ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿ ಮಸೀದಿ ಮುಂದೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಇಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ಸಂಬಂಧ ಪುತ್ತೂರಿನ ಬಿಳಿನೆಲೆಯ ಕೀರ್ತನ್ ಕುಮಾರ್ (28) ಮತ್ತು ಎನ್.ಎಂ.ಸಚಿನ್ ಕುಮಾರ್ (26) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಹಿಂದೂ, ಮುಸಲ್ಮಾನರು ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ ಎಂದು ಸ್ವತಃ ದೂರುದಾರರೇ ಹೇಳಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ 1860ರ (ಐಪಿಸಿ) ಕಲಂ 295ಎ (ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ನ್ಯಾಯಪೀಠ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರಿಗೆ-ಸರ್ಕಾರಕ್ಕೆ ಸವಾಲಾಗಿರುವ ಸೈಬರ್ ಕ್ರೈಮ್
ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಈ ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ವಾಗುತ್ತದೆ’ ಎಂದಿದೆ.
ಅರ್ಜಿದಾರರ ಪರ ವಕೀಲ ಬಿ ಎಸ್ ಸಚಿನ್ ಅವರು “ಅರ್ಜಿದಾರರ ವಿರುದ್ಧದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದದ್ದು, ಮಸೀದಿಯೂ ಸಾರ್ವಜನಿಕ ಸ್ಥಳವಾಗಿದ್ದು ಅದನ್ನು ಪ್ರವೇಶಿಸಿದ ಮಾತ್ರಕ್ಕೆ ಅತಿಕ್ರಮಣ ಮಾಡಿದ್ದಾರೆ ಎಂದು ಆಪಾದನೆ ಮಾಡುವುದು ಒಪ್ಪುವಂತದಲ್ಲ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದರು.
ಸರ್ಕಾರದ ಪರ ವಾದಿಸಿದ ವಕೀಲೆ ಸೌಮ್ಯಾ ಅವರು “ಪ್ರಕರಣದಲ್ಲಿ ತನಿಖೆಯ ಅಗತ್ಯವಿದೆ. ಹಾಗಾಗಿ ಆರೋಪಿಗಳ ಮನವಿಯನ್ನು ತಿರಸ್ಕರಿಸಬೇಕು” ಎಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕು ಐತ್ತೂರು ಗ್ರಾಮದ ಮರ್ಧಾಳ ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯ ಆವರಣಕ್ಕೆ ಸೆಪ್ಟೆಂಬರ್ 24 ರಂದು ರಾತ್ರಿ ಸುಮಾರು 10.50 ರ ಸಮಯಕ್ಕೆ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದು, ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆ ಎಂದು ಆರೋಪಿಸಿ ಮಸೀದಿ ಸಿಬ್ಬಂದಿಗಳು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಆರೋಪಿಗಳಿಬ್ಬರ ವಿರುದ್ಧ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ), 505 (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), 34 (ಸಾಮಾನ್ಯ ಉದ್ದೇಶ) ಮತ್ತು 295 ಎ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.
