ಕಾಲ ಅನಿರೀಕ್ಷಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ವರದಿ ಬಂದಿದೆ. ಈ ವಿಚಾರವಾಗಿ ನಾವು ಎಚ್ಚರಿಕೆ ವಹಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ” ಎಂದು ತಿಳಿಸಿದರು.
“ಬೆಂಗಳೂರಿನಲ್ಲಿ ಸರಾಸರಿ 5 ಎಂಎಂನಷ್ಟು ಮಳೆಯಾಗುತ್ತದೆ. ಆದರೆ ಇಂದು ಶೇ 28%ರಷ್ಟು ಮಳೆ ಹೆಚ್ಚಾಗಿ ಸುರಿದಿದೆ. ಮಂಗಳವಾರ ಸುರಿದ ಮಳೆಗೆ 142 ಸ್ಥಳಗಳಿಂದ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ದೂರು ಬಂದಿದೆ. 30 ಮರಗಳು ಬಿದ್ದಿದ್ದು, 22 ಕಡೆಗಳಲ್ಲಿ ಮರ ತೆರವುಗೊಳಿಸಿದ್ದೇವೆ. 32 ಕಡೆಗಳಲ್ಲಿ ಮರದ ರೆಂಬೆ ಕೊಂಬೆ ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಈ ಪೈಕಿ 27 ಕಡೆಗಳಲ್ಲಿ ತಕ್ಷಣವೇ ತೆರವುಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ಯಲಹಂಕ, ಪಶ್ಚಿಮ ಮತ್ತು ಪೂರ್ವ ವಲಯದಲ್ಲಿ ಗರಿಷ್ಠ ಮಳೆಯಾಗಿದೆ. ಮಹದೇವಪುರ, ಆರ್ ಆರ್ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ ಮಧ್ಯಮ ಪ್ರಮಾಣದ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಮಳೆ ಸುರಿಯಲಿದ್ದು, ನಾಗರಿಕರು ಜಾಗೃತರಾಗಿರಬೇಕು. ಕಾಲುವೆಗಳಲ್ಲಿ ನೀರು ಹರಿಯುವ ಪ್ರಮಾಣ ಪರೀಕ್ಷಿಸಿದ್ದೇನೆ. ಸಂಪೂರ್ಣ ಪರಿಸ್ಥಿತಿಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾಗುವುದು” ಎಂದು ತಿಳಿಸಿದರು.
“ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ತೊಂದರೆ ಎದುರಿಸಿದರೆ ಟೋಲ್ ಫ್ರೀ ಸಹಾಯವಾಣಿ 1533ಕ್ಕೆ ಕರೆ ಮಾಡಬಹುದು. ಇನ್ನು ವಲಯವಾರು ಸಹಾಯವಾಣಿಯನ್ನು ಬಿಡುಗಡೆ ಮಾಡಲಾಗಿದೆ. ಅನಿರೀಕ್ಷಿತ ಮಳೆಗೆ ಬೆಂಗಳೂರು ಸಿಲುಕಿರುವುದರಿಂದ ಬಿಬಿಎಂಪಿ ನಿಯಂತ್ರಕ ಕೊಠಡಿಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡುತ್ತಿದ್ದೇನೆ” ಎಂದು ತಿಳಿಸಿದರು.
ಕೆಲವು ಪ್ರದೇಶಗಳು ಜಲಾವೃತವಾಗಲು ಕಾರಣವೇನು ಎಂಬ ಪ್ರಶ್ನೆಗೆ, “ಕೆಲವು ತಗ್ಗು ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಿದ್ದು, ಪ್ರತಿ ವರ್ಷ ಈ ಪ್ರದೇಶಗಳಲ್ಲಿ ನಾವು ಮುಂಜಾಗ್ರತಾ ಕ್ರಮ ವಹಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುತ್ತೇವೆ” ಎಂದು ತಿಳಿಸಿದರು.
ಕೆಲವು ಬಡಾವಣೆಗಳಲ್ಲಿ ಪ್ರತಿ ವರ್ಷ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಇದಕ್ಕೆ ಪರಿಹಾರವಿಲ್ಲವೇ ಎಂದು ಕೇಳಿದಾಗ, “ಪರಿಹಾರವಿದೆ. ಅದಕ್ಕೆ ಪೂರಕವಾಗಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ರಾಜಕಾಲುವೆಗಳನ್ನು ದೊಡ್ಡ ಮಟ್ಟದಲ್ಲಿ ಸರಿ ಮಾಡುವ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ತಿಳಿಸಿದರು.
ಕಳೆದ ಸರ್ಕಾರ ಅವಧಿಯಲ್ಲಿ ಇದ್ದ ಪರಿಸ್ಥಿತಿ ಈಗಲೂ ಮುಂದುವರಿದಿದೆಯಲ್ಲವೇ ಎಂದು ಕೇಳಿದಾಗ, “ನಾವು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಅನಿರೀಕ್ಷಿತವಾಗಿ 65 ಎಂಎಂ ಮಳೆಯಾದರೂ ಕೇವಲ 142 ಕಡೆಗಳಲ್ಲಿ ಮಾತ್ರ ಮನೆಗೆ ನೀರು ನುಗ್ಗಿವೆ” ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಮಳೆನೀರು ಹರಿಯುವ ಕಾಲುವೆಗಳಲ್ಲಿ ಸೇರಿರುವ ಕಸ ತೆಗೆಯಲು ಕಾರ್ಯಕ್ರಮ ರೂಪಿಸಲಾಗುವುದು. ಹಂತಹಂತವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳು ತಳ್ಳುವಗಾಡಿಗಳ ಮೂಲಕ ವ್ಯಾಪಾರ ಮಾಡುವಂತೆ ಸಮೀಕ್ಷೆ ಮಾಡುತ್ತಿದ್ದೇವೆ. ಕೆಲವರು ಅಲ್ಲೇ ಕಸ ಬಿಟ್ಟು ಹೋಗುತ್ತಾರೆ. ಅವುಗಳಿಂದ ಮೋರಿ ಬ್ಲಾಕ್ ಆಗಿ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ನಾವು ಗಮನಿಸಿದ್ದೇವೆ ಎಂದು ತಿಳಿಸಿದರು.
ನಾಗರಿಕರು ಮನೆ ಕಟ್ಟುವಾಗ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುತ್ತಿಲ್ಲ ಎಂದು ಕೇಳಿದಾಗ, “ಮನೆ ಯೋಜನೆಗೆ ಅನುಮತಿ ನೀಡುವಾಗ ಕಡ್ಡಾಯ ಮಾಡುತ್ತೇವೆ. ಆದರೆ ಮನೆ ಮಾಲೀಕರು ಅದನ್ನು ಜಾರಿ ಮಾಡುತ್ತಿಲ್ಲ. ಮಳೆ ನೀರು ಕೊಯ್ಲು ಮಾಡಿರುವ ಉದ್ದೇಶ ಅಂತರ್ಜಲ ಹೆಚ್ಚಳ ಮಾಡಬೇಕು ಎಂಬ ಉದ್ದೇಶದಿಂದ. ಆ ನೀರನ್ನು ಗಿಡಗಳಿಗೆ, ಬೇರೆ ಉಪಯೋಗಕ್ಕೆಬಳಸಿಕೊಳ್ಳಬೇಕು. ಈ ವಿಚಾರವಾಗಿ ಮುಂದೆ ದೊಡ್ಡ ಅಭಿಯಾನ ಮಾಡುತ್ತೇವೆ” ಎಂದು ತಿಳಿಸಿದರು.
ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳು ನಿಯಮ ಪಾಲನೆಯಾಗುತ್ತಿವೆಯೇ ಎಂದು ಯಾವುದೇ ಪರಿಶೀಲನೆ ನಡೆಯುತ್ತಿಲ್ಲ ಎಂದು ಕೇಳಿದಾಗ, “ಇದಕ್ಕಾಗಿಯೇ ನಾವು ನಂಬಿಕೆ ನಕ್ಷೆ ಎಂಬ ಕಾರ್ಯಕ್ರಮ ರೂಪಿಸಿದ್ದು, ಇಂಜಿನಿಯರ್ ಗಳೇ ಈ ಯೋಜನೆಗಳನ್ನು ಪರಿಶೀಲಿಸಿ ಅನುಮತಿ ನೀಡಬಹುದು” ಎಂದು ತಿಳಿಸಿದರು.
“ಬೆಂಗಳೂರಿನ ಪಾಲಿಗೆ ಬುಧವಾರ (ಅಕ್ಟೋಬರ್ 16, 2024) ಅತ್ಯಂತ ಶುಭದಿನ. 50 ಲಕ್ಷ ನಾಗರಿಕರಿಗೆ ಕುಡಿಯಲು ಕಾವೇರಿ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಸುಮಾರು 5 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆ ನಿರ್ಮಾಣ ಮಾಡಲಾಗಿದ್ದು, ತೊರೆಕಾಡನಹಳ್ಳಿಯಲ್ಲಿ ನಾನು ಹಾಗೂ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಶಾಸಕರುಗಳು ಕೂಡ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
